ಕರಾಚಿ: ಇಟಲಿಯಲ್ಲಿ ಒಲಿಂಪಿಕ್ ಅರ್ಹತಾ ಬಾಕ್ಸಿಂಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ಪಾಕಿಸ್ತಾನದ ಯುವ ಬಾಕ್ಸರ್ ಜೊಹೆಬ್ ರಶೀದ್, ತಂಡದ ಸಹ ಆಟಗಾರನ ಪರ್ಸ್‌ನಿಂದ ಹಣವನ್ನು ಕದ್ದು ನಾಪತ್ತೆಯಾಗಿದ್ದಾರೆ ಎಂದು ಪಾಕಿಸ್ತಾನ ಅಮೆಚೂರ್ ಬಾಕ್ಸಿಂಗ್ ಫೆಡರೇಷನ್ ಮಂಗಳವಾರ ತಿಳಿಸಿದೆ.
ಫೆಡರೇಷನ್‌ನ ಹಿರಿಯ ಅಧಿಕಾರಿಯೊಬ್ಬರು ಇದನ್ನು ಇಟಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದಾರೆ ಮತ್ತು ಘಟನೆಯ ಬಗ್ಗೆ ಪೊಲೀಸರಿಗೆ ದೂರು ಸಹ ಸಲ್ಲಿಸಿದ್ದಾರೆ ಎಂದು ಹೇಳಿದೆ. ಜೋಹೆಬ್ ಸದ್ಯ ಯಾರೊಂದಿಗೂ ಸಂಪರ್ಕದಲ್ಲಿಲ್ಲ.
ಕಳೆದ ವರ್ಷ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಜೊಹೆಬ್, ಉದಯೋನ್ಮುಖ ಪ್ರತಿಭೆ ಎನಿಸಿದ್ದರು.
‘ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಐದು ಸದಸ್ಯರ ತಂಡದ ಭಾಗವಾಗಿ ಅಲ್ಲಿಗೆ ಹೋಗಿದ್ದ ಜೊಹೆಬ್ ರಶೀದ್ ವರ್ತಿಸಿದ ರೀತಿ ಫೆಡರೇಶನ್ ಮತ್ತು ದೇಶಕ್ಕೆ ಮುಜುಗರ ಉಂಟು ಮಾಡಿದೆ’ ಎಂದು ರಾಷ್ಟ್ರೀಯ ಒಕ್ಕೂಟದ ಕಾರ್ಯದರ್ಶಿ ಕರ್ನಲ್ ನಾಸಿರ್ ಅಹ್ಮದ್ ಹೇಳಿದ್ದಾರೆ.
ಮಹಿಳಾ ಬಾಕ್ಸರ್ ಲಾರಾ ಇಕ್ರಮ್ ತರಬೇತಿಗಾಗಿ ಹೊರಗೆ ಹೋಗಿದ್ದರು. ಆಗ ಜೊಹೆಬ್ ರಿಷಪ್ಷನ್ ಕೌಂಟರ್‌ನಿಂದ ಆಕೆಯ ಕೋಣೆಯ ಕೀ ಪಡೆದು, ಅವರ ಪರ್ಸ್‌ನಿಂದ ವಿದೇಶಿ ಕರೆನ್ಸಿ ಕಳವು ಮಾಡಿ ನಾಪತ್ತೆಯಾಗಿದ್ದಾರೆ ಎಂದು ನಾಸಿರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.