ಉಡುಪಿ: ಮಲ್ಪೆ ಕಡಲತಡಿಯಲ್ಲಿ ದೇಶದ ಚೊಚ್ಚಲ ಸ್ಟಾಂಡಿಂಗ್ ಪ್ಯಾರಾ ವಾಲಿಬಾಲ್ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಸೆ.27ರಿಂದ29ರವರೆಗೆ ನಡೆಯಲಿದೆ. 15 ರಾಜ್ಯಗಳಿಂದ 31 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ.
ಗುರುವಾರ ಬೆಳಿಗ್ಗೆ 10ಕ್ಕೆ ಉದ್ಘಾಟನಾ ಪಂದ್ಯ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಚಾಲನೆ ನೀಡಲಿದ್ದಾರೆ. ಕರ್ನಾಟಕದ 9 ಕ್ರೀಡಾಪಟುಗಳನ್ನು ಒಳಗೊಂಡ ಮೂರು ತಂಡಗಳು ಭಾಗವಹಿಸುತ್ತಿವೆ. ಗೋವಾ, ತೆಲಂಗಾಣ, ತಮಿಳುನಾಡು, ಪುದುಚೇರಿ, ಮಹರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ತಾನ, ಹರ್ಯಾಣ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಜಾರ್ಖಂಡ್, ದೆಹಲಿ ರಾಜ್ಯಗಳ ತಲಾ 2 ತಂಡಗಳು ಭಾಗವಹಿಸುತ್ತಿವೆ.
ಒಂದೊಂದು ತಂಡದಲ್ಲಿ ತಲಾ ಮೂವರು ಆಟಗಾರರು ಆಡಲಿದ್ದಾರೆ.ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಒಟ್ಟಾಗಿ ಆಡುತ್ತಿರುವುದು ವಿಶೇಷ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಿಟ್ಟಿಂಗ್ ಪ್ಯಾರಾ ವಾಲಿಬಾಲ್ ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಕ್ರೀಡಾಪಟುಗಳು ಮೊದಲಬಾರಿಗೆ ಸ್ಟಾಂಡಿಂಗ್ ಬೀಚ್ ವಾಲಿವಾಲ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪ್ಯಾರಾಲಿಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಎಚ್.ಚಂದ್ರಶೇಖರ್ ಮಾಹಿತಿ ನೀಡಿದರು.
ಇಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳನ್ನು ಫೆಬ್ರುವರಿಯಲ್ಲಿ ಗೋವಾದಲ್ಲಿ ನಡೆಯಲಿರುವ ವರ್ಲ್ಡ್ ಪ್ಯಾರಾ ಬೀಚ್ ವಾಲಿಬಾಲ್ ಸೀರಿಸ್‌ನಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುವುದು. ಇದಕ್ಕಾಗಿ ವೀಕ್ಷಕರ ತಂಡ ಮಲ್ಪೆಗೆ ಆಗಮಿಸುತ್ತಿದೆ ಎಂದು ಅವರು ತಿಳಿಸಿದರು.
ವಿದೇಶಗಳಲ್ಲಿ ಸಿಟ್ಟಿಂಗ್ ಪ್ಯಾರಾ ಬೀಚ್ ವಾಲಿಬಾಲ್ ಹೆಚ್ಚು ಪ್ರಸಿದ್ಧಿ ಹೊಂದಿದೆ. ಆದರೆ, ಪ್ಯಾರಾ ಸ್ಟಾಂಡಿಂಗ್ ಬೀಚ್ ವಾಲಿಬಾಲ್ ಮುನ್ನಲೆಗೆ ಬಂದಿಲ್ಲ. ಹಾಗಾಗಿ, ಫೆಡರೇಷನ್ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಬಾರತದಲ್ಲಿ ಸ್ಟಾಂಡಿಂಗ್ ಪ್ಯಾರಾ ವಾಲಿಬಾಲ್ ರಾಷ್ಟ್ರಮಟ್ಟದ ಟೂರ್ನಿ ನಡೆಯುತ್ತಿರುವುದು ಇದೇ ಮೊದಲು ಎಂದು ಚಂದ್ರಶೇಖರ್ ತಿಳಿಸಿದರು.
ಅಂಗವೈಕಲ್ಯದ ಪ್ರಮಾಣ ಆಧರಿಸಿ ಎ, ಬಿ, ಸಿ ಎಂಬ ಮೂರು ವಿಭಾಗಳಲ್ಲಿ ಸ್ಪರ್ಧಿಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಶೇ 40ರಷ್ಟು ವೈಕಲ್ಯವಿದ್ದರೂ ಭಾಗವಹಿಸಲು ಅವಕಾಶವಿದೆ ಎಂದರು.
