ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭವ್ಯ ತೆರೆ: 2028ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಕೂಟ

ಏಜೆನ್ಸೀಸ್
Published 12 ಆಗಸ್ಟ್ 2024, 15:55 IST
Last Updated 12 ಆಗಸ್ಟ್ 2024, 15:55 IST
<div class="paragraphs"><p>ಲಾಸ್‌ ಏಂಜಲೀಸ್ ಮೇಯರ್‌ಗೆ ಒಲಿಂಪಿಕ್ ಧ್ವಜ ಹಸ್ತಾಂತರಿಸಿದ ಐಒಸಿ ಅಧ್ಯಕ್ಷ ಥಾಮಸ್ ಬಾಕ್&nbsp;</p></div>

ಲಾಸ್‌ ಏಂಜಲೀಸ್ ಮೇಯರ್‌ಗೆ ಒಲಿಂಪಿಕ್ ಧ್ವಜ ಹಸ್ತಾಂತರಿಸಿದ ಐಒಸಿ ಅಧ್ಯಕ್ಷ ಥಾಮಸ್ ಬಾಕ್ 

   

 ಪಿಟಿಐ ಚಿತ್ರ

ಲಾಸ್ ಏಂಜಲೀಸ್: ಭಾನುವಾರ ರಾತ್ರಿ ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯ ಸಮಾರಂಭದಲ್ಲಿ ಲಾಸ್‌ ಏಂಜಲೀಸ್ ಮೇಯರ್ ಕ್ಯಾರೆನ್ ಬಾಸ್ ಅವರಿಗೆ ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿ ಮುಖ್ಯಸ್ಥ ಥಾಮಸ್ ಬಾಕ್ ಒಲಿಂಪಿಕ್ ಧ್ವಜವನ್ನು ಹಸ್ತಾಂತರಿಸಿದರು. ಆಗ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ಕ್ರೀಡಾಂಗಣದ ಮೇಲ್ಛಾವಣಿಯಿಂದ ಇಳಿದು ಬಂದ  ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ಬಾಸ್ ಅವರಿಂದ ಬಾವುಟ ಪಡೆದು ಸೂಪರ್ ಬೈಕ್ ಏರಿ ಹೊರಟರು. 

ADVERTISEMENT

2028ರ ಒಲಿಂಪಿಕ್ ಕೂಟವನ್ನು ಆಯೋಜಿಸಲಿರುವ ಲಾಸ್ ಏಂಜಲೀಸ್‌ನತ್ತ ಕ್ರೀಡಾಲೋಕದ ಪಯಣ ಶುರು ಎಂಬುದನ್ನು ಕ್ರೂಸ್ ಸಾಂಕೇತಿಕವಾಗಿ ತೋರಿಸಿದರು. ಹಾಲಿವುಡ್ ಇರುವ ನಗರ ಲಾಸ್ ಏಂಜಲೀಸ್ ಈಗ ಸಿನಿಪ್ರಿಯರನ್ನಷ್ಟೇ ಅಲ್ಲ. ಕ್ರೀಡಾ ತಾರೆಯರನ್ನೂ ಕೈಬೀಸಿ ಕರೆಯುತ್ತಿದೆ. 

ಈ ನಗರವು ಒಲಿಂಪಿಕ್ ಕೂಟವನ್ನು ಮೂರನೇ ಬಾರಿ ಆಯೋಜಿಸಲಿದೆ.  1932 ಮತ್ತು 1984ರಲ್ಲಿ ಇಲ್ಲಿ ಒಲಿಂಪಿಕ್ಸ್ ಆಯೋಜನೆಯಾಗಿತ್ತು. 

ಒಲಿಂಪಿಕ್ಸ್ ಆಯೋಜನೆಗಾಗಿ ನಡೆದ ಬಿಡ್‌ ಪ್ರಕ್ರಿಯೆಯಲ್ಲಿ ಪ್ಯಾರಿಸ್ ನಗರಕ್ಕೆ 2024ರ ಕೂಟ ಲಭಿಸಿತ್ತು. ಆಗ ಲಾಸ್‌ ಏಂಜಲೀಸ್‌ಗೆ 2028ರ ಕೂಟವನ್ನು ‘ಸಮಾಧಾನಕರ ಬಹುಮಾನ’ ಎಂದು ಪ್ರದಾನ ಮಾಡಲಾಗಿತ್ತು. 

