ಪ್ಯಾರಿಸ್: ಭಾರತ ಪುರುಷರ ಹಾಕಿ ತಂಡವು ಇತ್ತೀಚಿನ ದಶಕಗಳಲ್ಲೇ ಅತ್ಯಂತ ಕೆಚ್ಚೆದೆಯ
ಪ್ರದರ್ಶನವೊಂದನ್ನು ನೀಡಿ ಒಲಿಂಪಿಕ್ಸ್ ಹಾಕಿ ಸೆಮಿಫೈನಲ್ ತಲುಪಿತು. ಆ ಮೂಲಕ ಸತತ ಎರಡ
ನೇ ಒಲಿಂಪಿಕ್ಸ್‌ನಲ್ಲಿ ಪದಕದ ಕನಸನ್ನು ಜೀವಂತ ವಾಗುಳಿಸಿಕೊಂಡಿತು. ವಿದಾಯದ ಹೊಸ್ತಿಲಲ್ಲಿರುವ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಅವರು ಗ್ರೇಟ್ ಬ್ರಿಟನ್ ವಿರುದ್ಧ ಈ ಕ್ವಾರ್ಟರ್‌ಫೈನಲ್ ಪಂದ್ಯದ ಗೆಲುವಿನಲ್ಲಿ ‘ಹೀರೊ’ ಎನಿಸಿದರು.
ತಂಡದ ಅನುಭವಿ ಡಿಫೆಂಡರ್ ಅಮಿತ್ ರೋಹಿದಾಸ್ ಎರಡನೇ ಕ್ವಾರ್ಟರ್ ಮಧ್ಯದಲ್ಲಿ ವಿಲಿಯಂ ಕಲ್ನಾನ್ ಅವರತ್ತ ಅಜಾಗೂಕತೆಯಿಂದ ಸ್ಟಿಕ್ ಎತ್ತಿದ್ದಕ್ಕೆ ರೆಡ್‌ಕಾರ್ಡ್ ಪಡೆದು ಹೊರ
ನಡೆಯಬೇಕಾಯಿತು. ಉಳಿದ ಅವಧಿಗೆ 10 ಮಂದಿಗೆ ಸೀಮಿತಗೊಂಡರೂ ತಂಡ ವೀರೋಚಿತವಾಗಿ ಹೋರಾಡಿತು. ತಂಡ ರಕ್ಷಣೆಯಲ್ಲಿ ಶಿಸ್ತುಬದ್ಧವಾಗಿ ಆಡಿ ನಿಗದಿತ ಅವಧಿಯನ್ನು 1–1ರಲ್ಲಿ ಸಮಮಾಡಿಕೊಂಡಿತು.
ಇವ್ಸ್ ಡಿ ಮ್ಯಾನುವಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆ ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಗೆಲುವು ಸಾಧಿಸಿತು. 42 ನಿಮಿಷಗಳಷ್ಟು ದೀರ್ಘ ಅವಧಿಗೆ 10 ಆಟಗಾರರಿದ್ದರೂ ತಂಡ ಎದೆಗುಂದಲಿಲ್ಲ. ತಮ್ಮ ಜೀವವೇ ಪಣಕ್ಕಿದೆ ಎನ್ನುವಂತೆ ಆಡಿ ಬ್ರಿಟನ್ ತಂಡದ ದಾಳಿಗಳನ್ನು ದಿಟ್ಟವಾಗಿ ಎದುರಿಸಿತು.
36 ವರ್ಷ ವಯಸ್ಸಿನ ಶ್ರೀಜೇಶ್ ತಮ್ಮ ಹಾಕಿ ಬದುಕಿನ ಸಂಧ್ಯಾಕಾಲದಲ್ಲೂ ಅವಿಸ್ಮರಣೀಯ ಪ್ರದರ್ಶನ ನೀಡಿದರು. ಬ್ರಿಟನ್‌ನ ಹಲವು ಗೋಲು ಅವಕಾಶಗಳಿಗೆ ಗೋಡೆಯಾದರು. ಅವರ ಗ್ರಹಿಕೆ, ಮುಂದಾಲೋಚನೆ, ಚುರುಕಿನ ಚಲನೆಗಳಿಲ್ಲದೇ ಹೋಗಿದ್ದಲ್ಲಿ, ಭಾರತ ರೋಹಿದಾಸ್ ಮಾಡಿದ ತಪ್ಪಿಗೆ ಭಾರಿ ಬೆಲೆ ತೆರಬೇಕಾಗುತಿತ್ತು.
ಭಾರತದ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ನಿರ್ವಿವಾದವಾಗಿ ಒಬ್ಬರೆನಿಸಿರುವ ಶ್ರೀಜೇಶ್, ಬ್ರಿಟನ್‌ನ ಕಾನರ್ ವಿಲಿಯಮ್ಸನ್ ಅವರ ಪೆನಾಲ್ಟಿ ಯತ್ನ ಹೊರಹೋಗುವಂತೆ ಪ್ರಚೋದಿಸಿದರು. ಫಿಲಿಪ್ ರೋಪಾರ್ ಅವರ ಯತ್ನವನ್ನು ಯಶಸ್ವಿಯಾಗಿ ತಡೆದರು. ಆಗ ಸ್ಕೋರ್ 3–2 ಆಯಿತು. ಭಾರತದ ಪರ ನಾಲ್ಕನೇ ಯತ್ನ ತೆಗೆದುಕೊಂಡ ರಾಜಕುಮಾರ್ ಪಾಲ್ ಸಂಯಮ ವಹಿಸಿ ಗೋಲು ಗಳಿಸುತ್ತಿದ್ದಂತೆ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇನ್ನೊಂದು ಕಡೆ ಬ್ರಿಟನ್ ಆಟಗಾರರು ಹತಾಶರಾದರು. ಒಳ್ಳೆಯ ಅವಕಾಶವನ್ನು ಕಳೆದುಕೊಂಡಿದ್ದಕ್ಕೆ ಕೈಕೈಹಿಸುಕಿ ಕಣ್ಣೀರು ತುಂಬಿಕೊಂಡರು.
