ADVERTISEMENT

ಸ್ಕೈ ಡೈವಿಂಗ್‌!

ಡಾ.ಪ್ರೇಮಲತ ಬಿ.
Published 17 ಜುಲೈ 2018, 12:50 IST
Last Updated 17 ಜುಲೈ 2018, 12:50 IST
   

ಕ್ಷಣಗಳಲ್ಲೇ ನಮ್ಮ ಅಡ್ರಿನಲಿನ್ ಮಟ್ಟವನ್ನು ತಾರಕಕ್ಕೇರಿಸಿ ದೇಹಕ್ಕೆ ಅಪಾರ ರೋಚಕತೆ ಮತ್ತು ಸಾಹಸೀ ಮನೋಭಾವಕ್ಕೆ ಸಂತಸ ತರಬಲ್ಲಂತಹ ಕ್ರೀಡೆಗಳಿವೆ . ಇವುಗಳಲ್ಲಿ ಅಡಗಿರುವ ಪ್ರಾಣಾಂತಿಕ ಅಪಾಯಗಳಿಂದಲೇ ಇವು ಸಾಹಸೀ ಪ್ರಿಯರಿಗೆ ಅತ್ಯಂತ ಖುಷಿ ಕೊಡಬಲ್ಲವು .

ಕಾಲಿಗೆ ಹಗ್ಗ ಕಟ್ಟಿಕೊಂಡು ದೊಡ್ಡ ಸೇತುವೆಗಳ ಮೇಲಿಂದ ನೆಗೆವ ಬಂಗೀ ಜಂಪ್ ಆಗಲಿ , ಪರ್ವತಗಳನ್ನು ಏರುವುದಾಗಲೀ , ನೀರ ಮೇಲಿನ ರ್‌್ಯಾಫ್ಟಿಂಗ್‌ ಆಗಲೀ , ಫ್ರೀ ಸ್ಟೈಲ್ ಸ್ನೋ ಬೋರ್ಡ್‌ ಕ್ರೀಡೆಯಾಗಲೀ , ಪ್ಯಾರಾಶ್ಯೂಟ್ ಕಟ್ಟಿಕೊಂಡು ಆಕಾಶದಿಂದ ನೆಗೆಯುವುದಾಗಲೀ– ಈ ರೀತಿಯ ಸಾಹಸ ಕ್ರೀಡೆಗಳು ರೋಚಕವೇ . ಅದರಲ್ಲೂ ಸ್ಕೈ ಡೈವಿಂಗ್ ಎಂಬ ಕ್ರೀಡೆಗೆ ಅಗ್ರ ಸ್ಥಾನ .

