ಟೋಕಿಯೊ: ತಂಡದ ನೀತಿ–ನಿಯಮ ಉಲ್ಲಂಘಿಸಿ ಧೂಮಪಾನ, ಮದ್ಯಪಾನ ಮಾಡಿ ಸಿಕ್ಕಿಬದ್ದ ಕಾರಣ ಜಪಾನ್ ಮಹಿಳಾ ಜಿಮ್ನಾಸ್ಟಿಕ್ಸ್ ತಂಡದ ನಾಯಕಿ ಶೋಕೊ ಮಿಯಾಟಾ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡೆಗಳಿಂದ ಶುಕ್ರವಾರ ಹಿಂದೆ ಸರಿದಿದ್ದಾರೆ.
ಜಪಾನ್ ಜಿಮ್ನಾಸ್ಟಿಕ್ಸ್ ಸಂಸ್ಥೆ ಈ ವಿಷಯ ತಿಳಿಸಿದೆ. 19 ವರ್ಷ ವಯಸ್ಸಿನ ಮಿಯಾಟಾ, ಮೊನಾಕೊದಲ್ಲಿ ನಡೆಯುತ್ತಿದ್ದ ತಂಡದ ತರಬೇತಿ ಶಿಬಿರ ತೊರೆದು ಗುರುವಾರ ಜಪಾನ್‌ಗೆ ಬಂದಿಳಿದಿದ್ದರು. ವಿಚಾರಣೆ ವೇಳೆ ಧೂಮಪಾನ, ಮದ್ಯಪಾನ ಮಾಡಿದ್ದು ದೃಢಪಟ್ಟಿದೆ.
ತಂಡದಲ್ಲಿ ಈಗ ಐವರ ಬದಲು ನಾಲ್ವರು ಮಾತ್ರ ಇರುತ್ತಾರೆ ಎಂದು ಸಂಸ್ಥೆ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದೆ. ‘ಇದಕ್ಕಾಗಿ ನಾವು ಹೃದಯಾಂತರಾಳದಿಂದ ಕ್ಷಮೆ ಕೇಳುತ್ತೇವೆ’ ಎಂದು ಸಂಸ್ಥೆಯ ಅಧ್ಯಕ್ಷ ತಡಾಶಿ ಫುಜಿಟಾ ತಿಳಿಸಿದ್ದಾರೆ. ಇತರ ಅಧಿಕಾರಿಗಳ ಜೊತೆ ಮಿಯಾಟಾ ಅವರ ವೈಯಕ್ತಿಕ ಕೋಚ್ ಮುತ್ಸುಮಿ ಹರಾಡ ಅವರೂ ಇದ್ದರು.
1964ರ ಟೋಕಿಯೊ ಕ್ರೀಡೆಗಳ ನಂತರ ಜಪಾನ್ ತಂಡವು ಇಲ್ಲಿ ಚಿನ್ನಕ್ಕಾಗಿ ಪ್ರಬಲ ದಾವೇದಾರನಾಗಿತ್ತು. ತಂಡದ ಐದೂ ಮಂದಿಗೆ ಇದು ಮೊದಲ ಒಲಿಂಪಿಕ್ಸ್ ಆಗಿತ್ತು.
‘ಮಿಯಾಟಾ ವರ್ತನೆ ಅತಿರೇಕದ್ದಾತ್ತು. ಅತ್ಯುನ್ನತ ಮಟ್ಟದಲ್ಲಿ ಉತ್ತಮ ಸಾಧನೆ ತೋರಲೇಬೇಕಾದ ತೀವ್ರ ಒತ್ತಡದಲ್ಲಿದ್ದರು’ ಎಂದು ಕೋಚ್ ಹರಾಡ ತಿಳಿಸಿದ್ದಾರೆ. ‘ಒತ್ತಡದ ಭಾರದೊಡನೆ ಆಕೆ ದಿನ ಕಳೆಯುತ್ತಿದ್ದಳು’ ಎಂದು ಭಾವೊದ್ವೇಗಕ್ಕೆ ಒಳಗಾದ ಹರಾಡ ಹೇಳಿದರು.
ಅಮೆರಿಕದ ಸೂಪರ್‌ಸ್ಟಾರ್ ಜಿಮ್ನಾಸ್ಟ್ ಸಿಮೋನ್ ಬಿಲ್ಸ್ ಅವರು ಮಾನಸಿಕ ಒತ್ತಡದ ಕಾರಣ ಟೋಕಿಯೊ ಕ್ರೀಡೆಗಳ ಸ್ಪರ್ಧೆಯಿಂದ ಹಿಂದೆಸರಿದಿದ್ದರು.
ಜುಲೈ 27 ರಿಂದ ಆಗಸ್ಟ್ 5ರವರೆಗೆ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳು ನಿಗದಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.