ಇದಕ್ಕೆ ಮೊದಲು ಹರ್ಮನ್‌ಪ್ರೀತ್, ಸುಖಜೀತ್, ಲಲಿತ್ ಕುಮಾರ್ ಅವರು ಪೆನಾಲ್ಟಿ ಯತ್ನಗಳಲ್ಲಿ ಯಶ ಕಂಡಿದ್ದರು. ಬ್ರಿಟನ್ ತಂಡದ ಜೇಮ್ಸ್ ಅಲ್ಬರಿ, ಕಾನರ್ ಚೆಂಡನ್ನು ಗುರಿ ತಲುಪಿಸಿದರು. ಆರಂಭದಲ್ಲಿ ಬ್ರಿಟನ್ ಆಟಗಾರರು ಮೇಲುಗೈ ಸಾಧಿಸಿ ಭಾರತದ ರಕ್ಷಣೆಗೆ ಸವಾಲೊಡ್ಡಿದರು. ಆದರೆ ಭಾರತದ ಆಟಗಾರರು ಇದಕ್ಕೆ ಸಜ್ಜಾಗಿದ್ದಂತೆ ಆಡಿದರು. ಪ್ರತಿದಾಳಿಗೂ ಹಿಂದೇಟು ಹಾಕಲಿಲ್ಲ.
ಎರಡನೇ ಕ್ವಾರ್ಟರ್‌ನಲ್ಲಿ ರೋಹಿದಾಸ್ ಅವರನ್ನು ಅಂಪೈರ್ ಹೊರಕಳಿಸಿದರು. ಭಾರತದ ಆಟಗಾರರು ಇದು ‘ಹಳದಿ ಕಾರ್ಡ್’ ಎಚ್ಚರಿಕೆಯ ತಪ್ಪು ಎಂಬ ಭಾವನೆಯನ್ನೇನೊ ವ್ಯಕ್ತ
ಪಡಿಸಿದರು. ಆದರೆ ವಿಡಿಯೊ ಅಂಪೈರ್ ಬೆಂಜಮಿನ್ ಗೊಂಟ್ಜನ್ ಅವರು ಎಚ್ಚರಿಕೆಯ ಪರಿಶೀಲನೆಯ ನಂತರ ಅಮಿತ್ ಹೊರಹೋಗಬೇಕಾಯಿತು. ಈ ಸ್ಥಿತಿಯಲ್ಲಿ ಭಾರತದ ಮುಂದೆ ದೊಡ್ಡ ಸವಾಲೇ ಇತ್ತು.
ಆದರೆ ಭಾರತದ ಆಟಗಾರರು ಸಮರಾಂಗಣದಲ್ಲಿದ್ದ ಯೋಧರಂತೆ ಹೋರಾಡಿದರು. 22ನೇ ನಿಮಿಷ ಪೆನಾಲ್ಲಿ ಕಾರ್ನರ್‌ನಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನೂ ಗಳಿಸಿಕೊಟ್ಟರು. ಪದೇಪದೇ ಮುಷ್ಟಿಕಟ್ಟಿಕೊಂಡು ಸಂಭ್ರಮ ಆಚರಿಸಿ ತಂಡಕ್ಕೆ ವಿಶ್ವಾಸ ಮೂಡಿಸಿದರು.
ಆದರೆ ಈ ಸಂಭ್ರಮ ಬೇಗ ಕರಗಿತು. ಐದು ನಿಮಿಷಗಳಲ್ಲೇ ಬ್ರಿಟನ್‌ನ ಲೀ ಮಾರ್ಟನ್ ಸ್ಕೋರ್ ಸಮ ಮಾಡಿದರು. ಹರ್ಮನ್‌ಪ್ರೀತ್ ಅವರು ಆಟಗಾರರು ವಿಶ್ವಾಸಗುಂದದಂತೆ ಎಚ್ಚರಿಕೆ ವಹಿಸಿದರು. ಅವರ ನಿರೀಕ್ಷೆಗೆ ತಕ್ಕಂತೆ ಆಟಗಾರರೂ ಹೋರಾಡಿ ಇಂಗ್ಲೆಂಡ್ ತಂಡದ ಸರಣಿ ದಾಳಿಗಳನ್ನು ಹಿಮ್ಮೆಟ್ಟಿಸಿದರು. ಅದರಲ್ಲೂ ಶ್ರೀಜೇಶ್ ಅವರ ಗೋಲಿನೆದುರು ಬಂಡೆಗಲ್ಲಿನಂತೆ ನಿಂತರು. ಅವರ ಒಂದೊಂದು ತಡೆಯೂ ಆಟಗಾರರಲ್ಲಿ ಧೈರ್ಯಮೂಡಿಸಿತು. ಭಾರತ ಆಟಗಾರರ ಗಟ್ಟಿಮನೋಬಲಕ್ಕೆ ಈ ಪಂದ್ಯ
ನಿದರ್ಶನವಾಯಿತು. ಸೆಮಿಫೈನಲ್‌ನಲ್ಲಿ ಭಾರತ, ಜರ್ಮನಿಯನ್ನು ಮಂಗಳವಾರ ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.