ADVERTISEMENT

ಬಿಲಿಯರ್ಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌: ಪಂಕಜ್‌ಗೆ 25ನೇ ವಿಶ್ವ ಕಿರೀಟ

ಪಿಟಿಐ
Published 8 ಅಕ್ಟೋಬರ್ 2022, 14:23 IST
Last Updated 8 ಅಕ್ಟೋಬರ್ 2022, 14:23 IST
ಪಂಕಜ್‌ ಅಡ್ವಾಣಿ
ಪಂಕಜ್‌ ಅಡ್ವಾಣಿ   

ಕ್ವಾಲಾಲಂಪುರ: ಬೆಂಗಳೂರಿನ ಪಂಕಜ್‌ ಅಡ್ವಾಣಿ ಅವರು ಕ್ವಾಲಾಲಂಪುರದಲ್ಲಿ ನಡೆದ ಬಿಲಿಯರ್ಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಅವರ ವೃತ್ತಿಜೀವನದ 25ನೇ ವಿಶ್ವ ಕಿರೀಟ ಇದಾಗಿದೆ.

ಶನಿವಾರ ನಡೆದ ಫೈನಲ್‌ನಲ್ಲಿ ಪಂಕಜ್‌, ಭಾರತದವರೇ ಆದ ಸೌರವ್‌ ಕೊಠಾರಿ ಅವರನ್ನು 4–0 ಫ್ರೇಮ್‌ಗಳಿಂದ ಮಣಿಸಿದರು. ವಿಶ್ವ ಬಿಲಿಯರ್ಡ್ಸ್‌ನಲ್ಲಿ ಅವರು ಸತತ ಐದನೇ ಸಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

‘ಬೆಸ್ಟ್‌ ಆಫ್‌ 7’ ಫ್ರೇಮ್‌ಗಳ ಫೈನಲ್‌ನಲ್ಲಿ ಸೊಗಸಾದ ಪ್ರದರ್ಶನ ನೀಡಿದ ಅಡ್ವಾಣಿ, ನೇರ ಫ್ರೇಮ್‌ಗಳಿಂದ ಗೆದ್ದರು. ‘150 ಅಪ್‌’ ಅಂದರೆ ಮೊದಲು 150 ಪಾಯಿಂಟ್ಸ್ ಗಳಿಸುವ ಆಟಗಾರ ಫ್ರೇಮ್‌ ಗೆಲ್ಲುವ ಮಾದರಿಯಲ್ಲಿ ನಡೆದ ಫೈನಲ್‌ನಲ್ಲಿ ಅವರು 151–0, 150–31, 153–12, 150–29 ರಲ್ಲಿ ಜಯಿಸಿದರು.

ADVERTISEMENT

ಮೊದಲ ಫ್ರೇಮ್‌ನಲ್ಲಿ ಒಂದೇ ಬ್ರೇಕ್‌ನಲ್ಲಿ ಅವರು 149 ಪಾಯಿಂಟ್ಸ್‌ ಗಳಿಸಿದರೆ, ಮೂರನೇ ಫ್ರೇಮ್‌ನ 153 ಪಾಯಿಂಟ್ಸ್‌ಗಳನ್ನೂ ಒಂದೇ ಬ್ರೇಕ್‌ನಲ್ಲಿ ಗಳಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟರು.

ಅಡ್ವಾಣಿ ಅವರು ನಾಲ್ಕು ಫ್ರೇಮ್‌ಗಳಿಂದ 600ಕ್ಕೂ ಅಧಿಕ ಪಾಯಿಂಟ್ಸ್‌ ಕಲೆಹಾಕಿದರೆ, ಕೊಠಾರಿ ಕೇವಲ 72 ಪಾಯಿಂಟ್ಸ್‌ ಮಾತ್ರ ಗಳಿಸಿದರು.

‘ವಿಶ್ವ ಬಿಲಿಯರ್ಡ್ಸ್‌ ಪ್ರಶಸ್ತಿಯನ್ನು ಸತತ ಐದೇ ಸಲ ಗೆದ್ದಿರುವುದು ಸಂತಸ ಉಂಟುಮಾಡಿದೆ. ಈ ವರ್ಷ ಆಡಿದ ಎಲ್ಲ ಟೂರ್ನಿಗಳಲ್ಲೂ ನನ್ನ ಪ್ರದರ್ಶನ ತೃಪ್ತಿ ನೀಡಿದೆ’ ಎಂದು ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ.

ಅಡ್ವಾಣಿ ಅವರ ಕೊನೆಯ ವಿಶ್ವ ಕಿರೀಟ 12 ತಿಂಗಳ ಹಿಂದೆ ಕತಾರ್‌ನಲ್ಲಿ ನಡೆದಿದ್ದ ಐಬಿಎಸ್‌ಎಫ್‌ 6–ರೆಡ್‌ ಸ್ನೂಕರ್‌ ವಿಶ್ವಕಪ್‌ನಲ್ಲಿ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.