ಅಮೆರಿಕವು 1932ರಲ್ಲಿ ಕೂಟದ  ಆತಿಥ್ಯಕ್ಕೆ ಬಿಡ್ ಸಲ್ಲಿಸಿದ್ದ ಏಕೈಕ  ದೇಶವಾಗಿತ್ತು. ಆ ಸಂದರ್ಭದಲ್ಲಿ ಆರ್ಥಿಕ ಹಿಂಜರಿತ ಮತ್ತು ಪ್ರಮುಖ ರಾಷ್ಟ್ರಗಳ ತಂಡಗಳ ಗೈರುಹಾಜರಿ ಆ ಕೂಟವನ್ನು ಕಾಡಿದ್ದವು. ಈ ನಡುವೆಯೂ ಅಮೆರಿಕದ ಬೇಬ್ ಡಿಡ್‌ರಿಕ್ಸನ್ ಝಹಾರಿಯಾಸ್ ಅವರು ಮಹಿಳೆಯರ ಜಾವೆಲಿನ್ ಮತ್ತು ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 

ಆದರೆ 1984ರಲ್ಲಿ ಒಲಿಂಪಿಕ್ ಕೂಟವನ್ನು ಅದ್ದೂರಿಯಾಗಿ ಆಯೋಜಿಸಿದ ಲಾಸ್‌ ಏಂಜಲೀಸ್ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ‘ಶ್ರೇಷ್ಠ ಒಲಿಂಪಿಕ್ಸ್’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ಆಧುನಿಕತೆ ಮತ್ತು ಸಾಂಪ್ರದಾಯಿಕತೆ ಮೇಳೈಸಿದ್ದ ಕಾರ್ಯಕ್ರಮಗಳು ಗಮನ ಸೆಳೆದವು. ಹಾಲಿವುಡ್ ತಾರೆಗಳು ವಿಜೃಂಭಿಸಿದರು. ಡೆಕಥ್ಲಾನ್ ಚಾಂಪಿಯನ್ ರೆಫರ್ ಜಾನ್ಸನ್ ಕ್ರೀಡಾಜ್ಯೋತಿಯನ್ನು ಬೆಳಗಿದ್ದರು. ಅದಕ್ಕಾಗಿ ವಿನೂತನವಾದ ಜೆಟ್‌ಪ್ಯಾಕ್ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ‘ಸ್ಟಾರ್‌ ವಾರ್ಸ್’ ರೂವಾರಿ ಜಾನ್ ವಿಲಿಯಮ್ಸ್‌ ಅವರು ಸಂಗೀತ ನೀಡಿದ್ದರು. 

ಪೌರ್ವಾತ್ಯ ದೇಶಗಳು ಈ ಕೂಟವನ್ನು ಬಹಿಷ್ಕರಿಸಿದ್ದವು. ಇದರಲ್ಲಿ ಅಮೆರಿಕವು ಪ್ರಾಬಲ್ಯ ಮೆರೆಯಿತು. ಕಾರ್ಲ್ ಲೂಯಿಸ್ ಮತ್ತು ಮೇರಿ ಲೌ ರೆಟನ್ ಅವರು ಕ್ರೀಡಾಪ್ರೇಮಿಗಳ ಮನೆಮಾತಾದರು. ಆಗಿನ್ನೂ ವೃತ್ತಿಜೀವನ ಆರಂಭಿಸಿದ್ದ ಮೈಕೆಲ್ ಜೋರ್ಡನ್ ಅಮೆರಿಕ ಪುರುಷರ ಬ್ಯಾಸ್ಕೆಟ್‌ಬಾಲ್ ತಂಡವು ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. 

‘ನಮ್ಮಲ್ಲಿ ನಡೆಯುವ ಕೂಟವು ಆಧುನಿಕ ಒಲಿಂಪಿಕ್ಸ್‌ನ ಅತ್ಯಂತ ಯುವಚೈತನ್ನದಿಂದ ಕೂಡಿರಬೇಕು. ಸಕಾರಾತ್ಮಕವಾದ ಕಾರ್ಯವಾಗಬೇಕು’ ಎಂದು ಒಲಿಂಪಿಕ್ಸ್‌ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದಿರುವ ಜೆನೆತ್ ಇವಾನ್ಸ್‌ ಹೇಳಿದ್ದಾರೆ. ಅವರು 2028ರ ಕೂಟದ ಸಂಘಟನಾ ಸಮಿತಿಯ ಮುಖ್ಯ ಅಥ್ಲೀಟ್ ಅಧಿಕಾರಿಯಾಗಿದ್ದಾರೆ. 

