ಪ್ಯಾರಿಸ್ (ಎಎಫ್‌ಪಿ): ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡೆಗಳ ಭಾಗವಾಗಿ ಒಲಿಂಪಿಕ್ ಜ್ಯೋತಿ ಬುಧವಾರ ಬಂದರು ನಗರ ಮಾರ್ಸೆಗೆ ಬಂದಿಳಿಯಲಿದ್ದು, ಸುಮಾರು ಒಂದೂವರೆ ಲಕ್ಷ ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
19ನೇ ಶತಮಾನದ ವ್ಯಾಪಾರಿ ಹಡಗು ‘ಬೆಲೆಮ್’ನಲ್ಲಿ ಜ್ಯೋತಿ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ನಂತರ ಫ್ರಾನ್ಸ್‌ನಲ್ಲಿ ಮತ್ತು ಫ್ರೆಂಚ್ ನೇರ ಆಡಳಿತದ ದೇಶಗಳ ರಸ್ತೆಗಳಲ್ಲಿ ಒಟ್ಟು 12,000 ಕಿ.ಮೀ. (7,500 ಮೈಲಿ) ದೂರ ಒಲಿಂಪಿಕ್ ಜ್ಯೋತಿ ಯಾತ್ರೆ ಸಂಚರಿಸಲಿದೆ.
ಒಲಿಂಪಿಕ್ಸ್ ಆರಂಭಕ್ಕೆ ಇನ್ನು 79 ದಿನಗಳಷ್ಟೇ ಬಾಕಿಯಿದೆ. ‘ಇದು ನಾವು ದೀರ್ಘಕಾಲದಿಂದ ಕಾಯುತ್ತಿದ್ದ ಕಾರ್ಯಕ್ರಮ ಇದಾಗಿದೆ’ ಎಂದು ಮುಖ್ಯ ಸಂಘಟಕರಾದ ಟೋನಿ ಎಸ್ಟಾಂಗೆ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಒಲಿಂಪಿಕ್ಸ್ ನೂರು ವರ್ಷಗಳ ನಂತರ ಪ್ಯಾರಿಸ್‌ಗೆ ಹಿಂತಿರುಗುತ್ತಿದೆ. ಈ ಹಿಂದೆ 1924 ಮತ್ತು 1900ರಲ್ಲಿ ನಡೆದ ಕ್ರೀಡೆಗಳ ಆತಿಥ್ಯವನ್ನು ಪ್ಯಾರಿಸ್ ವಹಿಸಿತ್ತು. ಫ್ರಾನ್ಸ್‌ನವರೇ ಆದ ಶ್ರೀಮಂತ ಮುತ್ಸದ್ಧಿ ಪಿಯರೆ ಡಿ ಕೂಬರ್ತಿ (1863-1937) ಅವರನ್ನು ಆಧುನಿಕ ಒಲಿಂಪಿಕ್ಸ್ ಜನಕ ಎನ್ನಲಾಗುತ್ತಿದೆ.
12 ದಿನಗಳ ಹಿಂದೆ ಗ್ರೀಸ್‌ನಿಂದ ಹೊರಟ ವಾಣಿಜ್ಯ ನೌಕೆ ಬೆಲೆಮ್, ಬುಧವಾರ ಮಾರ್ಸೆಗೆ ತಲುಪಲಿದೆ. ‘ನಾವು ಆಕರ್ಷಕ, ಭವ್ಯ ಮತ್ತು ಜನರ ಪಾಲ್ಗೊಳ್ಳುವಿಕೆಗೆ ಅವಕಾಶವಿರುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದು ಮಾರ್ಸೆ ಮೇಯರ್ ಬೆನೊಯಿ ಪಯನ್ ಭರವಸೆ ನೀಡಿದರು. ಈ ಬಂದರು ನಗರವನ್ನು ಗ್ರೀಕ್ ವರ್ತಕರು ಕ್ರಿಸ್ತಪೂರ್ವ 600ರಲ್ಲಿ ಹೇಗೆ ಸ್ಥಾಪಿಸಿದರು ಎಂಬುದರ ನೆನಪು ಮಾಡಿಕೊಡಲಾಗುವುದು ಎಂದರು.
ಬೆಲೆಮ್ ನೌಕೆ ಬಂದರು ಪ್ರವೇಶಿಸುವಾಗ ಇತರ 1000 ದೋಣಿಗಳು ಜೊತೆಯಾಗಲಿವೆ. ಸುಮಾರು ಒಂದೂವರೆ ಲಕ್ಷ ಆಸಕ್ತರು ಈ ವೇಳೆ ಸೇರುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ. ಸುಡುಮದ್ದುಗಳ ಪ್ರದರ್ಶನದ ಜೊತೆ ವಾದ್ಯಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಫ್ರೆಂಚ್ ಟಿ.ವಿಯಲ್ಲಿ ಇದರ ನೇರ ಪ್ರಸಾರ ಇರಲಿದೆ.
ಒಲಿಂಪಿಕ್ಸ್ ಸಂದರ್ಭದಲ್ಲಿ ಮಾರ್ಸೆಯಲ್ಲಿ ಸೇಲಿಂಗ್ ಸ್ಪರ್ಧೆಗಳು ನಡೆಯಲಿವೆ.
ಭದ್ರತಾ ವಿಷಯದಲ್ಲೂ ಇದು ಫ್ರಾನ್ಸ್‌ಗೆ ಪರೀಕ್ಷೆಯಾಗಿದೆ. ಇಡೀ ಕಾರ್ಯಕ್ರಮಕ್ಕೆ 6000 ಮಂದಿ ಭದ್ರತಾ ಸಿಬ್ಬಂದಿ ಕಣ್ಗಾವಲು ಇದೆ.
ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಂದು ಆರಂಭವಾಗಲಿದ್ದು, ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 8ರವರೆಗೆ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.