ಪ್ಯಾರಿಸ್ : ಭಾರತದ ನಿತೇಶ್ ಕುಮಾರ್ ಮತ್ತು ಸುಕಾಂತ್ ಕದಂ ಅವರು ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕ್ರಮವಾಗಿ ಎಸ್‌ಎಲ್3 ಮತ್ತು ಎಸ್‌ಎಲ್ 4 ವಿಭಾಗದ ಸೆಮಿಫೈನಲ್ ತಲುಪಿದರು. ಇವರಿಬ್ಬರೂ ಶನಿವಾರ ನಡೆದ ಪಂದ್ಯಗಳಲ್ಲಿ ತಮ್ಮ ಎದುರಾಳಿಗಳನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು.
ಕಳೆದ ವರ್ಷ ಚೀನಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ನಿತೇಶ್ 21–13, 21–14 ರಿಂದ ಥಾಯ್ಲೆಂಡ್‌ನ ಮೊಂಗ್‌ಖೊನ್ ಬುನ್ಸುನ್ ಅವರನ್ನು ಸೋಲಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರು. ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಬುನ್ಸುನ್ ಕೂಡ ನಾಲ್ಕರ ಘಟ್ಟ ತಲುಪಿದರು.
ಎಸ್‌ಎಲ್ 3 ವಿಭಾಗ ಸೊಂಟದ ಕೆಳಭಾಗ ಊನಗೊಂಡಿರುವ ಕ್ರೀಡಾಪಟುಗಳಿಗೆ ಮೀಸಲಾಗಿದೆ. ಇಲ್ಲಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದವರು ಸೆಮಿಗೆ ಮುನ್ನಡೆಯುತ್ತಾರೆ.
ಪುರುಷರ ಎಸ್‌ಎಲ್4 ವಿಭಾಗದಲ್ಲಿ ಸುಕಾಂತ್ ಅವರು 21–12, 21–12 ರಿಂದ ಥಾಯ್ಲೆಂಡ್‌ನ ತೀಮರೊಮ್ ಸಿರಿಪಾಂಗ್ ಅವರನ್ನು ಸೋಲಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದರು. ಭಾರತದವರೇ ಆದ ಸುಹಾಸ್ ಯತಿರಾಜ್ ಅವರೂ ಇದೇ ಗುಂಪಿನಿಂದ ಈ ಮೊದಲೇ ಸೆಮಿಫಫೈನಲ್ ತಲುಪಿದ್ದಾರೆ.
ಸುಕಾಂತ್ ಅವರು ಹಾಂಗ್‌ಝೌದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಮನ್‌ದೀಪ್ ಕೌರ್‌ಗೆ ಜಯ: ಮಹಿಳೆಯರ ಎಸ್‌ಎಲ್3 ವಿಭಾಗದಲ್ಲಿ ಮನ್‌ದೀಪ್ ಕೌರ್ 21–23, 21–10, 21–17 ರಿಂದ ಆಸ್ಟ್ರೇಲಿಯಾದ ವಿನೋಟ್ ಸೆಲಿನ್ ಆರೇಲಿ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು.
ಶುಕ್ರವಾರ ರಾತ್ರಿ ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಕನ್ನಡಿಗ ಅಧಿಕಾರಿ ಸುಹಾಸ್ ಯತಿರಾಜ್ ಮತ್ತು ಪಲಕ್ ಕೊಹ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಇವರಿಬ್ಬರು ಅಗ್ರ ಶ್ರೇಯಾಂಕದ ಹಿಕ್ಮತ್ ರಮ್ದಾನಿ– ಲೀನಿ ರತ್ರಿ ಒಕ್ಟಿಲಾ (ಇಂಡೊನೇಷ್ಯಾ) ಜೋಡಿಯ ಎದುರು 11–21, 17–21ರಲ್ಲಿ ಸೋತರು.
ನಿತೇಶ್ ಕುಮಾರ್– ತುಳಸಿಮತಿ ಮುರುಗೇಶನ್ ಕೂಡ 22–24, 19–21ರಲ್ಲಿ ಫ್ರಾನ್ಸ್‌ನ ಫಾಸ್ಟಿನ್ ನೊಯೆಲ್– ಲುಕಾಸ್ ಮಝುರ್ ಅವರಿಗೆ ಮಣಿಸಿದರು.
