ADVERTISEMENT

ಪ್ಯಾರಾಲಿಂಪಿಕ್ಸ್: ಬಿಲ್ಗಾರ್ತಿ ಶೀತಲ್‌ಗೆ ನೀಡಿದ್ದ ವಾಗ್ದಾನ ಸ್ಮರಿಸಿದ ಮಹೀಂದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2024, 10:01 IST
Last Updated 3 ಸೆಪ್ಟೆಂಬರ್ 2024, 10:01 IST
<div class="paragraphs"><p>ಶೀತಲ್ ದೇವಿ</p></div>

ಶೀತಲ್ ದೇವಿ

   

ಪಿಟಿಐ ಚಿತ್ರ

ಮುಂಬೈ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 17 ವರ್ಷದ ಬಿಲ್ಗಾರ್ತಿ ಶೀತಲ್‌ ದೇವಿ ಅವರ ಸಾಧನೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೈ ಇಲ್ಲದಿದ್ದರೂ ಕಾಲಲ್ಲಿ ಬಿಲ್ಲು ಹಿಡಿದು, ಭುಜದಿಂದ ಎಳೆದು ಬಿಟ್ಟ ಹೆದೆಯಿಂದ ಚಿಮ್ಮಿದ ಬಾಣ ನೆಟ್ಟಿದ್ದು ‘ಬುಲ್‌ ಐ’ಗೆ. ತಂದುಕೊಟ್ಟಿದ್ದು ಕಂಚಿನ ಪದಕ. ಆದರೆ ಶೀತಲ್‌ರ ಈ ಬಾಣ ಮಹೀಂದ್ರಾ ಕಂಪನಿಯ ಸಮೂಹ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಹಿಂದೆ ಮಾಡಿದ್ದ ವಾಗ್ದಾನದ ನೆನಪನ್ನೂ ತರಿಸಿದೆ.

ADVERTISEMENT

ಪ್ಯಾರಿಸ್‌ನ ಲೆಸ್‌ ಇನ್‌ವ್ಯಾಲ್ಡಿಸ್‌ ಅರೇನಾದಲ್ಲಿ ಆ. 29ರಂದು ನಡೆದ ಮಹಿಳೆಯರ ಕಾಂಪೌಂಡ್ ರ‍್ಯಾಂಕಿಂಗ್ ಸುತ್ತಿನಲ್ಲಿ ಶೀತಲ್ ದೇವಿಯ ಸಾಧನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತು. ಈ ಸಾಧನೆಗೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರಾ, ‘ನಿಮ್ಮ ಸಾಧನೆಯಿಂದ ಅತ್ಯಂತ ಪ್ರಭಾವಿತನಾಗಿದ್ದೇನೆ. 2023ರಲ್ಲಿ ನಿಮಗೊಂದು ಕಾರು ಕೊಡುವೆ ಎಂದು ನೀಡಿದ್ದ ವಾಗ್ದಾನಕ್ಕೆ ನಾನು ಬದ್ಧ. ನಿಮಗೆ 18 ವರ್ಷ ತುಂಬಿದ ತಕ್ಷಣವೇ (2025ರಲ್ಲಿ) ನಿಮ್ಮ ಉಡುಗೊರೆ ನೀಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

2023ರಲ್ಲಿಯೂ ಶೀತಲ್ ಅವರ ಸಾಧನೆ ಮಹೀಂದ್ರಾ ಅವರನ್ನು ಪ್ರಭಾವಿತರನ್ನಾಗಿಸಿತ್ತು. ಆಗ ಅವರು ಕಾರು ಉಡುಗೊರೆಯಾಗಿ ನೀಡುವ ಘೋಷಣೆ ಮಾಡಿದ್ದರು. ಆದರೆ ತನಗಿನ್ನೂ 18 ವರ್ಷ ಪೂರ್ಣಗೊಳ್ಳದ ಕಾರಣ, ಕಾರನ್ನು ಉಡುಗೊರೆಯಾಗಿ ಸ್ವೀಕರಿಸಲಾರೆ ಎಂದು ಶೀತಲ್ ಹೇಳಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಪರ್ಫೆಕ್ಟ್‌ 10 ಸ್ಕೋರ್ ಮಾಡಿದ ನಂತರ ಆನಂದ್ ಅವರು ತಮ್ಮ ವಾಗ್ದಾನವನ್ನು ಪುನಃ ನೆನಪಿಸಿಕೊಂಡಿದ್ದಾರೆ.

‘ಅಸಾಧಾರಣ ಪ್ರತಿಭೆ, ಬದ್ಧತೆ ಹಾಗೂ ಎಂದಿಗೂ ಸೋಲೊಪ್ಪಿಕೊಳ್ಳದ ಮನೋಭಾವವನ್ನು ಪದಕಗಳಿಗೆ ಹೋಲಿಕೆ ಮಾಡಲಾಗದು. ನೀವು ದೇಶ ಹಾಗೂ ಇಡೀ ಜಗತ್ತಿನ ಸ್ಫೂರ್ತಿಯ ದಾರಿದೀಪವಿದ್ದಂತೆ. ವರ್ಷದ ಹಿಂದೆ ನನ್ನದೊಂದು ಉಡುಗೊರೆ ಸ್ವೀಕರಿಸಿ ಎಂದು ಮನವಿ ಮಾಡಿಕೊಂಡಿದ್ದೆ. ನಿಮ್ಮ ಸಾರಿಗೆ ಬಳಕೆಗೆ ಸರಿ ಹೊಂದುವಂತೆ ಪರಿವರ್ತಿಸಿದ ಕಾರನ್ನು ಸಿದ್ಧಪಡಿಸಿ ನೀಡುವುದಾಗಿ ಹೇಳಿದ್ದೆ. 18 ವರ್ಷ ತುಂಬಿದ ನಂತರ ಸ್ವೀಕರಿಸುವುದಾಗಿ ನೀವು ಹೇಳಿದ್ದಿರಿ. ಮುಂದಿನ ವರ್ಷ ಆ ಘಳಿಗೆ ಬರಲಿದೆ. ಹೀಗಾಗಿ ನನ್ನ ವಾಗ್ದಾನವನ್ನು ಪೂರ್ಣಗೊಳಿಸುವ ಸುಸಂದರ್ಭವನ್ನು ಎದುರು ನೋಡುತ್ತಿ‌ದ್ದೇನೆ. ಸಹಜವಾಗಿ ನನ್ನ #MondayMotivation ಬೇರೆ ಯಾರೂ ಆಗರಲಾರರು’ ಎಂದು ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.