ADVERTISEMENT

Paris Olympics | ಹಾಕಿ: ಬೆಲ್ಜಿಯಮ್‌ಗೆ ಮಣಿದ ಭಾರತ

ಪಿಟಿಐ
Published 1 ಆಗಸ್ಟ್ 2024, 13:02 IST
Last Updated 1 ಆಗಸ್ಟ್ 2024, 13:02 IST
<div class="paragraphs"><p>ಭಾರತದ ಸುಖಜೀತ್ ಸಿಂಗ್ ಹಾಗೂ&nbsp; ಬೆಲ್ಜಿಯಂನ ಆಂಟೊಯಿನ್ ಕಿನಾ </p></div>

ಭಾರತದ ಸುಖಜೀತ್ ಸಿಂಗ್ ಹಾಗೂ  ಬೆಲ್ಜಿಯಂನ ಆಂಟೊಯಿನ್ ಕಿನಾ

   

(ರಾಯಿಟರ್ಸ್‌ ಚಿತ್ರ)

ಪ್ಯಾರಿಸ್‌: ಆರಂಭದಲ್ಲಿ ಮುನ್ನಡೆ ಪಡೆದರೂ, ಅದನ್ನು ಕೈಚೆಲ್ಲಿದ ಭಾರತ ತಂಡ ಒಲಿಂಪಿಕ್ಸ್‌ ಹಾಕಿ ‘ಬಿ’ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಬೆಲ್ಜಿಯಂ ತಂಡಕ್ಕೆ ಗುರುವಾರ 1–2 ಗೋಲುಗಳಿಂದ ಸೋತಿತು. ಇದು ಭಾರತ ತಂಡಕ್ಕೆ ಮೊದಲ ಸೋಲು.

ADVERTISEMENT

ಎರಡೂ ತಂಡಗಳು ‘ಬಿ’ ಗುಂಪಿನಿಂದ ಈ ಮೊದಲೇ ಎಂಟರ ಘಟ್ಟಕ್ಕೆ ಅರ್ಹತೆ ಪಡೆದಿದ್ದವು.

ಇವ್ಸ್‌ ಡಿ ಮ್ಯಾನುವಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 18ನೇ ನಿಮಿಷ ಅಭಿಷೇಕ್‌ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ವಿರಾಮದ ನಂತರ ಬೆಲ್ಜಿಯಂ ಹಿಡಿತ ಸಾಧಿಸಿತು. 33ನೇ ನಿಮಿಷ ಥಿಬೌ ಸ್ಟಾಕ್‌ಬ್ರೊಕಿ ಸ್ಕೋರ್ ಸಮಮಾಡಿದರು. ಜಾನ್‌–ಜಾನ್‌ ದೊಮೆನ್‌ 44ನೇ ನಿಮಿಷ ನಿರ್ಣಾಯಕ ಗೋಲು ಗಳಿಸಿದರು. ಆ ಮೂಲಕ ಬೆಲ್ಜಿಯಂ ಟೂರ್ನಿಯಲ್ಲಿ ಇದುವರೆಗೆ ಅಜೇಯವಾಗುಳಿಯಿತು.

ಹರ್ಮನ್‌ಪ್ರೀತ್‌ ಬಳಗ ನ್ಯೂಜಿಲೆಂಡ್‌ ಮತ್ತು ಐರ್ಲೆಂಡ್‌ ವಿರುದ್ಧ ಜಯಗಳಿಸಿದರೆ, ಅರ್ಜೆಂಟೀನಾ ಜೊತೆ 1–1 ‘ಡ್ರಾ’ ಮಾಡಿಕೊಂಡಿತ್ತು. ಗುಂಪಿನ ತನ್ನ ಕೊನೆಯ ಪಂದ್ಯವನ್ನು ಶುಕ್ರವಾರ ಆಸ್ಟ್ರೇಲಿಯಾ ಎದುರು ಆಡಲಿದೆ.

ಮೊದಲಾರ್ಧದಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸಿತ್ತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದ ಭಾರತ, ‘ರೆಡ್‌ ಲಯನ್ಸ್‌’ ವಿರುದ್ಧ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ರಕ್ಷಣಾ ವಿಭಾಗವೂ ಬೆಲ್ಜಿಯಮ್‌ ತಂಡಕ್ಕೆ ಸ್ಕೋರಿಂಗ್ ಅವಕಾಶ ನೀಡಿಲಿಲ್ಲ. ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಯಶಸ್ವಿ ಆಗಿ ತಡೆಯಿತು.

ಆದರೆ ಪ್ರತಿದಾಳಿಗಳನ್ನು ನಡೆಸಿದ ಭಾರತಕ್ಕೆ ಅಭಿಷೇಕ್‌ ಮುನ್ನಡೆ ಒದಗಿಸಿದರು. ‘ಡಿ’ ಆವರಣದ ಬಳಿ ಎದುರಾಳಿ ತಂಡದ ಆರ್ಥ್‌ ಡಿ ಸ್ಲೂವರ್ ಅವರಿಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಅಭಿಷೇಕ್‌ ಮುನ್ನುಗ್ಗಿ ಎದುರಾಳಿ ರಕ್ಷಣೆ ಆಟಗಾರರನ್ನು ತಪ್ಪಿಸಿ ಪಂದ್ಯದ ಮೊದಲ ಗೋಲು ಗಳಿಸಿದರು.

25ನೇ ನಿಮಿಷ ಭಾರತಕ್ಕೆ ದೊರೆತ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಪರಿವರ್ತಿಸುವಲ್ಲಿ ಅಮಿತ್ ರೋಹಿದಾಸ್‌ ಎಡವಿದರು.

ಆದರೆ ಉತ್ತರಾರ್ಧದಲ್ಲಿ ಬೆಲ್ಜಿಯಂ ಸ್ಕೋರ್ ಸಮಮಾಡಲು ಇನ್ನಿಲ್ಲದ ಯತ್ನ ನಡೆಸಿತು. ಫ್ಲೊರೆಂಟ್‌ ವಾನ್ ಬೆಲ್‌ ಅವರು ಎಡಗಡೆಯಿಂದ ಚೆಂಡನ್ನು ಮುನ್ನಡೆಸಿ ಗೋಲಿನ ಬಳಿ ಹೊಂಚುಹಾಕುತ್ತಿದ್ದ  ಸ್ಟಾಕ್‌ಬ್ರೊಕಿ ಅವರಿಗೆ ಪಾಸ್‌ ಮಾಡಿದರು. ಅವರು ಈ ಅವಕಾಶ ವ್ಯರ್ಥಪಡಿಸಲಿಲ್ಲ.

ಬೆಲ್ಜಿಯಂ ನಂತರ ಬೆನ್ನುಬೆನ್ನಿಗೆ ಮೂರು ಪೆನಾಲ್ಟಿ ಕಾರ್ನರ್ ಪಡೆಯಿತು. ಇದರಲ್ಲಿ ಕೊನೆಯ ಅವಕಾಶವನ್ನು ದೋಮನ್‌ ಗೋಲಾಗಿಸುವಲ್ಲಿ ಯಶಸ್ವಿ ಆದರು.

ಭಾರತಕ್ಕೆ ಅಂತಿಮ ಕ್ವಾರ್ಟರ್‌ನಲ್ಲಿ ಅವಕಾಶಗಳು ದೊರೆತರೂ, ಬೆಲ್ಜಿಯಂನ ರಕ್ಷಣೆ ಭೇದಿಸಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.