ಸಾಹಸ ಕ್ರೀಡೆಗಳಿಗೆ ದುಬಾರಿ ಉಪಕರಣಗಳು , ಪೂರ್ವಸಿದ್ದತೆಗಳ ಅಗತ್ಯವಿರುತ್ತದೆ . ಇಲ್ಲವೆಂದಲ್ಲಿ ಪ್ರಾಣಕ್ಕೇ ಅಪಾಯ . ಸ್ಕೈ ಡೈವಿಂಗ್ ವಿಚಾರದಲ್ಲಿ ಹೆಲಿಕಾಪ್ಟರ್ , ವಿಮಾನದ ಅಗತ್ಯ ಬೀಳುವುದರಿಂದ ಇದು ದುಬಾರೀ ಸಾಹಸ ಕ್್ರೀಡೆ . ಹಾಗಿದ್ದೂ ಸ್ಕೈ ಡೈವಿಂಗ್ ಕ್ರೀಡೆ ಸಾಹಸಿಗರನ್ನು ಜಗತ್ತಿನಾದ್ಯಂತ ಸೆಳೆದಿದೆ . ಚಿಕ್ಕ ವಿಮಾನಗಳಲ್ಲಿ ಸಾವಿರಾರು ಅಡಿ ಎತ್ತರಕ್ಕೇರಿ ಆಗಸದಿಂದ ನೇರ ಕೆಳಕ್ಕೆ ನೆಗೆಯುತ್ತ , ಸೀದಾ ನೆಲದೆಡೆಗೆ ಗಾಳಿ ಸೀಳುತ್ತಾ ಬೀಳುವುದೆಂದರೆ ಯಾರ ಎದೆಯಾದರೂ ಜುಂ ಎನ್ನಲೇಬೇಕು . ಮೊದಲ ಕೆಲವು ನಿಮಿಷಗಳಲ್ಲಿ ಯಾವ ಪ್ಯಾರಾಶ್ಯೂಟುಗಳೂ ತೆರೆಯದಿರುವ ಕಾರಣ ದೇಹದಲ್ಲಿ ಅಪಾಯದ ಗಂಟೆ ಬೊಬ್ಬಿರಿದು ಹೊಡೆದುಕೊಳ್ಳುತ್ತದೆ . ಅಡ್ರಿನಲಿನ್ ಎಂಬ ಹಾರ್ಮೋನು ನರನಾಡಿಗಳಲ್ಲಿ ತುಂಬಿಕೊಂಡು ಎದೆ ಬಡಿತ ಗಗನ ಸೀಳುತ್ತದೆ . ಸಾವಿರಾರು ಅಡಿಗಳ ಕಾಲ ಹೀಗೆ ಆಕಾಶದಿಂದ ಕೆಳಕ್ಕೆ ಬೀಳುತ್ತ ಸಾಗಿ ನಂತರ ಪ್ಯಾರಾಶ್ಯೂಟ್‌ಗಳನ್ನು ತೆರೆದು ಹಕ್ಕಿಯಂತೆ ಹಾರುತ್ತ , ತೇಲುತ್ತ ಮತ್ತೆ ತುಸು ದೂರ ಸಾಗಿ ನಿಧಾನವಾಗಿ ಇಳಿಯುವ ಕ್ರೀಡೆಯೇ ಸ್ಕೈ - ಡೈವಿಂಗ್ ಅಥವಾ ಆಕಾಶ ಜಿಗಿತ .

ADVERTISEMENT

ಇದನ್ನು ವೃತ್ತಿ ಅಥವಾ ಪ್ರವೃತ್ತಿಯಾಗಿಸಿಕೊಳ್ಳಲು ತರಬೇತಿಯ ಅಗತ್ಯವಿದೆ . ನಿಪುಣ ಆಕಾಶ ಜಿಗಿತಗಾರನ ಜೊತೆಗೇ ಜಿಗಿದಲ್ಲಿ ಅನುಭವಿಸುವ ಥ್ರಿಲ್ ಬೇರೆಯೇ ಇದೆ . ಇಂತಹ ಆಕಾಶ ಜಿಗಿತವನ್ನು ‘ಟ್ಯಾಂಡಮ್ ಸ್ಕೈ ಡೈವಿಂಗ್’ ಅನ್ನುತ್ತಾರೆ .

ನಮ್ಮ ದೇಶದಲ್ಲಿ ಇಂತಹ ಆಕಾಶ ಜಿಗಿತದ ಐದು ಕೇಂದ್ರಗಳಿವೆ . ಮೈಸೂರು ಕೂಡ ಇವುಗಳಲ್ಲಿ ಒಂದು . ಚಾಮುಂಡಿ ಬೆಟ್ಟದ ತಪ್ಪಲಲ್ಲಿಯೇ ಇಂತಹ ಕೇಂದ್ರವಿದ್ದು ವರ್ಷದಲ್ಲಿ ಹಲವು ಕ್ಯಾಂಪ್‌ಗಳು ನಡೆಯುತ್ತವೆ . ಹಲವು ಬಗೆಯ ಆಕಾಶ ಜಿಗಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ . ಈ ರೀತಿಯ ತರಬೇತುದಾರರ ಒಟ್ಟಿಗೆ ಜಿಗಿತಕ್ಕೆ ವಾರಾಂತ್ಯವೋ , ವಾರದ ದಿನವೋ ಎಂಬುದರ ಆಧಾರದ ಮೇಲೆ ಸುಮಾರು 35 ಸಾವಿರದಿಂದ 45 ಸಾವಿರ ರೂಪಾಯಿಗಳ ಶುಲ್ಕವಿದೆ . ಇದರ ಫೋಟೋ ಮತ್ತು ವೀಡಿಯೊ ಪ್ಯಾಕೇಜಿಂಗ್‌ಗಳನ್ನು ಕೂಡ ನೀವು ಕಾದಿರಿಸಬಹುದು . ನಿಮ್ಮ ಈ ವೀಡಿಯೋ ಮಾಡಲು ಮೂರನೇ ವ್ಯಕ್ತಿ ನಿಮ್ಮೊಂದಿಗೆ ಜಿಗಿದು ವೀಡಿಯೊ ತೆಗೆಯುವುದು ವಿಶೇಷ .

