ADVERTISEMENT

ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ, ಲಯಕ್ಕೆ ಮರಳಲು ಯತ್ನಿಸುವೆ: ಸೈನಾ ನೆಹ್ವಾಲ್

ಪಿಟಿಐ
Published 13 ಸೆಪ್ಟೆಂಬರ್ 2023, 13:33 IST
Last Updated 13 ಸೆಪ್ಟೆಂಬರ್ 2023, 13:33 IST
   

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಕಠಿಣ ಎಂಬುದು ಸೈನಾ ನೆಹ್ವಾಲ್‌ ಅವರಿಗೆ ಗೊತ್ತೇ ಇದೆ. ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗಿದ್ದರೂ ಅವರು ಬ್ಯಾಡ್ಮಿಂಟನ್‌ನಿಂದ ನಿವೃತ್ತಿಯ ಆಲೋಚನೆಯನ್ನೇನೂ ಮಾಡಿಲ್ಲ. ಬದಲು ವೃತ್ತಿಬದುಕನ್ನು ಮರಳಿ ಹಳಿಗೆ ತರುವ ಗುರಿಯನ್ನು ಹೊಂದಿದ್ದಾರೆ.

ಹೈದರಾಬಾದಿನ 33 ವರ್ಷದ ಸೈನಾ ಮೊಣಕಾಲು ಗಾಯ ಸೇರಿದಂತೆ ಅನೇಕ ಬಾರಿ ಗಾಯ ಮತ್ತು ಅನಾರೋಗ್ಯದಿಂದ ಬಳಲಿದ್ದಾರೆ. ನಿಯಮಿತವಾಗಿ ಬಿಡಬ್ಲ್ಯುಎಫ್‌ ಸರಣಿಗಳಲ್ಲಿ ಫಿಟ್‌ ಆಗಿ ಆಡಲು ಅವರಿಗೆ ಸಾಧ್ಯವಾಗಿಲ್ಲ. ಈಗ ವಿಶ್ವ ಕ್ರಮಾಂಕದಲ್ಲಿ ಅವರ ರ್‍ಯಾಂಕಿಂಗ್‌ 55ಕ್ಕೆ ಕುಸಿದಿದೆ.

‘ಒಂದು ಅಥವಾ ಎರಡು ಗಂಟೆ ತರಬೇತಿ ಪಡೆಯುವಾಗ ಮೊಣಕಾಲು ನೋವು ಕಾಡುತ್ತಿದೆ. ಮೊಣಕಾಲು ಬಗ್ಗಿಸಲು ಕಷ್ಟವಾಗುವ ಕಾರಣ ದಿನದಲ್ಲಿ ಎರಡನೇ ಬಾರಿ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ವೈದ್ಯರು ಎರಡು–ಮೂರು ಸಲ ಚುಚ್ಚುಮದ್ದು ನೀಡಿದ್ದಾರೆ. ಒಲಿಂಪಿಕ್ಸ್‌ (ಪ್ಯಾರಿಸ್) ಸಮೀಪಿಸುತ್ತಿದ್ದು ಅರ್ಹತೆ ಪಡೆಯುವುದು ಕಠಿಣ’ ಎಂದು ಸೈನಾ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಆದರೆ ಪುನರಾಗಮನ ಮಾಡಲು ನನ್ನಿಂದಾಗುವುದನ್ನೆಲ್ಲಾ ಮಾಡುವೆ. ಫಿಸಿಯೊಗಳು ನೆರವು ನೀಡುತ್ತಿದ್ದಾರೆ. ಆದರೆ ನೋವು ಮಾಗದಿದ್ದಲ್ಲಿ ಹೆಚ್ಚು ಸಮಯ ಬೇಕಾಗಬಹುದು. ಅರೆಮನಸ್ಸಿನಿಂದ ಆಡಲು ಇಳಿದಲ್ಲಿ ಒಳ್ಳೆಯ ಫಲಿತಾಂಶವೂ ಸಿಗುವುದಿಲ್ಲ’ ಎಂದರು.

