ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಅಥ್ಲೀಟ್ ಅವಿನಾಶ್ ಸಬ್ಳೆ ಅವರು ಹಾಫ್ ಮ್ಯಾರಥಾನ್‌ನಲ್ಲಿ ಭಾನುವಾರ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ದೆಹಲಿ ಹಾಫ್ ಮ್ಯಾರಥಾನ್‌ನಲ್ಲಿ ಅವರು 1 ತಾಸು 30 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಭಾರತದ ಎಲೀಟ್ ಓಟಗಾರರ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.
26 ವರ್ಷದ ಸಬ್ಳೆ, ಕಳೆದ ವರ್ಷ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 3,000 ಮೀಟರ್ ಸ್ಟೀಪಲ್‌ಚೇಸ್ ವಿಭಾಗದಲ್ಲಿ ಸ್ಪರ್ಧಿಸಿ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದ್ದರು.
ಇಲ್ಲಿ 61 ನಿಮಿಷದೊಳಗೆ ಗುರಿ ತಲುಪುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಶ್ರೇಯ ಅವರದಾಯಿತು. ಭಾರತದ ಎಲೀಟ್ ಓಟಗಾರರ ವಿಭಾಗದಲ್ಲಿ ಶ್ರೀನು ಬುಗಥಾ (1 ತಾಸು 4 ನಿ. 16 ಸೆ.) ಹಾಗೂ ದುರ್ಗಾ ಬಹಾದ್ದೂರ್ ಬುದ್ಧ (1:04:19) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.
ಹಾಫ್ ಮ್ಯಾರಥಾನ್‌ನಲ್ಲಿ ಮಹಾರಾಷ್ಟ್ರದ ಸಬ್ಳೆ, ಒಟ್ಟಾರೆ 10ನೇ ಸ್ಥಾನ ತಮ್ಮದಾಗಿಸಿಕೊಂಡರು. ಇಥಿಯೋಪಿಯಾದ ಅಮೆದೆವೊರ್ಕ್ ವಾಲೆಲೆನ್ (58 ನಿ. 53 ಸೆ.) ಚಿನ್ನದ ಪದಕ ಗೆದ್ದರು.
ಭಾರತ ಅಥ್ಲೆಟಿಕ್ಸ್ ಫೆಡರೇಷನ್ ದಾಖಲೆಗಳ ಪ್ರಕಾರ, ಹಾಫ್ ಮ್ಯಾರಥಾನ್‌ನಲ್ಲಿ ರಾಷ್ಟ್ರೀಯ ದಾಖಲೆ ಈ ಮೊದಲು ಮಹಾರಾಷ್ಟ್ರದ ಕಾಳಿದಾಸ ಹಿರವೆ (1:03:46) ಅವರ ಹೆಸರಿನಲ್ಲಿತ್ತು.
’ದೆಹಲಿ ಹಾಫ್ ಮ್ಯಾರಥಾನ್‌ಅನ್ನು ಸೂಕ್ತ ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ ಆಯೋಜಿಸಿದ್ದು ಖುಷಿ ತಂದಿದೆ. ರಾಷ್ಟ್ರೀಯ ದಾಖಲೆ ಸ್ಥಾಪಿಸಿರುವ ಅವಿನಾಶ್ ಹಾಗೂ ಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು‘ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
2018ರ ದೆಹಲಿ ಹಾಫ್ ಮ್ಯಾರಥಾನ್‌ನಲ್ಲಿ ಸಬ್ಳೆ ಎರಡನೇ ಸ್ಥಾನ ಗಳಿಸಿದ್ದರು.
ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿರುವ ಸಬ್ಳೆ, ಹೋದ ವರ್ಷ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 3,000 ಸ್ಟೀಪಲ್‌ಚೇಸ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.