ರಾಂಚಿ: ಜನವರಿ 13ರಿಂದ ಇಲ್ಲಿ ನಡೆಯುವ ಒಲಿಂಪಿಕ್ಸ್ ಹಾಕಿ ಅರ್ಹತಾ ಟೂರ್ನಿಯು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶವಷ್ಟೇ ಅಲ್ಲ, ಭಾರತ ಮಹಿಳಾ ಹಾಕಿ ತಂಡಕ್ಕೆ ಈ ಆಟದ ಮೇಲಿರುವ ಬದ್ಧತೆ ತೋರಿಸಲೂ ಒಂದು ಅವಕಾಶ ಎಂದು ತಂಡದ ಅನುಭವಿ ಮಿಡ್‌ಫೀಲ್ಡರ್ ಸಲೀಮಾ ಟೇಟೆ ಶನಿವಾರ ಇಲ್ಲಿ ಹೇಳಿದರು.
ಭಾರತ ಸೇರಿದಂತೆ ಎಂಟು ತಂಡಗಳು, ಒಲಿಂಪಿಕ್ಸ್‌ನಲ್ಲಿ ಲಭ್ಯವಿರುವ ಮೂರು ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿವೆ. ಭಾರತ ತಂಡ ಇಲ್ಲಿ ನಡೆಯುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ.
‘ರಾಂಚಿಯ ಟೂರ್ನಿ ಅರ್ಹತಾ ಪ್ರಯತ್ನಕ್ಕಷ್ಟೇ ಸೀಮಿತವಾಗಿಲ್ಲ, ತಾವು ಪ್ರೀತಿಸುತ್ತಿರುವ ಕ್ರೀಡೆಯ ಮೇಲೆ ತಂಡ ಹೊಂದಿರುವ ಸ್ಪೂರ್ತಿ ಮತ್ತು ಬದ್ಧತೆ ಪ್ರದರ್ಶಿಸಲೂ ಇರುವ ಅವಕಾಶ’ ಎಂದು ಸಲೀಮಾ ಅವರು ಹಾಕಿ ಇಂಡಿಯಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ನಮ್ಮಿಂದಾಗುವ ಎಲ್ಲ ಸಾಮರ್ಥ್ಯವನ್ನು ತೊಡಗಿಸಲಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ಗೆ ಸ್ಥಾನ ಪಡೆಯಲು ಯತ್ನಿಸುತ್ತೇವೆ’ ಎಂದಿದ್ದಾರೆ.
ಭಾರತ ತಂಡವು, ಅಮೆರಿಕ, ನ್ಯೂಜಿಲೆಂಡ್ ಮತ್ತು ಇಟಲಿ ಜೊತೆ ‘ಬಿ’ ಗುಂಪಿನಲ್ಲಿದೆ. ‘ಎ’ ಗುಂಪಿನಲ್ಲಿ ಜರ್ಮನಿ, ಜಪಾನ್, ಚಿಲಿ ಮತ್ತು ಝೆಕ್ ರಿಪಬ್ಲಿಕ್ ತಂಡಗಳಿವೆ. ಭಾರತ ತಂಡ ಜನವರಿ 14ರಂದು ನ್ಯೂಜಿಲೆಂಡ್ ವಿರುದ್ಧ, 16ರಂದು ಇಟಲಿ ವಿರುದ್ಧ ಗುಂಪಿನ ಕೊನೆಯ ಪಂದ್ಯ ಆಡಲಿದೆ.
ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡೆಗಳಲ್ಲಿ ಭಾರತ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಈಗ ಪ್ಯಾರಿಸ್ ಕ್ರೀಡೆಗಳಿಗೆ ಅರ್ಹತೆ ಪಡೆಯಲು ಇನ್ನೊಂದು ಅವಕಾಶ ಮಹಿಳಾ ಹಾಕಿ ತಂಡದ ಮುಂದಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ 21 ವರ್ಷದ ಸಲೀಮಾ, ‘ತವರಿನ ಪ್ರೇಕ್ಷಕರ ಬೆಂಬಲವು ತಂಡದ ಗುರಿಸಾಧನೆಗೆ ಬೆಂಬಲವಾಗಿ ನಿಲ್ಲಲಿದೆ’ ಎಂದು ಹೇಳಿದ್ದಾರೆ.
‘ರಾಂಚಿಗೆ ಮರಳುವುದು ತವರಿಗೆ ಮರಳಿದ ಅನುಭವ ನೀಡುತ್ತದೆ. ನನ್ನ ಹೃದಯದಲ್ಲಿ ಈ ನಗರಕ್ಕೆ ವಿಶೇಷ ಸ್ಥಾನವಿದೆ. ಈ ಊರಿನಲ್ಲೇ ಹಾಕಿಯ ಮೇಲೆ ನನಗೆ ಮೋಹ ಬೆಳೆಯಿತು. ಇಲ್ಲಿಯೇ ಆಟ ಕಲಿತು ಕೌಶಲಗಳನ್ನು ಬೆಳೆಸಿಕೊಂಡೆ’ ಎಂದು ಜಾರ್ಖಂಡ್‌ನ ಸಿಮ್ದೇಗಾ ಜಿಲ್ಲೆಯವರಾದ ಸಲೀಮಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.