‘ಬಿ’ ಗುಂಪಿನಲ್ಲಿ ನಿತ್ಯಾ ಶಿವನ್ ಸುಮತಿ– ಶಿವರಾಜನ್ ಸೊಲೈಮಲೈ ಜೋಡಿ 21–7, 21–17ರಲ್ಲಿ ಚೈ ಸೆಯಾಂಗ್ ಅವರನ್ನು ಸೋಲಿಸಿತು.
ಕೈಗಳಿಲ್ಲದೇ, ಕಾಲಿನಿಂದಲೇ ಬಾಣಪ್ರಯೋಗ ಮಾಡುವ ಶೀತಲ್ ದೇವಿ, ಪ್ಯಾರಾಲಿಂಪಿಕ್ಸ್ ಆರ್ಚರಿ ಸ್ಪರ್ಧೆಯ ಮಹಿಳೆಯರ ಕಾಂಪೌಂಡ್ ಮುಕ್ತ ವಿಭಾಗದ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಶನಿವಾರ ಅಲ್ಪ ಅಂತರದಲ್ಲಿ ಸೋತಿದ್ದು ನಿರಾಸೆ ಮೂಡಿಸಿತು.
ಏಷ್ಯನ್ ಪ್ಯಾರಾಗೇಮ್ಸ್ ನಲ್ಲಿ ಎರಡು ಚಿನ್ನ ಗೆದ್ದಿರುವ, ಎರಡನೇ ಶ್ರೇಯಾಂಕದ ಶೀತಲ್ ಉತ್ತಮ ಪೈಪೋಟಿ ಕಂಡ ಹೋರಾಟದಲ್ಲಿ ಚಿಲಿಯ ಮರಿಯಾನಾ ಝುಂಗಿಯಾ ಎದುರು 137–138 ರಲ್ಲಿ ಸೋತರು. ಇದು ಶೀತಲ್ ಅವರಿಗೆ ಮೊದಲ ಪ್ಯಾರಾಲಿಂಪಿಕ್ಸ್ ಆಗಿತ್ತು.
ಭಾರತದ ಸರಿತಾ ದೇವಿ ಅವರೂ ಎಂಟರ ಘಟ್ಟದಲ್ಲಿ ನಿರ್ಗಮಿಸಿದರು. ಫರೀದಾಬಾ ದ್‌ನ ಸರಿತಾ ಎಂಟರ ಘಟ್ಟದಲ್ಲಿ ಕೊರಿಯಾದ ಓಝ್ನುರ್ ಕ್ಯೂರ್ ಗಿರ್ದಿ ಅವರಿಗೆ ಸೋತರು.
ಭಾರತದ ಸೈಕ್ಲಿಸ್ಟ್‌ಗಳಾದ ಅರ್ಷದ್ ಶೇಖ್ ಮತ್ತು ಜ್ಯೋತಿ ಗಡೇರಿಯಾ ಅವರು ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ತಮ್ಮ ವಿಭಾಗಗಳಲ್ಲಿ ಶನಿವಾರ ನಿರಾಸೆ ಮೂಡಿಸಿ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು.
ಶಾತೋಹು : ಭಾರತದ ರುಬಿನಾ ಫ್ರಾನ್ಸಿಸ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡೆಗಳ ಮಹಿಳೆಯರ ಏರ್ ಪಿಸ್ತೂಲ್ ಎಸ್‌ಎಚ್1 ವಿಭಾಗದಲ್ಲಿ ಶನಿವಾರ ಕಂಚಿನ ಪದಕ ಗೆದ್ದುಕೊಂಡರು.
25 ವರ್ಷ ವಯಸ್ಸಿನ ರುಬಿನಾ, ಎಂಟು ಮಂದಿಯಿದ್ದ ಫೈನಲ್ ಕಣದಲ್ಲಿ 211.1 ಸ್ಕೋರ್‌ನೊಡನೆ ಮೂರನೇ ಸ್ಥಾನ ಪಡೆದರು. ದಿನದ ಆರಂಭದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಮಧ್ಯಪ್ರದೇಶದ ಜಬಲ್ಪುರದ ಈ ಸ್ಪರ್ಧಿ ಏಳನೇ ಸ್ಥಾನ ಪಡೆದು ಫೈನಲ್
ಸುತ್ತಿಗೇರಿದ್ದರು.
ಇರಾನ್‌ನ ಸಾರೆ ಜಾವನ್‌ಮರ್ದಿ (236.8) ಚಿನ್ನದ ಪದಕ ಗಳಿಸಿದರೆ, ಟರ್ಕಿಯ ಐಸೆಲ್ ಓಜ್ಗಾನ್ (231.1) ಬೆಳ್ಳಿ ತಮ್ಮದಾಗಿಸಿಕೊಂಡರು.
