ಪ್ಯಾರಿಸ್: ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲೊಸ್ ಅಲ್ಕರಾಜ್ ಅವರ ಸವಾಲನ್ನು ಮೀರಿನಿಂತ, ಸರ್ಬಿಯದ ನೊವಾಕ್ ಜೊಕೊವಿಚ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು.
ಫಿಲಿಪ್ ಶಾಟ್ರಿಯೆರ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಜೊಕೊವಿಚ್ 6–3, 5–7, 6–1, 6–1 ರಲ್ಲಿ ಸ್ಪೇನ್‌ನ ಆಟಗಾರನನ್ನು ಮಣಿಸಿದರು. ಈ ಮೂಲಕ ದಾಖಲೆಯ 23ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಮುಂದಿಟ್ಟರು.
3 ಗಂಟೆ 23 ನಿಮಿಷ ನಡೆದ ಹಣಾಹಣಿಯಲ್ಲಿ ಜೊಕೊವಿಚ್ ಅವರ ಅನುಭವದ ಆಟಕ್ಕೆ ಸಾಟಿಯಾಗಲು ಅಲ್ಕರಾಜ್ ವಿಫಲರಾದರು. ಮೊದಲ ಸೆಟ್‌ಅನ್ನು ಗೆದ್ದ ಸರ್ಬಿಯದ ಅಟಗಾರ ಉತ್ತಮ ಆರಂಭ ಪಡೆದರು. ಆದರೆ ಎರಡನೇ ಸೆಟ್ ತಮ್ಮದಾಗಿಸಿದ ಅಲ್ಕರಾಜ್ ತಿರುಗೇಟು ನೀಡಿದರು.
ಮೂರನೇ ಸೆಟ್ 1–1 ರಲ್ಲಿ ಸಮಬಲದಲ್ಲಿ ಇದ್ದಾಗ ಅಲ್ಕರಾಜ್ ಸ್ನಾಯು ಸೆಳೆತಕ್ಕೆ ಒಳಗಾದರು. ಆ ಬಳಿಕ ಅವರು ಆಟದ ಮೇಲಿನ ಲಯ ಕಳೆದುಕೊಂಡರು. ಜೊಕೊವಿಚ್ ಅವರು ಎದುರಾಳಿಗೆ ಕೇವಲ ಎರಡು ಗೇಮ್ ಬಿಟ್ಟುಕೊಟ್ಟು ಮೂರು ಹಾಗೂ ನಾಲ್ಕನೇ ಸೆಟ್ ಗೆದ್ದುಕೊಂಡು ಪ್ರಶಸ್ತಿ ಸುತ್ತು ತಲುಪಿದರು.
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಜೊಕೊವಿಚ್ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅಥವಾ ನಾರ್ವೆಯ ಕ್ಯಾಸ್ಪರ್ ರೂಡ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ಇಗಾ– ಮುಕೋವಾ ಸೆಣಸು: ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅಗ್ರಶ್ರೇಯಾಂಕದ ಆಟಗಾರ್ತಿ ಪೋಲೆಂಡ್‌ನ ಇಗಾ ಶ್ವಾಂಟೆಕ್ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಶನಿವಾರ ಜೆಕ್ ರಿಪಬ್ಲಿಕ್‌ನ ಕರೋಲಿನಾ ಮುಕೋವಾ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.
2020 ಮತ್ತು 2022 ರಲ್ಲಿ ರೋಲಂಡ್ ಗ್ಯಾರೋಸ್‌ನಲ್ಲಿ ಚಾಂಪಿಯನ್ ಆಗಿದ್ದ ಇಗಾ, ನಾಲ್ಕು ವರ್ಷಗಳ ಅವಧಿಯಲ್ಲಿ ಇಲ್ಲಿ ಮೂರನೇ ಕಿರೀಟ ಮುಡಿಗೇರಿಸುವ ವಿಶ್ವಾಸದಲ್ಲಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾದರೆ, ಇಲ್ಲಿ ಮೂರು ಪ್ರಶಸ್ತಿ ಗೆದ್ದಿರುವ ಸೆರೆನಾ ವಿಲಿಯಮ್ಸ್ ಮತ್ತು ಮೋನಿಕಾ ಸೆಲೆಸ್ ಅವರ ಸಾಲಿಗೆ ಸೇರಲಿದ್ದಾರೆ.
ಗಾಯದ ಸಮಸ್ಯೆಯಿಂದ ವೃತ್ತಿಜೀವನದಲ್ಲಿ ಹಲವು ಸಲ ಹಿನ್ನಡೆ ಅನುಭವಿಸಿದ್ದ 26 ವರ್ಷದ ಮುಕೋವಾ ಅವರು ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಫೈನಲ್ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.