ನವದೆಹಲಿ: ‘ಏಷ್ಯನ್ ಗೇಮ್ಸ್‌ನಲ್ಲಿ ಯೋಗ ಸೇರ್ಪಡೆಗೆ ಏಷ್ಯಾ ಒಲಿಂಪಿಕ್ ಕೌನ್ಸಿಲ್ ಕಾರ್ಯಕಾರಿ ಮಂಡಳಿ (ಒಸಿಎ) ಒಪ್ಪಿಗೆ ಸೂಚಿಸಿದೆ. ಇದು ಯೋಗದ ಸೇರ್ಪಡೆಗೆ ದಾರಿಯಾಗಲಿದೆ’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ತಿಳಿಸಿದ್ದಾರೆ.
ಕಾರ್ಯಕಾರಿ ಮಂಡಳಿಯ ನಿರ್ಧಾರದ ಕುರಿತು ಒಸಿಎ ಕಾರ್ಯಾಧ್ಯಕ್ಷ ರಣಧೀರ್ ಸಿಂಗ್ ಮಾಹಿತಿ ನೀಡಿದ್ದಾರೆಂದು ಪಿ.ಟಿ.ಉಷಾ ತಿಳಿಸಿದ್ದಾರೆ.
‘ಏಷ್ಯನ್ ಗೇಮ್ಸ್‌ನ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಯೋಗದ ಸೇರ್ಪಡೆಗೆ ಅವರ ನಿರಂತರ ಬೆಂಬಲಕ್ಕೆ ಧನ್ಯವಾದ’ ಎಂದೂ ಅವರು ಹೇಳಿದ್ದಾರೆ.
ಯೋಗಕ್ಕೆ ಅರ್ಹವಾದ ಮಾನ್ಯತೆ ನೀಡುವಂತೆ ಕೋರಿದ್ದ ಭಾರತ ಮನವಿಗೆ ಒಸಿಎ ಕಾರ್ಯಕಾರಿ ಮಂಡಳಿ ಸ್ಪಂದಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಪ್ರಸ್ತಾವನೆಯು ದೃಢೀಕರಣಕ್ಕಾಗಿ ಕ್ರೀಡಾ ಸಮಿತಿ ಮೂಲಕ ಸಾಮಾನ್ಯ ಸಭೆಗೆ ಹೋಗಲಿದೆ ಎಂದು ಅವರು ಹೇಳಿದ್ದಾರೆ.
ಯೋಗವು ಪ್ರದರ್ಶನ ಕ್ರೀಡೆ ಅಥವಾ ಪದಕ ವಿಭಾಗದ ಕ್ರೀಡೆಯಾಗಿರಲಿದೆಯೋ ಎಂಬುದು ಒಸಿಎ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಿದೆ. ಇದು ಮೊದಲ ಹೆಜ್ಜೆಯಾಗಿದೆ. ವಿಶ್ವದಾದ್ಯಂತ ಪ್ರಚಲಿತದಲ್ಲಿರುವ ಯೋಗ ಪದಕ ಕ್ರೀಡೆಯಾಗಲಿಯೆಂದು ಐಒಎ ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸಾಮೂಹಿಕ ಪ್ರಯತ್ನದಿಂದ ಸಾಧಿಸಿದ್ದೇವೆ. ದೊಡ್ಡಮಟ್ಟದ ಕ್ರೀಡಾಕೂಟಗಳಲ್ಲಿ ಯೋಗವನ್ನು ಸೇರಿಸುವ ಭಾರತದ ಪ್ರಯತ್ನ ಸಫಲವಾಗುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ಉಷಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.