ADVERTISEMENT

ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್ ಟೂರ್ನಿ: ಫೈನಲ್‌ ಪ್ರವೇಶಿಸಿದ ವಿಕಾಸ್‌

ಅಮಿತ್‌, ಲವ್ಲಿನಾಗೆ ಕಂಚು

ಪಿಟಿಐ
Published 10 ಮಾರ್ಚ್ 2020, 19:35 IST
Last Updated 10 ಮಾರ್ಚ್ 2020, 19:35 IST
ಭಾರತದ ವಿಕಾಸ್‌ ಕೃಷ್ಣನ್‌ (ಕೆಂಪು ಪೋಷಾಕು) ಅವರು ಕಜಕಸ್ತಾನದ ಅಬ್ಲೈಖಾನ್‌ ಜುಸ್ಸುಪೊವ್‌ ಮುಖಕ್ಕೆ ಪಂಚ್‌ ಮಾಡಿದರು –ಪಿಟಿಐ ಚಿತ್ರ
ಭಾರತದ ವಿಕಾಸ್‌ ಕೃಷ್ಣನ್‌ (ಕೆಂಪು ಪೋಷಾಕು) ಅವರು ಕಜಕಸ್ತಾನದ ಅಬ್ಲೈಖಾನ್‌ ಜುಸ್ಸುಪೊವ್‌ ಮುಖಕ್ಕೆ ಪಂಚ್‌ ಮಾಡಿದರು –ಪಿಟಿಐ ಚಿತ್ರ   

ಅಮಾನ್‌, ಜೋರ್ಡಾನ್‌: ಮಿಂಚಿನ ಪಂಚ್‌ಗಳ ಮೂಲಕ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿದ ಭಾರತದ ವಿಕಾಸ್‌ ಕೃಷ್ಣನ್‌ ಮತ್ತು ಸಿಮ್ರನ್‌ಜಿತ್‌ ಕೌರ್‌ ಅವರು ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಎಂ.ಸಿ. ಮೇರಿ ಕೋಮ್‌, ಅಮಿತ್‌ ಪಂಗಲ್‌, ಪೂಜಾ ರಾಣಿ ಮತ್ತು ಲವ್ಲಿನಾ ಬೊರ್ಗೊಹೆನ್‌ ಅವರು ಕಂಚಿನ ಪದಕಗಳೊಂದಿಗೆ ಅಭಿಯಾನ ಮುಗಿಸಿ ದ್ದಾರೆ. ಈ ಆರು ಮಂದಿ ಬಾಕ್ಸರ್‌ಗಳು ಇಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು.

ಮಂಗಳವಾರ ನಡೆದ ಪುರುಷರ 69 ಕೆ.ಜಿ.ವಿಭಾಗದ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ವಿಕಾಸ್‌, ಎರಡನೇ ಶ್ರೇಯಾಂಕದ ಬಾಕ್ಸರ್‌ ಅಬ್ಲೈಖಾನ್‌ ಜುಸ್ಸುಪೊವ್‌ಗೆ ಆಘಾತ ನೀಡಿದರು.

ADVERTISEMENT

ಕಜಕಸ್ತಾನದ ಜುಸ್ಸುಪೊವ್‌ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಜಯಿಸಿದ್ದರು. ಹೀಗಾಗಿ ಭಾರತದ 28 ವರ್ಷ ವಯಸ್ಸಿನ ಬಾಕ್ಸರ್‌, ಮೊದಲ ಮೂರು ನಿಮಿಷಗಳಲ್ಲಿ ಎಚ್ಚರಿಕೆಯಿಂದ ಸೆಣಸಿದರು.

ಎರಡನೇ ಸುತ್ತಿನಲ್ಲಿ ವಿಕಾಸ್‌, ಆಕ್ರಮಣಕಾರಿ ತಂತ್ರಕ್ಕೆ ಒತ್ತು ನೀಡಿದರು. ಎದುರಾಳಿಯ ತಲೆ ಹಾಗೂ ದವಡೆಗೆ ರಭಸದ ಪಂಚ್‌ಗಳನ್ನು ಮಾಡಿ ಪಾಯಿಂಟ್ಸ್‌ ಕಲೆಹಾಕಿದರು. ಪಂದ್ಯದ ವೇಳೆ ಎಡ ಹುಬ್ಬಿಗೆ ಪೆಟ್ಟಾದರೂ ಎದೆಗುಂದದ ವಿಕಾಸ್‌, ಛಲದಿಂದ ಹೋರಾಡಿ ಗಮನ ಸೆಳೆದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ವಿಕಾಸ್‌ ಅವರು ಫೈನಲ್‌ನಲ್ಲಿ ಜೋರ್ಡಾನ್‌ನ ಇಶಾಹ್‌ ಹುಸೇನ್‌ ಸವಾಲು ಎದುರಿಸಲಿದ್ದಾರೆ.

ಮತ್ತೊಂದು ಸೆಮಿಫೈನಲ್‌ನಲ್ಲಿ ಹುಸೇನ್‌ ಅವರು ಅಗ್ರಶ್ರೇಯಾಂಕದ ಬಾಕ್ಸರ್‌ ಉಸ್ಮಾನ್‌ ಬಟುರೋವ್‌ಗೆ ಆಘಾತ ನೀಡಿದರು. ಉಸ್ಮಾನ್‌ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.

