ADVERTISEMENT

ಒಲಿಂಪಿಕ್‌ ಜ್ಯೋತಿ ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ಏಜೆನ್ಸೀಸ್
Published 24 ಆಗಸ್ಟ್ 2020, 13:50 IST
Last Updated 24 ಆಗಸ್ಟ್ 2020, 13:50 IST
ಒಲಿಂಪಿಕ್‌ ಜ್ಯೋತಿ–ಎಎಫ್‌ಪಿ ಚಿತ್ರ
ಒಲಿಂಪಿಕ್‌ ಜ್ಯೋತಿ–ಎಎಫ್‌ಪಿ ಚಿತ್ರ   

ಟೋಕಿಯೊ: ಮುಂದಿನ ವರ್ಷಕ್ಕೆ ಮುಂದೂಡಿರುವ ಟೋಕಿಯೊ ಒಲಿಂಪಿಕ್ಸ್‌ನ ಕ್ರೀಡಾಜ್ಯೋತಿ ಸೆಪ್ಪೆಂಬರ್ ಒಂದರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ ಎಂದು ಸಂಘಟಕರು ಸೋಮವಾರ ತಿಳಿಸಿದ್ದಾರೆ. ಜ್ಯೋತಿಯನ್ನು ಟೋಕಿಯೊ ಒಲಿಂಪಿಕ್‌ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ ಎಂದು ವಿವರಿಸಿದ್ದಾರೆ.

ಈ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಕೂಟವನ್ನು ಕೊರೊನಾ ಕಾಟದಿಂದಾಗಿ ಮುಂದೂಡಲಾಗಿದೆ. ಪ್ರೇಕ್ಷಕರ ಅನುಪಸ್ಥಿತಿಯಲ್ಲಿ, ಗ್ರೀಸ್‌ನ ಐತಿಹಾಸಿಕ ಒಲಿಂಪಿಯಾದಲ್ಲಿ ಬೆಳಗಿಸಲಾದ ಜ್ಯೋತಿಯ ಪಯಣಕ್ಕೂ ಕೊರೊನಾ ಕಾಡಿತ್ತು. ರಾಷ್ಟ್ರದಾದ್ಯಂತ ಪ್ರದರ್ಶನಕ್ಕಾಗಿ ಜ್ಯೋತಿಯನ್ನು ಮಾರ್ಚ್ ತಿಂಗಳಲ್ಲಿ ಜಪಾನ್‌ಗೆ ತೆಗೆದುಕೊಂಡು ಬರಲಾಗಿತ್ತು. ಆದರೆ ಒಲಿಂಪಿಕ್ಸ್ ಮುಂದೂಡುವ ನಿರ್ಧಾರ ಕೈಗೊಳ್ಳುವುದರೊಂದಿಗೆ ಜ್ಯೋತಿಯಾತ್ರೆಯನ್ನೂ ಸ್ಥಗಿತಗೊಳಿಸಲಾಗಿತ್ತು.

ಗ್ರೀಸ್‌ನಲ್ಲಿ ಜ್ಯೋತಿಯಾತ್ರೆಯನ್ನು ರದ್ದುಗೊಳಿಸಿ ನೇರವಾಗಿ ಜಪಾನ್‌ಗೆ ತರಲಾಗಿತ್ತು. ಉತ್ತರ ಜಪಾನ್‌ನಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲೂ ಸಾರ್ವಜನಿಕರಿಗೆ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ. ಬೆರಳೆಣಿಕೆಯಷ್ಟು ಸಂಖ್ಯೆಯ ಅಧಿಕಾರಿಗಳು ಮತ್ತು ಆಹ್ವಾನಿತರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆದಿತ್ತು. ಸುನಾಮಿ ಹೊಡೆತಕ್ಕೆ ಸಿಕ್ಕಿ ಹಾನಿಯಾಗಿರುವ ಫುಕುಶಿಮಾದಲ್ಲಿ ಇರಿಸಲಾಗಿತ್ತು. ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದಂತೆ ಅದನ್ನು ಅಲ್ಲಿಂದ ಸ್ಥಳಾಂತರಿಸಲಾಗಿತ್ತು. ಮುಂದಿನ ವರ್ಷದ ಜುಲೈ 23ರಿಂದ ಒಲಿಂಪಿಕ್ ಕೂಟವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.