ಮಧ್ಯಪ್ರದೇಶದ ಧಾನ , ಮಹಾರಾಷ್ಟ್ರದ ಆಂಬಿ ವ್ಯಾಲಿ , ಗುಜರಾತಿನ ದೀಸ ಮತ್ತು ಪಾಂಡಿಚೇರಿಯಲ್ಲೂ ಈ ಸೌಲಭ್ಯಗಳಿವೆ . ಈ ಪ್ರತಿ ಜಾಗದಲ್ಲಿಯೂ ಏರುವ ಎತ್ತರ ಮತ್ತು ಜಿಗಿತದ ಬೆಲೆ ಎರಡರಲ್ಲಿಯೂ ವ್ಯತ್ಯಾಸಗಳಿವೆ . ಕೆಲವೊಂದು ಕಡೆ ಬೇಡಿಕೆಯಿದ್ದಲ್ಲಿ ಮಾತ್ರ ಈ ಚಟುವಟಿಕೆಗಳು ನಡೆಯುತ್ತವೆ .

ಸ್ಕೈ ಡೈವಿಂಗ್ ಸಾಹಸೀ ಚಟುವಟಿಕೆಗಳಲ್ಲಿ ಎಲ್ಲ ವಯಸ್ಕರೂ , ಹೆಂಗಸರೂ ಭಾಗವಹಿಸಬಹುದು . ಹೃದಯದ ಖಾಯಿಲೆ , ಕಾಲಿನ ಇನ್ನಿತರ ಊನಗಳಿರುವ ಹಾಗೂ ಗರ್ಭಿಣಿಯರು ಭಾಗವಹಿಸುವಂತಿಲ್ಲ . ಆರೋಗ್ಯವಾಗಿರುವ ಮಂದಿ ಕೂಡ ಭಾಗವಹಿಸುವ ತಮ್ಮ ಬದುಕಿಗೆ ತಾವೇ ಜವಾಬುದಾರರು ಎಂದು ಬರೆದುಕೊಟ್ಟೇ ಹೋಗಬೇಕು .

ಸ್ಕೈ ಡೈವಿಂಗ್‌ನಲ್ಲಿಯೂ ನಾನಾ ವಿಧಗಳಿವೆ . ಒಬ್ಬ ತರಬೇತಿದಾರನ ಜತೆಗೆ ಜಿಗಿಯುವುದು , ಒಮ್ಮೆ ತರಬೇತಿ ಮತ್ತು ಲೈಸೆನ್ಸ್ ದೊರೆತ ನಂತರ ಸ್ವತಂತ್ರವಾಗಿ ಜಿಗಿಯುವುದು , ಗುಂಪುಗಳಲ್ಲಿ ಒಟ್ಟಿಗೆ ಜಿಗಿದು ಕೈ ಕೈ ಹಿಡಿದು ನಾನಾ ರೀತಿಯ ಚಿತ್ತಾರಗಳನ್ನು ಆಗಸದಲ್ಲಿ ಬಿಡಿಸುವುದು .. ಹೀಗೆ ವಿವಿಧ ರೀತಿಗಳಿವೆ . ಅಮೆರಿಕಾದ 96 ವರ್ಷದ ವೃದ್ಧೆ ಮತ್ತು ಸ್ಪೇನಿನ ಐದು ವರ್ಷದ ಮಗು ಈ ಸಾಹಸದಲ್ಲಿ ತೊಡಗಿಕೊಂಡು ದಾಖಲೆ ನಿರ್ಮಿಸಿದ್ದೂ ಇದೆ !

