ನವದೆಹಲಿ: ಪ್ಯಾರಿಸ್‌ನಲ್ಲಿ ಭಾನುವಾರವಷ್ಟೇ ಮುಕ್ತಾಯಗೊಂಡ ಪ್ಯಾರಾಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ ₹75 ಲಕ್ಷ, ಬೆಳ್ಳಿ ಗೆದ್ದವರಿಗೆ ₹50 ಲಕ್ಷ ಹಾಗು ಕಂಚಿನ ಪದಕ ಗೆದ್ದವರಿಗೆ ₹30 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ಪ್ರಕಟಿಸಿದರು.
ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆದ್ದ ಆರ್ಚರಿ ಸ್ಪರ್ಧಿ ಶೀತಲ್ ದೇವಿ ಅವರಂಥ ಕ್ರೀಡಾಪಟುಗಳು ₹22.5 ಲಕ್ಷ ಬಹುಮಾನ ಪಡೆಯಲಿದ್ದಾರೆ.
ಪದಕ ವಿಜೇತರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವರು ಈ ಘೋಷಣೆ ಮಾಡಿದರು.
2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಇನ್ನಷ್ಟು ಪದಕ ಪಡೆಯುವ ಗುರಿಯೊಂದಿಗೆ ಪ್ಯಾರಾ ಅಥ್ಲೀಟುಗಳಿಗೆ ಪೂರ್ಣ ಬೆಂಬಲ ಮತ್ತು ಸೌಲಭ್ಯಗಳನ್ನು ನೀಡುವುದಾಗಿಯೂ ಮಾಂಡವೀಯ ಆಶ್ವಾಸನೆ ನೀಡಿದರು.
‘ದೇಶ ಪ್ಯಾರಾಲಿಂಪಿಕ್ಸ್ ಮತ್ತು ಪ್ಯಾರಾ ಕ್ರೀಡೆಗಳಲ್ಲಿ ದಾಪುಗಾಲು ಹಾಕುತ್ತಿದೆ. 2016ರ ಕ್ರೀಡೆಗಳಲ್ಲಿ 4 ಪದಕ ಗೆದ್ದಿದ್ದ ಭಾರತವು, ಟೋಕಿಯೊ (2020) ಕ್ರೀಡೆಗಳಲ್ಲಿ 19 ಮತ್ತು ಇತ್ತೀಚಿನ ಪ್ಯಾರಿಸ್ ಕ್ರೀಡೆಗಳಲ್ಲಿ 29 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 18ನೇ ಸ್ಥಾನ ಗಳಿಸಿದೆ’ ಎಂದು ಮಾಂಡವೀಯ ಹೇಳಿದರು.
ಭಾರತ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.
ಇದಕ್ಕೆ ಮೊದಲು, ಪ್ಯಾರಿಸ್‌ನಿಂದ ಮಂಗಳವಾರ ಇಲ್ಲಿಗೆ ತಲುಪಿದ ಪ್ಯಾರಾ ಅಥ್ಲೀಟುಗಳಿಗೆ ಸಂಭ್ರಮದ ಸ್ವಾಗತ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.