‘ವಿಭಿನ್ನ ಕ್ರೀಡೆ’
ಕುಳಿತು ಆಡುವ (ಸಿಟ್ಟಿಂಗ್) ಪ್ಯಾರಾ ವಾಲಿಬಾಲ್‌ಗಿಂತ ಸ್ಟಾಂಡಿಂಗ್ (ನಿಂತು ಆಡುವ) ಪ್ಯಾರಾ ವಾಲಿಬಾಲ್ ಭಿನ್ನ. ಕುಳಿತು ಆಡುವ ವಿಭಾಗದಲ್ಲಿ 6 ಸ್ಪರ್ಧಿಗಳು ನೆಲದಲ್ಲಿ ಕುಳಿತೇ ಪಂದ್ಯವನ್ನಾಡುತ್ತಾರೆ. ಆಟದ ಅಂಗಳ 10x6 ಮೀಟರ್ ಸುತ್ತಳತೆ ಹೊಂದಿರುತ್ತದೆ. 1.15 ಮೀಟರ್ ಎತ್ತರದಲ್ಲಿ ನೆಟ್ ಕಟ್ಟಲಾಗುತ್ತದೆ. ಆಟಗಾರರು ಬಾಲ್‌ಗೆ ಹೊಡೆಯುವಾಗ ಹಿಪ್ಸ್ ಕಡ್ಡಾಯವಾಗಿ ನೆಲಕ್ಕೆ ತಾಗಿರಲೇಬೇಕು. ಇಲ್ಲವಾದರೆ, ಪಾಯಿಂಟ್ ದಕ್ಕುವುದಿಲ್ಲ. ಆದರೆ, ನಿಂತು ಆಡುವ ವಾಲಿಬಾಲ್‌ಗೆ ನಿಯಮಗಳು ಬೇರೆಯೇ ಇವೆ ಎಂದು ಫೆಡರೇಷನ್ ರೆಫ್ರಿ ಮಾರ್ಟಿನ್ ತಿಳಿಸಿದರು.
ಸ್ಟಾಂಡಿಂಗ್ ಪ್ಯಾರಾ ವಾಲಿಬಾಲ್ ಕೋರ್ಟ್ 8x8 ಸುತ್ತಳತೆ ಹೊಂದಿರುತ್ತದೆ. ಟೆನ್ನಿಸ್ ಮಾದರಿಯಲ್ಲಿ ಆಟಗಾರರು ಆಗಾಗ ಸ್ವಸ್ಥಾನವನ್ನು ಬದಲಿಸಬಹುದು. ಆದರೆ, ಎದುರಾಳಿ ಆಟಗಾರರ ಕಣ್ಣನ್ನು ವಂಚಿಸಿ ದಾಳಿ ಮಾಡುವಂತಿಲ್ಲ. ದೃಷ್ಟಿಗೆ ನೇರವಾಗಿಯೇ ಆಡವಾಡಬೇಕು ಎಂದು ನಿಯಮಗಳನ್ನು ವಿವರಿಸಿದರು.
21 ಪಾಯಿಂಟ್‌ಗಳ ಸೆಟ್‌ನಲ್ಲಿ 7 ಪಾಯಿಂಟ್‌ಗಳಿಗೊಮ್ಮೆ ಕೋರ್ಟ್ ಬದಲಿಸಲಾಗುತ್ತದೆ. ಒಂದು ಸೆಟ್‌ನಲ್ಲಿ 2 ಬಾರಿ ವಿರಾಮಗಳನ್ನು ತೆಗೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಇಲ್ಲಿಯವರೆಗೂ ಇಬ್ಬರು ಸ್ಪರ್ಧಿಗಳು ಮಾತ್ರ ಸ್ಟಾಂಡಿಂಗ್ ವಿಭಾಗದಲ್ಲಿ ಭಾಗವಹಿಸಲು ಅವಕಾಶವಿತ್ತು. ಆದರೆ, ಪ್ಯಾರಾಲಿಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಮನವಿ ಮೇರೆಗೆ ಮೂವರು ಸ್ಪರ್ಧಿಗಳಿಗೆ ಆಡಲು ಅವಕಾಶ ಮಾಡಿಕೊಡಲಾಗಿದೆ. ಡಿಸೆಂಬರ್‌ನಲ್ಲಿ ನಿಯಮಗಳಿಗೆ ತಿದ್ದುಪಡಿಯಾಗುವ ಸಾದ್ಯತೆಗಳಿವೆ ಎಂದು ರೆಫ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.