ಈ ಸಾಹಸ ಮಾಡಲು ಹೋಗಿ ಸತ್ತವರ , ಕಾಲು ಮುರಿದುಕೊಂಡವರ , ಮೂಳೆ ಮುರಿದುಕೊಂಡವರ ಬಗ್ಗೆ ಬೇಕಾದಷ್ಟು ಮಾಹಿತಿಗಳಿವೆ . ಹಾಗೆಯೇ ಪ್ಯಾರಾಶ್ಯೂಟ್ ತೆರೆದುಕೊಳ್ಳದೆ ರಿಸರ್ವ್ ಪ್ಯಾರಾಶ್ಯೂಟ್ ಅನ್ನು ಉಪಯೋಗಿಸಬೇಕಾದ ತುರ್ತು ಕೂಡಾ ಉಂಟಾಗಬಹುದು . ಹಾಗೆ ನೋಡಿದರೆ ಅಪಾಯ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ ? ರಸ್ತೆಯಲ್ಲಿ ಕಾರು ಓಡಿಸುವುದೂ ಅಪಾಯವೇ . ಅಮೆರಿಕಾದ 2010 ರ ಸಮೀಕ್ಷೆಯ ಪ್ರಕಾರ 30 ಲಕ್ಷ ಸ್ಕೈ ಡೈವಿಂಗ್‌ಗಳಲ್ಲಿ ಸತ್ತವರ ಸಂಖ್ಯೆ ಕೇವಲ 21 ಜನ ! ಅಂದರೆ ಸಾಧ್ಯತೆ ಶೇಕಡಾ 0.0007 ರಷ್ಟು ಕಡಿಮೆ . ಅದೇ ಪ್ರತಿ ಹತ್ತು ಸಾವಿರ ಮೈಲು ಕಾರು ಚಲಾಯಿಸುವಾಗ ನಡೆದ ಅಪಘಾತದಲ್ಲಿ ಮಡಿದವರ ಸಂಖ್ಯೆ ಶೇಕಡಾ 0.0167. ಅಂದರೆ , ಸ್ಕೈ ಡೈವಿಂಗ್‌ಗೆ ಹೋಲಿಸಿದರೆ , ಕಾರು ಅಪಘಾತದಲ್ಲಿ ಸಾಯುವ ಸಾಧ್ಯತೆ 24 ಪಟ್ಟು ಹೆಚ್ಚಿನದು !

ಆಕಾಶ ಜಿಗಿತದ ಅವಘಡಗಳು ಪ್ರತಿ ದಶಕದಲ್ಲೂ ಕಡಿಮೆಯಾಗುತ್ತಿವೆ . ಹಾಗಾಗಿ ಎಲ್ಲ ದೇಶಗಳಲ್ಲೂ ಹೆಲಿಕಾಪ್ಟರ್‌ನಲ್ಲಿ ಅಥವಾ ಸಣ್ಣ ವಿಮಾನಗಳಲ್ಲಿ ಮೇಲೆ ಹೋಗಿ ಜಿಗಿದು ಬರುವ ಅವಕಾಶಗಳು ಹೆಚ್ಚಿವೆ . ಗರಿಷ್ಟ ಮಟ್ಟದ ಭದ್ರತೆ ಒದಗಿಸುವ ಜಾಗಗಳಲ್ಲಿ ಮೊದಲು ಟ್ಯಾಂಡೆಮ್ ಸ್ಕೈ ಡೈವಿಂಗ್ ( ಮಾರ್ಗದರ್ಶಕರ ಜೊತೆ ) ಮಾಡುವುದು ಒಳಿತು . ಈ ಕ್ರೀಡೆ ನಿಮಗೆ ಸೂಕ್ತವಾಗಿದೆ ಎಂದು ಅನ್ನಿಸಿದಲ್ಲಿ ಇದನ್ನೊಂದು ಹವ್ಯಾಸವನ್ನಾಗಿ ಮಾಡಿಕೊಳ್ಳಬಹುದು .

