ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯದಿಂದ ಭಾರತದ ಕುಸ್ತಿಪಟು ವಿನೇಶಾ ಫೋಗಟ್ ಅವರು ಅನರ್ಹಗೊಂಡಿರುವುದು ಕೋಟ್ಯಂತರ ಭಾರತೀಯರಿಗೆ ನಿರಾಸೆ ಮೂಡಿಸಿದೆ.
ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶಾ ಅವರನ್ನು 100 ಗ್ರಾಂ ಹೆಚ್ಚು ತೂಕ ಹೊಂದಿದ್ದಕ್ಕೆ ಒಲಿಂಪಿಕ್ಸ್ ಸಂಸ್ಥೆ ಅನರ್ಹಗೊಳಿಸಿದೆ.
ಮಂಗಳವಾರ ನಡೆದ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಸೆಮಿಫೈನಲ್‌ನಲ್ಲಿ ವಿನೇಶಾ 5–0ಯಿಂದ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ವಿರುದ್ಧ ಗೆದ್ದಿದ್ದರು. ಇಂದು ರಾತ್ರಿ ನಡೆಯುವ ಫೈನಲ್ ಪಂದ್ಯದಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಅವರನ್ನು ವಿನೇಶಾ ಎದುರಿಸಬೇಕಿತ್ತು.
ಭಾರತದ ಒಲಿಂಪಿಕ್ಸ್ ಸಂಸ್ಥೆಯು (ಐಒಸಿ) ವಿನೇಶಾ ಅನರ್ಹತೆಯನ್ನು ಖಚಿತಪಡಿಸಿದ್ದು, ಆಕೆಯ ಖಾಸಗಿತನವನ್ನು ಗೌರವಿಸುವಂತೆ ಒತ್ತಾಯಿಸಿದೆ.
‘ಒಲಿಂಪಿಕ್ಸ್ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದಲ್ಲಿ ವಿನೇಶಾ ಫೋಗಟ್ ಅನರ್ಹಗೊಂಡಿರುವ ಸುದ್ದಿಯನ್ನು ಭಾರತ ತಂಡ ಹಂಚಿಕೊಂಡಿದೆ. ರಾತ್ರಿ ಇಡೀ ನಮ್ಮ ತಂಡವು ಸಾಕಷ್ಟು ಶ್ರಮ ವಹಿಸಿ ತಯಾರಿ ನಡೆಸಿದರೂ ಸಹ ಇಂದು ಬೆಳಿಗ್ಗೆ ವಿನೇಶಾ ಅವರ ತೂಕ 50 ಕೆ.ಜಿಗಿಂತ ಕೆಲವು ಗ್ರಾಂಗಳಷ್ಟು ಹೆಚ್ಚಳವಾಗಿತ್ತು’ ಎಂದು ಐಒಸಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿನೇಶಾ ಅವರ ಆಹಾರ ಕ್ರಮ (ಡಯಟ್) ಮಾಹಿತಿ ಇಲ್ಲಿದೆ...
ವಿನೇಶಾ ಫೋಗಟ್ ಅವರು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಎಬಿಪಿ ಲೈವ್‌ನ ವರದಿಯ ಪ್ರಕಾರ, ತುಪ್ಪ ಮತ್ತು ಸಿಹಿತಿಂಡಿಗಳ ಸೇವನೆಯನ್ನು ನಿಲ್ಲಿಸಲು ತಜ್ಞರು ಫೋಗಟ್‌ಗೆ ಸಲಹೆ ನೀಡಿದ್ದರು. ಹಾಗಾಗಿ ಅವರು ಪೌಷ್ಟಿಕಾಂಶ ಮತ್ತು ಹೆಚ್ಚಿನ ಪ್ರೋಟೀನ್‌ಯುಕ್ತ ಆಹಾರವನ್ನು ಮಾತ್ರ ಸೇವಿಸುತ್ತಿದ್ದರು ಎಂದು ವರದಿಯಾಗಿದೆ.
ಫೋಗಟ್ ಅವರು ಬೆಳಿಗ್ಗೆ ಉಪಹಾರಕ್ಕೆ ಹಣ್ಣುಗಳು, ಓಟ್‌ಮೀಲ್ ಮತ್ತು ಮೊಟ್ಟೆಗಳನ್ನು ಸೇವಿಸುತ್ತಿದ್ದರು. ಮಧ್ಯಾಹ್ನದ ಊಟದಲ್ಲಿ ರೊಟ್ಟಿ, ಅನ್ನ, ದಾಲ್, ತರಕಾರಿಗಳನ್ನು ಸೇವಿಸುತ್ತಿದ್ದರು. ಆದೇ ರೀತಿ ಸಂಜೆಯ ತಿಂಡಿಗೆ ಡ್ರೈ ಫ್ರೂಟ್ಸ್ ಮತ್ತು ಪ್ರೊಟೀನ್ ಶೇಕ್ ತೆಗೆದುಕೊಳ್ಳುತ್ತಿದ್ದರು. ಫೋಗಾಟ್ ಅವರು ರಾತ್ರಿ ವೇಳೆ ಲಘು ಭೋಜನಕ್ಕೆ ಆದ್ಯತೆ ನೀಡುತ್ತಿದ್ದರು. ಸಾಮಾನ್ಯವಾಗಿ ಸೂಪ್ ಮತ್ತು ಸಲಾಡ್‌ಗಳನ್ನು ಮಾತ್ರ ಸೇವಿಸುತ್ತಿದ್ದರು.
ವಿನೇಶಾ ಅವರು ಹಾಲು ಮತ್ತು ವಿವಿಧ ಬಗೆಯ ಹಾಲಿನ ಜ್ಯೂಸ್‌ಗಳು ಮತ್ತು ತಿನಿಸುಗಳನ್ನು ಸೇವಿಸುತ್ತಿದ್ದರು. ಆಕೆ ಪ್ರತಿದಿನ ಸುಮಾರು ನಾಲ್ಕರಿಂದ ಐದು ಕಿಲೋಗ್ರಾಂಗಳಷ್ಟು ಹಾಲು ಕುಡಿಯುತ್ತಿದ್ದರು. ಆದೇ ರೀತಿ ಮೊಸರನ್ನು ಸಹ ಸೇವಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಫೋಗಟ್ ಅವರು ಜಂಕ್ ಫುಡ್‌ನಿಂದ ದೂರ ಉಳಿದಿದ್ದರು ಎಂದು ವರದಿಯಾಗಿದೆ. ಆಕೆ ಒಮ್ಮೆ ಪಿಜ್ಜಾ ತಿಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ಜಂಕ್ ಫುಡ್‌ನಿಂದ ದೂರ ಉಳಿದಿದ್ದು, ಯಾವಾಗಲೂ ಮನೆಯಲ್ಲಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸುತ್ತಿದ್ದರು.
ಫೋಗಟ್ ಅವರು ವಾರದಲ್ಲಿ ಒಂದು ದಿನ ಮಾತ್ರ ಆದ್ಯತೆಯ ಆಹಾರ ಕ್ರಮಕ್ಕೆ ಬ್ರೇಕ್ ಹಾಕುತ್ತಿದ್ದರು. ಇದರೊಂದಿಗೆ ಅವರು ಮಾನಸಿಕ ಯೋಗಕ್ಷೇಮಕ್ಕೆ ಒತ್ತು ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.