ನವದೆಹಲಿ: ದೆಹಲಿ ಪೊಲೀಸರಿಗೆ 19 ದಿನಗಳಿಂದ ಚಳ್ಳೇಹಣ್ಣು ತಿನ್ನಿಸಿದ ಕೊಲೆ ಆರೋಪ ಎದುರಿಸುತ್ತಿರುವ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಸಿಕ್ಕಿಬಿದ್ದಿದ್ದಾರೆ.
ಮೇ 4ರಂದು ರಾತ್ರಿ ಛತ್ರಸಾಲ ಕ್ರೀಡಾಂಗಣದಲ್ಲಿ ನಡೆದಿದ್ದ ಜಗಳದಲ್ಲಿ ಯುವ ಕುಸ್ತಿಪಟುಸಾಗರ್ ಧನಕರ್ ಮೇಲೆ ಸುಶೀಲ್ ಮತ್ತು ಸಂಗಡಿಗರು ಹಲ್ಲೆ ಮಾಡಿದ್ದರೆನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ಆಗಿನಿಂದಲೂ ಸುಶೀಲ್ ನಾಪತ್ತೆಯಾಗಿದ್ದರು.
ಭಾನುವಾರ ಸುಶೀಲ್ (38) ಹಾಗೂ ಅವರ ಸಹಚರ ಅಜಯ್ ಕುಮಾರ್ ಅಲಿಯಾಸ್ ಸುನಿಲ್ ಎಂಬುವವರನ್ನು ಮುಂಡ್ಕಾದಲ್ಲಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪಿ.ಎಸ್.ಕುಶ್ವಾಹ ತಿಳಿಸಿದ್ದಾರೆ.
ನಂತರ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಸುಶೀಲ್ ಕುಮಾರ್ ಅವರನ್ನು 12 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
‘ಕ್ರೀಡಾಂಗಣದಲ್ಲಿದ್ದ ಸಿಸಿ ಕ್ಯಾಮೆರಾವನ್ನು ಜಖಂ ಮಾಡಲಾಗಿದೆ. ಅದರ ಡಿಡಿಆರ್ ಅನ್ನೂ ಸುಶೀಲ್ ತೆಗೆದುಕೊಂಡು ಹೋಗಿದ್ದಾರೆ. ಅವರಿಂದ ಅದನ್ನು ವಶಪಡಿಸಿಕೊಳ್ಳಬೇಕಿದೆ. ಅಲ್ಲದೇ ಸಾಗರ್ ಮೇಲೆ ಹಲ್ಲೆ ಮಾಡಿದ ಕಾರಣವನ್ನೂ ತಿಳಿಯಬೇಕಿದೆ. ಆದ್ದರಿಂದ ಸುಶೀಲ್ ಅವರನ್ನು 12 ದಿನಗಳ ಪೊಲೀಸ್ ಕಸ್ಟಡಿಗೆ ನೀಡಬೇಕು‘ ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಅತುಲ್ ಶ್ರೀವಾಸ್ತವ ಮನವಿ ಮಾಡಿದರು.
ಇದನ್ನೂ ಓದಿ:ಸುಶೀಲ್ ಕುಮಾರ್ ನ್ಯಾಯಾಲಯಕ್ಕೆ ಹಾಜರು
ಘಟನೆ ನಡೆದ ನಂತರ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಅವರ ಕುರಿತು ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು ₹ 1ಲಕ್ಷ ಬಹುಮಾನ ಘೋಷಿಸಿದ್ದರು. ಅಜಯ್ ಕುಮಾರ್‌ನನ್ನು ಹುಡುಕಿಕೊಟ್ಟವರಿಗೂ ₹ 50 ಸಾವಿರ ನೀಡಲಾಗುವುದೆಂದು ಪೊಲೀಸರು ಹೇಳಿದ್ದರು.
ಸುಶೀಲ್ ಕುಮಾರ್ ಅವರ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಆರೋಪಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಕೂಡ ಇತ್ತು. ಈ ನಡುವೆ ಬಂಧನಕ್ಕೆ ಹೆದರಿ ಸುಶೀಲ್ ಕುಮಾರ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗಳಿಸುವುದರೊಂದಿಗೆ ಕುಸ್ತಿಯಲ್ಲಿ ಪದಕ ಗೆಲ್ಲುವ 56 ವರ್ಷಗಳ ಭಾರತದ ಕನಸನ್ನು ಸುಶೀಲ್ ಕುಮಾರ್ ನನಸು ಮಾಡಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.