ತೀರಾ ಇತ್ತೀಚೆಗೆ 101 ವರ್ಷ 38 ದಿನಗಳ ವಯಸ್ಸಿನ ಅಮೆರಿಕಾದ ನಿವೃತ್ತ ಮಿಲಿಟರಿ ಅಧಿಕಾರಿ ಬ್ರೈಸನ್ ವಿಲ್ಲಿಯಮ್ ವೆರ್ಡನ್ ಹೇಯ್ಸ್ 15,000 ಅಡಿ ಎತ್ತರದಿಂದ , ತನ್ನ ಕುಟುಂಬದ ಮೂರು ತಲೆಮಾರುಗಳ ಜನರೊಂದಿಗೆ ಜಿಗಿದು ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ . ಒಂದೇ ದಿನದಲ್ಲಿ ಮೂರು ವಿಮಾನಗಳನ್ನು ಬಳಸಿ ಪ್ರತಿ 2.25 ನಿಮಿಷಗಳಿಗೆ ಒಮ್ಮೆ ಒಂದೇ ದಿನದಲ್ಲಿ 640 ಸಾರಿ ಜಿಗಿದ ಖ್ಯಾತಿ ಜೇಯ್ ಸ್ಟೋಕ್ ಎಂಬಾತನಿಗೆ ಸಲ್ಲುತ್ತದೆ . ಸ್ಕೈ ಡೈವಿಂಗ್ ಮಾಡಿದವರಲ್ಲಿ ಅತ್ಯಂತ ಚಿಕ್ಕವನೆಂದರೆ 4 ವರ್ಷದ ಸೌತ್ ಆಫ್ರಿಕಾದ ಟೋನಿ ಸ್ಟಾಡ್ಲರ್ ! ಆದರೆ ಕೆಲವು ಮುಂದುವರಿದ ದೇಶಗಳಲ್ಲಿ 16 ವರ್ಷ ವಯಸ್ಸಾಗದೆ ಆಕಾಶ ಜಿಗಿತ ಮಾಡಲು ಅವಕಾಶವಿಲ್ಲ . ಭಾರತದಲ್ಲಿ ಹಲವೆಡೆ ನಿಮ್ಮ ವಯಸ್ಸು 18 ರ ಮೇಲಿದ್ದರೆ ಮಾತ್ರ ಆಕಾಶ ಜಿಗಿತ ಸಾಧ್ಯ .

ನನ್ನ ನಿರ್ಧಾರದ ಬಳಿಕ ..

ಇಂಗ್ಲೆಂಡಿನ ಒಂದು ಸ್ಥಳದಲ್ಲಿ ನಾನು ಸ್ಕೈಡೈವಿಂಗ್‌ ಮಾಡುತ್ತೇನೆ ಎಂದಾಗ ಮನೆಯವರು ಹೆದರಿದರು . ಸಹೋದ್ಯೋಗಿಗಳು ಮತ್ತು ಕೆಲವರು ಈ ಸಾಹಸ ಮಾಡಲು ಹೋಗಿ ಸತ್ತವರ , ಕಾಲು ಮುರಿದುಕೊಂಡವರ ಬಗ್ಗೆ ಹೇಳಿ ಹೆದರಿಸಿದರು . ಆದರೆ ನಾನು ನಿರ್ಧಾರ ಮಾಡಿಯಾಗಿತ್ತು .

ಅವತ್ತು ನಮ್ಮ ಸಣ್ಣ ವಿಮಾನ ಮೇಲೆ , ಮೇಲೆ ಹೋದಂತೆಲ್ಲ ನನ್ನ ಸಂತೋಷ ಹೆಚ್ಚುತ್ತಿತ್ತು . 13,000 ಅಡಿಗಳ ಎತ್ತರದಲ್ಲಿ ನನ್ನ ಟ್ಯಾಂಡೆಮ್ ಗುರು ತಲೆಗೆ ಟೊಪ್ಪಿ , ಕನ್ನಡಕ ಹಾಕಲು ಹೇಳಿದ . ಅದೇ ವಿಮಾನದಲ್ಲಿ ಬಂದಿದ್ದ ಐದು ಮಂದಿ ನುರಿತ ಜಿಗಿತಗಾರರು ವಿಮಾನದ ಬಾಗಿಲು ತೆರೆಯುತ್ತಿದ್ದಂತೆಯೇ ಪುರ್ರೆಂದು ಒಟ್ಟಿಗೆ ಹಾರಿಹೋದರು ! ಆಕಾಶದಲ್ಲಿ ಕೈ ಕೈ ಹಿಡಿದು ಚಿತ್ತಾರ ಬಿಡಿಸಬಲ್ಲ ಪರಿಣಿತ ಜಿಗಿತಗಾರರವರು .

