ADVERTISEMENT

ಒಲಿಂಪಿಕ್ ಪದಕ ವಿಜೇತ ಶೂಟರ್ ಸ್ವಪ್ನಿಲ್‌ಗೆ ₹5 ಕೋಟಿ ಬಹುಮಾನಕ್ಕೆ ತಂದೆ ಆಗ್ರಹ

ಪಿಟಿಐ
Published 8 ಅಕ್ಟೋಬರ್ 2024, 8:18 IST
Last Updated 8 ಅಕ್ಟೋಬರ್ 2024, 8:18 IST
<div class="paragraphs"><p>ಸ್ವಪ್ನಿಲ್‌ ಕುಸಾಳೆ</p></div>

ಸ್ವಪ್ನಿಲ್‌ ಕುಸಾಳೆ

   

ಮುಂಬೈ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಶೂಟರ್ ಸ್ವಪ್ನಿಲ್‌ ಕುಸಾಳೆ ಅವರಿಗೆ ಮಹಾರಾಷ್ಟ್ರ ಸರ್ಕಾರ ₹2 ಕೋಟಿ ಬಹುಮಾನ ನೀಡಿರುವ ಬಗ್ಗೆ ಅವರ ತಂದೆ ಸುರೇಶ ಕುಸಾಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ಆಗಸ್ಟ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಡೆದ 50 ಮೀ ರೈಫಲ್ ತ್ರೀ ಪೊಸಿಷನ್‌ ವಿಭಾಗದಲ್ಲಿ ಕೊಲ್ಹಾಪುರದ ಸ್ವಪ್ನಿಲ್‌ ಅವರು ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.

ADVERTISEMENT

‘ನನ್ನ ಮಗನಿಗೆ ₹5 ಕೋಟಿ ನಗದು ಬಹುಮಾನ ಮತ್ತು ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಕ್ರೀಡಾ ಸಂಕೀರ್ಣ ಬಳಿ ಒಂದು ನಿವೇಶನ ನೀಡಬೇಕು’ ಎಂದು ಸ್ವಪ್ನಿಲ್‌ ತಂದೆ ಸುರೇಶ್‌ ಕುಸಾಳೆ ಹೇಳಿದ್ದಾರೆ.

ಈ ಕುರಿತು ಕೊಲ್ಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ಪ್ರತಿ ಆಟಗಾರರಿಗೆ ಹರಿಯಾಣ ಸರ್ಕಾರ ₹5 ಕೋಟಿ ಬಹುಮಾನ ನೀಡುತ್ತದೆ. ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ ಹೊಸ ನೀತಿಯ ಪ್ರಕಾರ, ಒಲಿಂಪಿಕ್‌ ಕಂಚಿನ ಪದಕ ವಿಜೇತರು ₹2 ಕೋಟಿ ಪಡೆಯುತ್ತಾರೆ. 72 ವರ್ಷಗಳಲ್ಲಿ ಸ್ವಪ್ನಿಲ್‌ ಮಹಾರಾಷ್ಟ್ರದ ಎರಡನೇ ಪದಕ ವಿಜೇತರಾಗಿರುವಾಗ (1952ರಲ್ಲಿ ಕುಸ್ತಿಪಟು ಕೆ.ಡಿ ಜಾಧವ್‌ ನಂತರ) ರಾಜ್ಯ ಸರ್ಕಾರ ಇಂತಹ ಮಾನದಂಡಗಳನ್ನು ಏಕೆ ರೂಪಿಸುತ್ತದೆ’ ಎಂದು ಪ್ರಶ್ನಿಸಿದ್ದಾರೆ.

‘ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಐದು ಆಟಗಾರರು ದೇಶಕ್ಕೆ ಪದಕ ತಂದುಕೊಟ್ಟಿದ್ದಾರೆ. ಅದರಲ್ಲಿ ನಾಲ್ವರು ಹರಿಯಾಣದವರಾಗಿದ್ದು, ಸ್ವಪ್ನಿಲ್‌ ಕುಸಾಳೆ ಮಹಾರಾಷ್ಟ್ರದವರಾಗಿದ್ದಾರೆ. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಹರಿಯಾಣ ಚಿಕ್ಕ ರಾಜ್ಯ. ಆದರೆ, ಪದಕ ವಿಜೇತ ಅಥ್ಲೀಟ್‌ಗಳಿಗೆ ಹೆಚ್ಚಿನ ನಗದು ಬಹುಮಾನ ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.

‘ಚಿನ್ನದ ಪದಕ ವಿಜೇತರಿಗೆ ₹5 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹3 ಕೋಟಿ ಮತ್ತು ಕಂಚಿನ ಪದಕ ವಿಜೇತರಿಗೆ ₹2 ಕೋಟಿಯನ್ನು ನಮ್ಮ ಸರ್ಕಾರ ಘೋಷಿಸಿದೆ. ಇಷ್ಟು ವರ್ಷಗಳಲ್ಲಿ ಮಹಾರಾಷ್ಟ್ರದ ಇಬ್ಬರು ಆಟಗಾರರು ಮಾತ್ರ ಒಲಿಂಪಿಕ್‌ ಪದಕಗಳನ್ನು ಗೆದ್ದಿರುವಾಗ ಇಂತಹ ಮಾನದಂಡ ಏಕೆ?’ ಎಂದು ಸುರೇಶ ಕುಸಾಳೆ ಕೇಳಿದ್ದಾರೆ.

‘ಪುಣೆಯ ಕ್ರೀಡಾ ಸಂಕೀರ್ಣದಲ್ಲಿರುವ 50 ಮೀಟರ್‌ ತ್ರೀ ಪೊಸಿಷನ್‌ ರೈಫಲ್‌ ಶೂಟಿಂಗ್‌ ಪ್ರದೇಶಕ್ಕೆ ಸ್ವಪ್ನಿಲ್ ಹೆಸರಿಡಬೇಕು. ಅಲ್ಲದೆ, ಸ್ವಪ್ನಿಲ್‌ಗೆ ಪ್ರಶಸ್ತಿಯಾಗಿ ₹5 ಕೋಟಿ ಮತ್ತು ಬಾಳೇವಾಡಿ ಕ್ರೀಡಾಂಗಣದ ಬಳಿ ನಿವೇಶನ ನೀಡಬೇಕು. ಇದರಿಂದ ಅವನ ಕ್ರೀಡಾ ಅಭ್ಯಾಸಕ್ಕೆ ಸುಲಭವಾಗಿ ಪ್ರಯಾಣಿಸಬಹುದು’ ಎಂದು ಸುರೇಶ ಕುಸಾಳೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.