ರುಬಿನಾ, ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಏಳನೇ ಸ್ಥಾನ ಗಳಿಸಿದ್ದರು.
ಈ ಬಾರಿ ಭಾರತ ತಂಡ ಪ್ಯಾರಿಸ್‌ಗೆ ತೆರಳುವ ಕೆಲವೇ ದಿನಗಳ ಮೊದಲು ವೈಲ್ಡ್ ಕಾರ್ಡ್ ಮೂಲಕ ರುಬಿನಾ ಪ್ಯಾರಾಲಿಂಪಿಕ್ಸ್ ಕೋಟಾ ಪಡೆದಿದ್ದರು.
ಇದು ಪ್ಯಾರಿಸ್ ಕ್ರೀಡೆಗಳಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ದೊರೆತ ನಾಲ್ಕನೇ ಹಾಗೂ ಒಟ್ಟಾರೆ ಐದನೇ ಪದಕ. ಅವನಿ ಲೇಖರಾ ಶುಕ್ರವಾರ ನಡೆದ ಮಹಿಳೆಯರ 10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಗೆದ್ದು ಸತತ ಎರಡನೇ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ಕೊರಳಿಗೇರಿಸಿಕೊಂ ಡಿದ್ದರು. ಇದೇ ಸ್ಪರ್ಧೆಯಲ್ಲಿ ಮೋನಾ ಅಗರವಾಲ್ ಕಂಚಿನ ಪದಕ ಗಳಿಸಿದ್ದರು.
ಮನೀಶ್ ನರ್ವಾಲ್ ಅವರು ಪುರುಷರ 10 ಮೀ. ಏರ್ ಪಿಸ್ತೂಲ್‌ನಲ್ಲಿ (ಎಸ್‌ಎಚ್1) ಬೆಳ್ಳಿ ಪದಕ ಜಯಿಸಿದ್ದರು. ಈ ಕ್ಲಾಸ್‌ನಲ್ಲಿ ಅಥ್ಲೀಟುಗಳು ಗನ್ ಹಿಡಿಯಲು ಸಮರ್ಥರಾಗಿದ್ದರೂ, ವೀಲ್ ಚೇರ್/ ಚೇರ್‌ನಲ್ಲಿ ಕುಳಿತು ಅಥವಾ ನಿಂತು ಶೂಟ್ ಮಾಡಬೇಕಾಗುತ್ತದೆ.
ಸ್ವರೂಪ್‌ಗೆ ನಿರಾಸೆ: ಸ್ವರೂಪ್ ಉನ್ಹಲ್ಕರ್ ಅವರು ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಅಷ್ಟೇನೂ ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ. 38 ವರ್ಷ ವಯಸ್ಸಿನ ಸ್ವರೂಪ್ ಕ್ವಾಲಿಫಿಕೇಷನ್ ಸುತ್ತಿನಲ್ಲಿ 14ನೇ ಸ್ಥಾನದೊಡನೆ ಹೊರಬಿದ್ದರು.
ಇದು ಸ್ವರೂಪ್‌ಗೆ ಎರಡನೇ ಪ್ಯಾರಾಲಿಂಪಿಕ್ಸ್. ಟೋಕಿಯೊದಲ್ಲಿ ಅವರಿಗೆ ಸ್ವಲ್ಪರದಲ್ಲೇ ಕಂಚಿನ ಪದಕ ಕೈತಪ್ಪಿತ್ತು. ಕೊಲ್ಹಾಪುರದ ಈ ಶೂಟರ್ ಶನಿವಾರ 613.4 ಪಾಯಿಂಟ್ಸ್ ಸಂಗ್ರಹಿಸಿದರು. ದಕ್ಷಿಣ ಕೊರಿಯಾದ ಪಾರ್ಕ್ ಜಿನ್ಹೊ 624.4 ಸ್ಕೋರ್‌ನೊಡನೆ 18 ಮಂದಿ ಸ್ಪರ್ಧಿಗಳ ಅರ್ಹತಾ ಸುರ್ತಿನಲ್ಲಿ ಅಗ್ರಸ್ಥಾನ ಪಡೆದರು.
ಸ್ವರೂಪ್ ಕ್ರಮವಾಗಿ 101.8, 103.0, 101.7, 101.8, 102.4, 102.7 ಸ್ಕೋರ್‌ನಡೊನೆ ಒಟ್ಟು 613.4 ಅಂಕ ಕಲೆಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.