ಮುಂಬೈ: ಖ್ಯಾತ ಜಾವೆಲಿನ್ ಪಟು ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ತಮ್ಮ ಬಯೋಪಿಕ್‌ನಲ್ಲಿ ಯಾರು ಕಾಣಿಸಿಕೊಳ್ಳಬೇಕು ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಬಾಲಿವುಡ್ ನಟ ರಣದೀಪ್ ಹೂಡಾ ಅವರನ್ನು ಆಯ್ಕೆ ಮಾಡಿದ್ದಾರೆ.
‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಿವೃತ್ತಿಯ ನಂತರ ಬಯೋಪಿಕ್ ಸಿನಿಮಾಗಳನ್ನು ಮಾಡುವುದು ಉತ್ತಮ. ಆಗ ವ್ಯಕ್ತಿಯ ಎಲ್ಲ ಸಾಧನೆಗಳನ್ನು ತೆರೆ ಮೇಲೆ ತೋರಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದ್ದಾರೆ.
ನಿಮ್ಮ ಬಯೋಪಿಕ್‌ನಲ್ಲಿ ನಟಿಸಲು ಯಾವ ನಟ ಸೂಕ್ತ ಎಂದು ನಿಮಗನಿಸುತ್ತದೆ ಎಂಬ ಪ್ರಶ್ನೆಗೆ, ‘ನಟ ರಣದೀಪ್ ಹೂಡಾ ಅವರು ನನ್ನ ಪಾತ್ರಕ್ಕೆ ಸೂಕ್ತ ಎಂದು ನನಗನಿಸುತ್ತದೆ. ಅವರೊಬ್ಬ ಉತ್ತಮ ನಟ. ಅಲ್ಲದೇ ಅವರು ಸಹ ಹರಿಯಾಣದವರು. ಯಾರು ನನ್ನ ಪಾತ್ರವನ್ನು ನಿರ್ವಹಿಸುತ್ತಾರೊ ಅವರು ನನ್ನ ಭಾಷೆಯನ್ನು ಬಲ್ಲವರಾಗಿರಬೇಕು’ ಎಂದಿದ್ದಾರೆ.
ನಿಮ್ಮ ಬಯೋಪಿಕ್‌ನಲ್ಲಿ ನೀವೇ ನಟಿಸುತ್ತೀರಾ ಎಂದು ಕೇಳಿದ್ದಕ್ಕೆ, ‘ನಾನು ಜಾಹೀರಾತುಗಳಲ್ಲಿ ನಟಿಸಬಲ್ಲೆ. ಆದರೆ, ಸಿನಿಮಾ ಕ್ಷೇತ್ರವೇ ಬೇರೆ. ಸಿನಿಮಾದಲ್ಲಿ ನಟಿಸುವುದು ತುಂಬಾ ಕಷ್ಟದ ಕೆಲಸ. ನಾನು ನಟನೆಗೆ ಸೂಕ್ತವಾದ ವ್ಯಕ್ತಿ ಎಂದು ನನಗಿಸುವುದಿಲ್ಲ’ ಎಂದು ಹೇಳಿದ್ದಾರೆ.
2020ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಏಷ್ಯಾದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
ನಟ ರಣದೀಪ್ ಹೂಡಾ ಅವರು ಬಾಲಿವುಡ್‌ನ ಹಲವು ಸಿನೆಮಾಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ‘ಸ್ವಾತಂತ್ರ್ಯ ವೀರ ಸಾರ್ವಕರ್’ ಸಿನಿಮಾವನ್ನು ನಿರ್ದೇಶಿಸಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.