ADVERTISEMENT

Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ರಾಯಿಟರ್ಸ್
Published 25 ಜುಲೈ 2024, 13:28 IST
Last Updated 25 ಜುಲೈ 2024, 13:28 IST
<div class="paragraphs"><p>ಜರ್ಮನಿಯ ಜಿಮ್ನಾಸ್ಟಿಕ್ ಕ್ರೀಡಾಪಟುವಿನ ಆಟದ ವೈಖರಿ</p></div>

ಜರ್ಮನಿಯ ಜಿಮ್ನಾಸ್ಟಿಕ್ ಕ್ರೀಡಾಪಟುವಿನ ಆಟದ ವೈಖರಿ

   

ರಾಯಿಟರ್ಸ್ ಚಿತ್ರ

ಪ್ಯಾರಿಸ್: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಜರ್ಮನಿಯ ಜಿಮ್ನಾಸ್ಟಿಕ್ ತಂಡದ ಮಹಿಳಾ ಕ್ರೀಡಾಪಟುಗಳು ಸಂಪೂರ್ಣ ದೇಹ ಮುಚ್ಚುವ ಫುಲ್‌ ಬಾಡಿ ಸೂಟ್ ಅನ್ನು ಬಳಸುತ್ತಿರುವುದು ಗಮನ ಸೆಳೆಯುತ್ತಿದೆ.

ADVERTISEMENT

ಜಿಮ್ನಾಸ್ಟಿಕ್‌ನಲ್ಲಿ ತೀರಾ ವಿರಳವೆಂಬ ಈ ಬಗೆಯ ವಸ್ತ್ರ ವಿನ್ಯಾಸವು ಯುವಜನತೆಗೆ ಪ್ರೇರಣೆಯ ಜತೆಗೆ, ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಆರಾಮವನ್ನು ನೀಡುತ್ತಿದೆ ಎಂದು ತಂಡದ ಆಟಗಾರ್ತಿಯರು ಹೇಳಿದ್ದಾರೆ.

ಪ್ಯಾರಿಸ್‌ನ ಬೆರ್ಸಿ ಅರೆನಾದಲ್ಲಿ ಗುರುವಾರ ನಡೆದ ಅಭ್ಯಾಸದಲ್ಲಿ ಜರ್ಮನಿಯ ಆಟಗಾರ್ತಿಯರು, ಕುತ್ತಿಗೆಯಿಂದ ಪಾದದವರೆಗೆ ದೇಹವನ್ನು ಮುಚ್ಚುವ ಮೇಲಂಗಿ ಹಾಗೂ ಲೆಗ್ಗಿಂಗ್ಸ್‌ ಒಳಗೊಂಡ ಉಡುಪನ್ನು ತೊಟ್ಟಿದ್ದು ಕಂಡುಬಂತು. ಟೊಕಿಯೊ ಒಲಿಂಪಿಕ್ಸ್‌ನಲ್ಲೂ ಜರ್ಮನಿಯ ಕ್ರೀಡಾಪಟುಗಳ ಇಂಥ ಪ್ರಯತ್ನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಕ್ರೀಡೆಯಲ್ಲಿ ಲೈಂಗಿಕತೆಗೆ ವಿರುದ್ಧವಾಗಿ ಇಂಥ ಉದ್ದನೆಯ ಉಡುಪನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕ್ರೀಡಾಪಟುಗಳು ಹೇಳಿದ್ದರು. 

ಈ ಕುರಿತು ಪ್ರತಿಕ್ರಿಯಿಸಿರುವ ಜಿಮ್ನಾಸ್ಟಿಕ್ ಪಟು ಪೌಲಿನಾ ಷಾಫರ್ ಬೆಟ್ಜ್‌, ‘ಈ ಚರ್ಚೆಯಲ್ಲಿ ಬಹುಮುಖ್ಯವಾದ ಅಂಶವೇನೆಂದರೆ ನಾವು ಈ ಉಡುಪಿನಲ್ಲಿ ಆರಾಮವಾಗಿದ್ದೇವೆ. ಉದ್ದನೆಯ ಲೆಗ್ಗಿಂಗ್ಸ್‌ ತೊಟ್ಟು ಜಿಮ್ನಾಸ್ಟಿಕ್‌ ಮಾಡುವುದೇ ನನಗೆ ಹೆಚ್ಚು ಹಿತ ನೀಡುತ್ತದೆ. ಆದರೆ ಇಂಥ ಉಡುಪುಗಳನ್ನು ತೊಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಸವಾಲಿನಿಂದಾಗಿ ಇತರ ರಾಷ್ಟ್ರಗಳು ಇದನ್ನು ಅನುಸರಿಸಲು ಸಾಧ್ಯವಾಗದಿರಬಹುದು’ ಎಂದಿದ್ದಾರೆ. ಬೆಟ್ಜ್‌ ಅವರಿಗೆ ಇದು ಮೂರನೇ ಒಲಿಂಪಿಕ್ಸ್‌ ಆಗಿದೆ.

‘ನಮ್ಮಲ್ಲಿ ಇಂಥ ಧಿರಿಸು ಸಿದ್ಧಪಡಿಸುವ ವಿನ್ಯಾಸಕರು ಇದ್ದಾರೆ. ಉಡುಪು ತೊಡುವವರ ಅಳತೆಗೆ ತಕ್ಕಂತೆ ವಿನ್ಯಾಸಗೊಳಿಸುತ್ತಾರೆ. ಹೀಗಾಗಿ ಇದು ನಮಗೆ ಹೆಚ್ಚಿನ ಆರಾಮ ನೀಡಿದೆ’ ಎಂದು ಬಿಟ್ಜ್‌ ಹೇಳಿದ್ದಾರೆ.

‘ನಾವು ಇಂಥ ಉಡುಪು ತೊಡಲು ಆರಂಭಿಸಿದ ನಂತರ ಬಹಳಷ್ಟು ಕ್ರೀಡಾಪಟುಗಳು ಇಂಥದ್ದೇ ಉದ್ದನೆಯ ಧಿರಿಸು ತೊಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಗಮನಿಸಿದ್ದೇನೆ. ಜರ್ಮನಿಯ ಕ್ರೀಡಾಪಟುಗಳು ಇದರಲ್ಲಿ ಹೆಚ್ಚು ಆರಾಮವನ್ನು ಅನುಭವಿಸುತ್ತಿದ್ದಾರೆ’ ಎಂದು ಮತ್ತೊಬ್ಬ ಕ್ರೀಡಾಪಟು ಸಾರಾ ವೋಸ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.