ಪಂಗಲ್‌ಗೆ ಕಂಚು: ಪುರುಷರ 52 ಕೆ.ಜಿ. ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಅಮಿತ್‌ ಪಂಗಲ್‌, ಕಂಚಿನ ಪದಕ ಪಡೆದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಪಡೆದಿದ್ದ ಅಮಿತ್‌, ಸೆಮಿಫೈನಲ್‌ನಲ್ಲಿ 2–3 ಪಾಯಿಂಟ್ಸ್‌ನಿಂದ ಚೀನಾದ ಜಿಯಾಂಗ್‌ವುನ್‌ ಹು ವಿರುದ್ಧ ಪರಾಭವಗೊಂಡರು.

ಹೋದ ವರ್ಷ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಜಿಯಾಂಗ್‌ವುನ್‌ ಅವರು ಪಂಗಲ್‌ಗೆ ಶರಣಾಗಿದ್ದರು. ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಗಳನ್ನು ಗೆದ್ದಿರುವ ಚೀನಾದ ಆಟಗಾರ, ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಂಡರು.

ಕೌರ್‌ ಮಿಂಚು: ಮಹಿಳೆಯರ 60 ಕೆ.ಜಿ.ವಿಭಾಗದ ಸೆಮಿಫೈನಲ್‌ನಲ್ಲಿ ಸಿಮ್ರನ್‌ಜಿತ್‌ , ತೈವಾನ್‌ನ ಶೀಹ್‌ ಯೀ ವು ಅವರನ್ನು ಮಣಿಸಿದರು. ಮೊದಲ ಸುತ್ತಿನಲ್ಲಿ ಹಿನ್ನಡೆ ಕಂಡಿದ್ದ ಕೌರ್‌, ಎರಡನೇ ಸುತ್ತಿನಲ್ಲಿ ಮಿಂಚಿದರು.

ಬುಧವಾರ ನಡೆಯುವ ಫೈನಲ್‌ನಲ್ಲಿ ಕೌರ್‌, ದಕ್ಷಿಣ ಕೊರಿಯಾದ ಒಹ್‌ ಯೆವೊಂಜಿ ಎದುರು ಸೆಣಸಲಿದ್ದಾರೆ.

ಮೇರಿಗೆ ಆಘಾತ: 51 ಕೆ.ಜಿ.ವಿಭಾಗದಲ್ಲಿ ಮೇರಿ ಆಘಾತ ಕಂಡರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ ಗೆದ್ದಿರುವ ಮೇರಿ, ಚೀನಾದ ಚಾಂಗ್‌ ಯುವನ್‌ ಎದುರು ಸೋತರು.

69 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಲವ್ಲಿನಾ ಕೂಡ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು. ಎರಡನೇ ಶ್ರೇಯಾಂಕ ಹೊಂದಿದ್ದ ಭಾರತದ ಬಾಕ್ಸರ್‌ 0–5 ಪಾಯಿಂಟ್ಸ್‌ನಿಂದ ಚೀನಾದ ಮೂರನೇ ಶ್ರೇಯಾಂಕದ ಬಾಕ್ಸರ್‌ ಹಾಂಗ್‌ ಗು ಎದುರು ಆಘಾತ ಕಂಡರು.

30 ವರ್ಷ ವಯಸ್ಸಿನ ಲವ್ಲಿನಾ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು.

75 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಪೂಜಾ ರಾಣಿ ಕೂಡ ಫೈನಲ್‌ ಪ್ರವೇಶಿಸಲು ವಿಫಲರಾದರು.

ಸೆಮಿಫೈನಲ್‌ನಲ್ಲಿ ಪೂಜಾ, ಲೀ ಕ್ವಿಯಾನ್‌ಗೆ ಶರಣಾದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಕ್ವಿಯಾನ್, ಇಲ್ಲಿ ಅಗ್ರಶ್ರೇಯಾಂಕ ಹೊಂದಿದ್ದಾರೆ..

ಸಚಿನ್‌ಗೆ ಗೆಲುವು: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವತ್ತ ಚಿತ್ತ ನೆಟ್ಟಿರುವ ಸಚಿನ್‌ ಕುಮಾರ್‌ ಈ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಇಡಬೇಕಿದೆ.

81 ಕೆ.ಜಿ.ವಿಭಾಗದ ಮೊದಲ ‘ಬಾಕ್ಸ್‌ ಆಫ್‌’ ಪಂದ್ಯದಲ್ಲಿ ಸಚಿನ್‌ 4–1 ಪಾಯಿಂಟ್ಸ್‌ನಿಂದ ಮಾನ್‌ ಕ್ವುವೊಂಗ್‌ ಗುಯೆನ್‌ ಅವರನ್ನು ಸೋಲಿಸಿದರು.

ಬುಧವಾರ ನಡೆಯುವ ಎರಡನೇ ‘ಬಾಕ್ಸ್‌ ಆಫ್‌’ ಪಂದ್ಯದಲ್ಲಿ ಸಚಿನ್‌ ಅವರು ತಾಜಿಕಿಸ್ತಾನದ ಶಬ್ಬೊಸ್‌ ನೆಗಮಟುಲ್ಲೊವ್‌ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಭಾರತದ ಬಾಕ್ಸರ್‌ಗೆ ಟೋಕಿಯೊ ಟಿಕೆಟ್‌ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.