ಆ್ಯನ್ ಸೀ ಯಂಗ್‌, ತೈ ಝು ಅಥವಾ ಅಕಾನೆ ಯಮಗುಚಿ ಅಂಥ ಆಟಗಾರ್ತಿಯರೆದುರು ಆಡುವಾಗ ಒಂದು ಗಂಟೆಯ ತರಬೇತಿ ಏತಕ್ಕೂ ಸಾಲುವುದಿಲ್ಲ. ಆಟದ ಗುಣಮಟ್ಟ ಸಾಕಷ್ಟು ಸುಧಾರಣೆಯಾಗಿದೆ. ಉನ್ನತ ಆಟಗಾರರ ಎದುರು ಆಡುವಾಗ, ನಮ್ಮ ಆಟದ ಮಟ್ಟವೂ ಎತ್ತರದಲ್ಲಿರಬೇಕು’ ಎಂದು ಸೈನಾ ವಿಶ್ಲೇಷಿಸಿದರು.

ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ಸೈನಾ ಈ ವರ್ಷದ ಜೂನ್‌ನಲ್ಲಿ ಸಿಂಪುರ ಓಪನ್‌ ನಂತರ ಯಾವುದೇ ಟೂರ್ನಿಯಲ್ಲಿ ಆಡಿಲ್ಲ. 2022ರಲ್ಲಿ ಆಡಿದ 14 ಟೂರ್ನಿಗಳಲ್ಲಿ ಒಮ್ಮೆ ಮಾತ್ರ ಅವರು ಎಂಟರ ಘಟ್ಟ ತಲುಪಿದ್ದರು. 2021ರಲ್ಲಿ ಎಂಟು ಟೂರ್ನಿಗಳಲ್ಲಿ ಆಡಿದ್ದು ಒಮ್ಮೆ ಮಾತ್ರ ನಾಲ್ಕರ ಘಟ್ಟ ತಲುಪಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಸೈನಾ 2019ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಗೆದ್ದಿದ್ದರು. ಅದು ಮಲೇಷ್ಯಾ ಮಾಸ್ಟರ್ಸ್‌ನಲ್ಲಿ.

ನಿವೃತ್ತಿ ಆಲೋಚನೆಯಿಲ್ಲ: ನಿವೃತ್ತಿ ಬಗ್ಗೆ ಕೇಳಿದಾಗ ‘ಎಲ್ಲರೂ ಒಂದು ದಿನ ನಿವೃತ್ತರಾಗಬೇಕಾಗುತ್ತದೆ. ಅದಕ್ಕೆ ಗಡುವು ಎಂಬುದಿಲ್ಲ. ದೇಹ ಕೇಳುವುದಿಲ್ಲ ಎನಿಸಿದಾಗ ಎಲ್ಲರೂ ಆಡುವುದನ್ನು ನಿಲ್ಲಿಸುತ್ತಾರೆ’ ಎಂದು ಸೈನಾ ಪ್ರತಿಕ್ರಿಯಿಸಿದರು.

‘ಸದ್ಯ, ನಾನು ಮತ್ತೆ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದ್ದೇನೆ. ಕ್ರೀಡಾಪಟುವಾಗಿ ಪ್ರಯತ್ನಿಸುವುದು ನನ್ನ ಕರ್ತವ್ಯ. ಈ ಆಟವನ್ನು ಪ್ರೀತಿಸುತ್ತಿರುವ ಜೊತೆ ಹಲವು ವರ್ಷಗಳಿಂದ ಆಡಿದ್ದೇನೆ’ ಎಂದರು.

ಬೆಂಗಳೂರಿನ ಪ್ರಕಾಶ ಪಡುಕೋಣೆ ಅಕಾಡೆಮಿಯಲ್ಲಿ ಒಂದು ವಾರ ಕಾಲ ತರಬೇತಿ ಪಡೆಯುತ್ತಿರುವ ಪಿ.ವಿ.ಸಿಂಧು ಅವರ ನಿರ್ಧಾರವನ್ನು ಸೈನಾ ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.