ADVERTISEMENT

ಕಾಶ್ಮೀರದಿಂದ ಕನ್ಯಾಕುಮಾರಿ: ಪ್ಯಾರಾ ಸೈಕ್ಲಿಸ್ಟ್‌ಗಳ ಪಯಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 14:19 IST
Last Updated 31 ಡಿಸೆಂಬರ್ 2020, 14:19 IST
ಪ್ಯಾರಾ ಸೈಕ್ಲಿಸ್ಟ್‌ಗಳು ಬೆಂಗಳೂರಿನಿಂದ ಪಯಣ ಮುಂದುವರಿಸಿದ್ದ ಸಂದರ್ಭ
ಪ್ಯಾರಾ ಸೈಕ್ಲಿಸ್ಟ್‌ಗಳು ಬೆಂಗಳೂರಿನಿಂದ ಪಯಣ ಮುಂದುವರಿಸಿದ್ದ ಸಂದರ್ಭ   

ಬೆಂಗಳೂರು: ಆದಿತ್ಯ ಮೆಹ್ತಾ ಫೌಂಡೇಷನ್‌ (ಎಎಂಎಫ್) ಆಯೋಜಿಸಿರುವ ಇನ್ಫಿನಿಟಿ ರೈಡ್ 2020 ಗುರುವಾರ ಕನ್ಯಾಕುಮಾರಿ ತಲುಪಿತು. ಫೌಂಡೇಷನ್‌ನ ಸ್ಥಾಪಕ ಆದಿತ್ಯ ಮೆಹ್ತಾ ಅವರನ್ನು ಒಳಗೊಂಡ 30 ಪ್ಯಾರಾ ಸೈಕ್ಲಿಸ್ಟ್‌ಗಳ ತಂಡ ಈ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕಾಶ್ಮೀರದಿಂದ 45 ದಿನಗಳ ಹಿಂದೆ ಪ್ರಯಾಣ ಹೊರಟಿದ್ದರು.

ಬೆಂಗಳೂರು ಒಳಗೊಂಡಂತೆ 36 ನಗರಗಳಿಗೆ ಭೇಟಿ ನೀಡಿದ ಸೈಕ್ಲಿಸ್ಟ್‌ಗಳು ಒಟ್ಟು 3842 ಕಿ.ಮೀ ದೂರ ಕ್ರಮಿಸಿದ್ದರು. ವಿವೇಕಾನಂದ ಸ್ಮಾರಕದ ಬಳಿ ಸೈಕ್ಲಿಸ್ಟ್‌ಗಳನ್ನು ಕೇಂದ್ರ ಸಶಸ್ತ್ರ ದಳದ ಸಿಬ್ಬಂದಿ ಗುರುವಾರ ಸ್ವಾಗತಿಸಿದರು.

‘2013ರಲ್ಲೂ ನಾನು ಸೈಕಲ್ ಪ್ರಯಾಣ ಮಾಡಿದ್ದೆ. ಆ ಸಂದರ್ಭದಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಭಾರಿ ಸವಾಲು ಎದುರಾಗಿತ್ತು. ಆದರೆ ದಾರಿಯುದ್ದಕ್ಕೂ ಜನರು ತೋರಿದ ಪ್ರೀತಿ ಭರವಸೆ ಮೂಡಿಸಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಜನರು ಪ್ರೋತ್ಸಾಹಿಸಿದರು. ಪ್ಯಾರಾ ಸೈಕ್ಲಿಂಗ್‌ನಲ್ಲಿ ಚಾಂಪಿಯನ್ನರನ್ನು ಬೆಳೆಸುವ ನನ್ನ ಉದ್ದೇಶಕ್ಕೆ ಇದರಿಂದ ಬಲ ಸಿಕ್ಕಿದೆ’ ಎಂದು ಆದಿತ್ಯ ಮೆಹ್ತಾ ತಿಳಿಸಿದರು.

ADVERTISEMENT

ಕಳೆದ ವಾರ ಬೆಂಗಳೂರು ತಲುಪಿದ್ದ ಸೈಕ್ಲಿಸ್ಟ್‌ಗಳು ನಂತರ ಧರ್ಮಪುರಿಯತ್ತ ಪ್ರಯಾಣ ಬೆಳೆಸಿದ್ದರು. ಉದ್ಯಾನನಗರಿಯಲ್ಲಿ ಅಂಗವಿಕಲರು ನಡೆಸುತ್ತಿರುವ ಮಿಟ್ಟೆ ಕೆಫೆಗೆ ಭೇಟಿ ನೀಡಿದ ರೈಡರ್‌ಗಳು ಪಯಣದ ಅನುಭವಗಳನ್ನು ಕೆಫೆ ಉದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.