ADVERTISEMENT

ಒರ್ಲಿಯನ್ಸ್‌ ಮಾಸ್ಟರ್ಸ್‌ ಟೂರ್ನಿ: ಪ್ರೀ ಕ್ವಾರ್ಟರ್‌ಗೆ ಕಶ್ಯಪ್‌, ಮಿಥುನ್‌

ಪಿಟಿಐ
Published 20 ಮಾರ್ಚ್ 2019, 18:49 IST
Last Updated 20 ಮಾರ್ಚ್ 2019, 18:49 IST
ಪರುಪಳ್ಳಿ ಕಶ್ಯಪ್‌
ಪರುಪಳ್ಳಿ ಕಶ್ಯಪ್‌   

ಒರ್ಲಿಯನ್ಸ್, ಫ್ರಾನ್ಸ್‌: ಭಾರತದ ಪರುಪಳ್ಳಿ ಕಶ್ಯಪ್ ಮತ್ತು ಮಿಥುನ್ ಮಂಜುನಾಥ್‌ ಇಲ್ಲಿ ನಡೆಯುತ್ತಿರುವ ಒರ್ಲಿಯನ್ಸ್‌ ಮಾಸ್ಟರ್ಸ್‌ ಬಿಡಬ್ಲ್ಯುಎಫ್‌ ಟೂರ್ ಬ್ಯಾಡ್ಮಿಂಟನ್ ಸೂಪರ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು.

ಆರನೇ ಶ್ರೇಯಾಂಕಿತ ಆಟಗಾರ ಕಶ್ಯಪ್‌ ಇಟಲಿಯ ರೊಜಾರಿಯೊ ಮಡಲೋನಿ ಅವರನ್ನು 21–15, 21–17ರಿಂದ ಮಣಿಸಿ 16ರ ಘಟ್ಟ ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿ ಅವರಿಗೆ ಜಪಾನ್‌ನ ಕೋಕಿ ವಟನಬೆ ಎದುರಾಳಿ. ಮಿಥುನ್‌ ಭಾರತದವರೇ ಆದ ಸಿದ್ಧಾರ್ಥ್ ಪ್ರತಾಪ್ ಸಿಂಗ್‌ ಎದುರು 21–18, 21–16ರಿಂದ ಗೆದ್ದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಮುಗ್ದಾ ಅಗ್ರೆ ಮತ್ತು ಶ್ರೀ ಕೃಷ್ಣಪ್ರಿಯ ಕುದರವಳ್ಳಿ ನಡುವೆ ತುರುಸಿನ ಪೈಪೋಟಿ ನಡೆ ಯಿತು. ಅಂತಿಮವಾಗಿ ಮುಗ್ದಾ 21–16, 20–22, 21–13ರಿಂದ ಗೆದ್ದು 16ರ ಘಟ್ಟ ಪ್ರವೇಶಿಸಿದರು.

ADVERTISEMENT

ಸ್ವಿಟ್ಜರ್ಲೆಂಡ್‌ನ ಸಬ್ರೀನಾ ಜಾಕ್ವೆಟ್‌ ವಿರುದ್ಧ ಅವರು ಮುಂದಿನ ಪಂದ್ಯದಲ್ಲಿ ಸೆಣಸಲಿದ್ದಾರೆ. ವೈದೇಹಿ ಚೌಧರಿ ಅವರನ್ನು 21–16, 21–19ರಿಂದ ಮಣಿಸಿ ಸಬ್ರೀನಾ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು.

ಧ್ರುವ–ಕುಹೂ ಜೋಡಿಗೆ ಗೆಲುವು

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಧ್ರುವ ಕಪಿಲ ಮತ್ತು ಕುಹೂ ಗರ್ಗ್‌ ಜೋಡಿ ಜರ್ಮನಿಯ ಜಾನ್‌ ಕಾಲಿನ್‌ ವೊಲ್ಕರ್‌ ಮತ್ತು ಇವಾ ಜನ್ಸೆನ್ಸ್‌ ವಿರುದ್ಧ 21–18, 21–19ರಿಂದ ಗೆದ್ದು ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು.

ಭಾರತದ ತರುಣ್ ಕೋನ ಮತ್ತು ಮಲೇಷ್ಯಾದ ಲಿಮ್ ಖಿಮ್ ವಾಹ್‌ ಜೋಡಿ ಅಲ್ಜೀರಿಯಾದ ಮೊಹಮ್ಮದ್ ಅಬ್ದುಲ್‌ ರಹೀಂ ಬೆಲಾರ್ಬಿ ಮತ್ತು ಆದಿಲ್‌ ಹಮೆಕ್‌ ಅವರನ್ನು 21–16, 21–15ರಿಂದ ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.