ಕೊನೆಯವಳು ನಾನು . ಬಾಗಿಲಿಗೆ ಬಂದಂತೆ ಹಸಿರು ಗೀಚಿನ ನೆಲ , ನೀಲ ಆಗಸ , ಭರ್ರೆಂಬ ಬೀಸುವ ಗಾಳಿಯ ಜೊತೆಗೆ ಚಲಿಸುವ ವಿಮಾನದ ಗತಿಯಿಂದ ಕಳಚಿಕೊಂಡು ಜಿಗಿದದ್ದೇ ತಡ , ಬಲವಾದ ಗಾಳಿ ಮತ್ತು ಗುರುತ್ವಾಕರ್ಷಣೆಗಳ ಘರ್ಷಣೆಯಲ್ಲಿ ಸಿಕ್ಕ ನಮ್ಮ ದೇಹಗಳು ಗಂಟೆಗೆ 200 ಮೈಲಿ ವೇಗದಲ್ಲಿ ಕೆಳಗೆ ಬೀಳತೊಡಗಿದವು . ವಿಮಾನ ಬಾಗಿ ಇಳಿಯುವಾಗ ಕಿವಿಯಲ್ಲಿ ಕಾಣಿಸಿಕೊಳ್ಳುವ ನೋವು ಬಲಗಿವಿಯನ್ನು ಆವರಿಸುತ್ತಿರುವಂತೆಯೇ ಡ್ರೋಗ್ ( ವೇಗವನ್ನು ನಿಯಂತ್ರಿಸುವ ಸಣ್ಣ ಬಲೂನು ) ಅನ್ನು ಹಾರಿಸಲಾಯಿತು . ಇದರಿಂದ ನಮ್ಮ ವೇಗ ಗಂಟೆಗೆ 120 ಮೈಲುಗಳಿಗೆ ಇಳಿಯಿತು . ಒಂದಷ್ಟು ಹೊತ್ತು ಕೈ ಕಾಲುಗಳನ್ನು ಬಡಿಯುತ್ತ ಆನಂದಿಸಿದ ನಂತರವಷ್ಟೇ ಪ್ಯಾರಾಶ್ಯೂಟ್ ಅನ್ನು ಬಿಚ್ಚಿದ್ದು . ಇದು ತೆರೆದುಕೊಳ್ಳುತ್ತಿದ್ದಂತೆಯೇ ಇಡೀ ದೇಹವನ್ನು ಪ್ಯಾರಾಶ್ಯೂಟ್ ಲಬಕ್ಕೆಂದು ಮೇಲೆಳೆದುಕೊಂಡು ನಮ್ಮ ವೇಗದ ಜಿಗಿತ ತಟ್ಟನೆ ತಹಬದಿಗೆ ಬಂತು .

ನೆಲದಿಂದ ಸುಮಾರು 13,000 ಅಡಿಗಳ ಮೇಲೆ ಗಾಳಿಯನ್ನು ಬಿಟ್ಟರೆ ಯಾವ ಶಬ್ದವೂ ಇರುವುದಿಲ್ಲ . ನಾನು ಸ್ಕೈ ಡೈವಿಂಗ್ ಮಾಡಿದ ದಿನ ನೀಲ ಶುಭ್ರ ಆಕಾಶ . ಹಾಗಾಗಿ ಹಲವಾರು ಮೈಲುಗಳ ದೂರಕ್ಕೂ ನೆಲ ಕಾಣಿಸುತ್ತಿತ್ತು . ಬಲಕ್ಕೂ - ಎಡಕ್ಕೂ ಪ್ಯಾರಾಶ್ಯೂಟುಗಳು ತಿರುಗುತ್ತಿದ್ದಂತೆಯೇ ಗಾಳಿಯನ್ನು ಸೀಳುವ ಮತ್ತದೇ ಹರ್ಷ . ನೆಲದಲ್ಲಿ ಇರುವವರಿಗಂತೂ ನಾವು ಈ ದೂರದಲ್ಲಿ ಕಾಣುತ್ತಿರಲಿಲ್ಲ . ನಿಧಾನವಾಗಿ ನಾವು ನೆಲಕ್ಕಿಳಿಯುತ್ತಿದ್ದಂತೆಯೇ ಸಾರ್ಥಕತೆಯ ಭಾವ ಆವರಿಸಿತು .

ಸುಧಾ: 12,ಜುಲೈ 2018ರ ಸಂಚಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.