ಕಟ್ಟಡ ನಿರ್ಮಾಣ ಇಲ್ಲ: ಪ್ಯಾರಿಸ್‌ನಲ್ಲಿ ವಿನೂತನ ರೀತಿಯ ಉದ್ಘಾಟನೆ ಸಮಾರಂಭ ನಡೆಸಿರುವುದು ಈಗ ಮುಂದಿನ ಒಲಿಂಪಿಕ್ಸ್‌ಗೂ ಹೊಸ ಯೋಜನೆ ರೂಪಿಸಲು ಕಾರಣವಾಗಲಿದೆ. 

ಲಾಸ್‌ ಏಂಜಲೀಸ್‌ನಲ್ಲಿ ಈ ಮುಂಚೆಯೇ ಇರುವ ಕ್ರೀಡಾಗ್ರಾಮದ ಮೂಲಸೌಲಭ್ಯಗಳನ್ನೇ ನವೀಕರಣ ಮಾಡಿ ಬಳಕೆ ಮಾಡಲು ಉದ್ಧೇಶಿಸಲಾಗಿದೆ. 

‘ಈ ಕ್ರೀಡಕೂಟದಲ್ಲಿ ಕಟ್ಟಡ ನಿರ್ಮಾಣ ಇಲ್ಲ’ ಎಂದು ಇವಾನ್ಸ್‌ ಹೇಳಿದ್ದಾರೆ. 

ಎರಡು ಎನ್‌ಎಫ್‌ಎಲ್ ತಂಡಗಳು ಇರುವ ತಾಣ ಇದು. ಇಲ್ಲಿಯ ಪ್ರತಿಷ್ಥಿತ ಸೊಫೈ ಕ್ರೀಡಾಂಗಣದಲ್ಲಿ ಸೂಪರ್ ಬೌಲ್  ಮತ್ತಿತರ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದನ್ನು ಒಲಿಂಪಿಕ್ಸ್‌ಗಾಗಿ ನವೀಕರಿಸಲಾಗುತ್ತಿದೆ.

ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಅವರು ಮುಕ್ತಾಯ ಸಮಾರಂಭದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದರು  –ಪಿಟಿಐ ಚಿತ್ರ

‘ಒಲಿಂಪಿಕ್ಸ್ ಆಯೋಜನೆಯಿಂದ ಬದಲಾವಣೆ ಪರ್ವ’

'ಪ್ಯಾರಿಸ್‌ನಲ್ಲಿ ನಾನು ನೋಡಿದ್ದೇನೆ. ಒಲಿಂಪಿಕ್ಸ್ ಆಯೋಜನೆಯಿಂದ ದೇಶದಲ್ಲಿ ಬದಲಾವಣೆಯ ಪರ್ವ ಆರಂಭವಾಗುತ್ತದೆ’ ಎಂದು ಮೇಯರ್ ಬಾಸ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.  1984ರಲ್ಲಿ ಮೇಯರ್ ಆಗಿದ್ದ ಟಾಮ್ ಬ್ರಾಡ್ಲಿ ಅವರು ಮಾಡಿದ್ದ ರೈಲು ಬಸ್ ಮತ್ತು ಸಂಚಾರ ವ್ಯವಸ್ಥೆಯ ಯೋಜನೆಯಂತೆಯೇ ಈ ಬಾರಿಯೂ ಮಾಡಲಾಗುವುದು ಎಂದು ಹೇಳಿದ್ದಾರೆ. ಕೂಟದ ವೇಳೆಯಲ್ಲಿ ಸ್ಥಳೀಯ ಕಾರು ಮಾಲೀಕರು ತಮ್ಮ ಸಂಚಾರದ ಅವಧಿಯನ್ನು ಕಡಿತಗೊಳಿಸಬೇಕೆಂದು ಮನವಿ ಮಾಡಲು ನಗರಾಡಳಿತ ಸಿದ್ಧವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.