ನವದೆಹಲಿ: ಮಹಿಳೆಯರ ಹಾಕಿ ಇಂಡಿಯಾ ಲೀಗ್(ಎಚ್‌ಈಎಲ್) ಚೊಚ್ಚಲ ಆವೃತ್ತಿಗೆ ಆಟಗಾರ್ತಿಯರನ್ನು ಖರೀದಿಸುವ ನಿಟ್ಟಿನಲ್ಲಿ ನಾಳೆ ರಾಜಧಾನಿ ನವದೆಹಲಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, 350ಕ್ಕೂ ಅಧಿಕ ಆಟಗಾರ್ತಿಯರು ಪಟ್ಟಿಯಲ್ಲಿದ್ದಾರೆ.
250 ಮಂದಿ ದೇಶೀಯ ಆಟಗಾರ್ತಿಯರು, 70ಕ್ಕೂ ಅಧಿಕ ವಿದೇಶಿ ಆಟಗಾರ್ತಿಯರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಭಾರತ ಹಾಕಿ ತಂಡದ ಗೋಲ್ ಕೀಪರ್ ಸವಿತಾ, ರಾಷ್ಟ್ರೀಯ ತಂಡದ ನಾಯಕಿ ಸಲೀಮಾ ಟೆಟೆ, ಉದಯೋನ್ಮುಖ ಡ್ರ್ಯಾಗ್ ಫ್ಲಿಕರ್ ದೀಪಿಕಾ, ಅತಿ ಹೆಚ್ಚು ಪಂದ್ಯಗಳನ್ನಾಡಿರುವ ವಂದನಾ ಕಟಾರಿಯಾ ಮತ್ತು ಖ್ಯಾತ ಫಾರ್ವರ್ಡ್ ಆಟಗಾರ್ತಿ ಲಾಲ್ರೆಮ್ಸಿಯಾಮಿ ಹರಾಜಿನಲ್ಲಿ ಭಾಗವಹಿಸುತ್ತಿರುವ ಪ್ರಮುಖರಾಗಿದ್ದಾರೆ.
ಭಾರತದ ಹಾಕಿ ತಂಡದ ಮಾಜಿ ಆಟಗಾರ್ತಿಯರಾದ ಯೋಗಿತಾ ಬಾಲಿ, ಲಿಲಿಮಾ ಮಿನ್ಜ್, ನಮಿತಾ ತೊಪ್ಪೊ ಸಹ ಹರಾಜಿನಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, ಸರಣಿಯ ರೋಚಕತೆಯನ್ನು ಹೆಚ್ಚಿಸಿದೆ.
ಹೆಸರಾಂತ ಅಂತರರಾಷ್ಟ್ರೀಯ ಆಟಗಾರ್ತಿಯರ ಪೈಕಿ ಡೆಲ್ಫಿನಾ ಮೆರಿನೊ (ಅರ್ಜೆಂಟೀನಾ), ಚಾರ್ಲೊಟ್ ಸ್ಟ್ಯಾಪೆನ್‌ಹಾರ್ಸ್ಟ್ (ಜರ್ಮನಿ), ಮರಿಯಾ ಗ್ರಾನಾಟ್ಟೊ (ಅರ್ಜೆಂಟೀನಾ), ರಾಚೆಲ್ ಲಿಂಚ್ (ಆಸ್ಟ್ರೇಲಿಯಾ), ಮತ್ತು ನೈಕ್ ಲೊರೆನ್ಜ್ (ಜರ್ಮನಿ) ಹರಾಜಿನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.
ಚೊಚ್ಚಲ ಮಹಿಳೆಯರ ಹಾಕಿ ಇಂಡಿಯಾ ಲೀಗ್‌ನಲ್ಲಿ ಸದ್ಯ 4 ತಂಡಗಳು ಭಾಗವಹಿಸುತ್ತಿದ್ದು, ಎರಡನೇ ಆವೃತ್ತಿಗೆ ಮತ್ತೆರಡು ತಂಡಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.
ಈ ವರ್ಷದ ಪಂದ್ಯಾವಳಿಗೆ ಸೂರ್ಮ ಹಾಕಿ ಕ್ಲಬ್, ಶ್ರಾಚಿ ರಹ್ರ್ ಬೆಂಗಾಲ್ ಟೈಗರ್ಸ್, ಡೆಲ್ಲಿ ಎಸ್‌ಜಿ ಪೈಪರ್ಸ್ ಮತ್ತು ಒಡಿಶಾ ವಾರಿಯರ್ಸ್ ತಂಡಗಳು ಭಾಗವಹಿಸಲಿವೆ. ದ್ವಿತೀಯ ಆವೃತ್ತಿಗೆ ಹೈದರಾಬಾದ್ ತೂಫಾನ್ಸ್ ಮತ್ತು ಬಿಸಿ ಜಿಂದಾಲ್ ಸಮೂಹ ಒಡೆತನದ ಮತ್ತೊಂದು ತಂಡ ಭಾಗವಹಿಸಲಿದೆ.
ಪ್ರತಿ ತಂಡವು 16 ಮಂದಿ ಭಾರತೀಯ ಆಟಗಾರ್ತಿಯರು(ನಾಲ್ವರು ಜೂನಿಯರ್ ಆಟಗಾರ್ತಿಯರು ಕಡ್ಡಾಯ) ಸೇರಿ 24 ಮಂದಿಯನ್ನು ಹೊಂದಿರುತ್ತದೆ. 8 ಮಂದಿ ವಿದೇಶಿ ಆಟಗಾರ್ತಿಯರ ಖರೀದಿಗೆ ಅವಕಾಶವಿದೆ.
ಫ್ರಾಂಚೈಸಿಗಳ ಬಳಿ ಆಟಗಾರ್ತಿಯರ ಖರೀದಿಗೆ ತಲಾ ₹2 ಕೋಟಿ ಇದ್ದು, ₹10 ಲಕ್ಷ, ₹5 ಲಕ್ಷ ಮತ್ತು ₹2 ಲಕ್ಷದ ಮೂರು ಸ್ಲ್ಯಾಬ್‌ಗಳಲ್ಲಿ ಬೆಲೆ ನಿಗದಿಯಾಗಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.