ADVERTISEMENT

ಡೈಮಂಡ್‌ ಲೀಗ್‌: ರಾಷ್ಟ್ರೀಯ ದಾಖಲೆ ಮುರಿದ ಸಾಬ್ಳೆ

ಡೈಮಂಡ್‌ ಲೀಗ್‌: ಜೇನಾಗೆ ಎಂಟನೇ ಸ್ಥಾನ

ಪಿಟಿಐ
Published 7 ಜುಲೈ 2024, 18:15 IST
Last Updated 7 ಜುಲೈ 2024, 18:15 IST
<div class="paragraphs"><p>ಅವಿನಾಶ್‌ ಸಾಬ್ಳೆ</p></div>

ಅವಿನಾಶ್‌ ಸಾಬ್ಳೆ

   

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಹತ್ತಿರವಿರುವಂತೆ ಸ್ಟೀಪಲ್‌ಚೇಸ್‌ ಓಟಗಾರ ಅವಿನಾಶ್‌ ಸಾಬ್ಳೆ ಸಕಾಲದಲ್ಲಿ ಪ್ರದರ್ಶನದ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದ್ದಾರೆ. ಭಾನುವಾರ ನಡೆದ ಪ್ರತಿಷ್ಠಿತ ಡೈಮಂಡ್‌ ಲೀಗ್‌ನಲ್ಲಿ ಅವರು 3000 ಮೀ. ಸ್ಟೀಪಲ್‌ಚೇಸ್‌ ಓಟವನ್ನು 8 ನಿಮಿಷ 9.91 ಸೆಕೆಂಡುಗಳಲ್ಲಿ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಇನ್ನಷ್ಟು ಉತ್ತಮಪಡಿಸಿಕೊಂಡರು. ಅವರು ಆರನೇ ಸ್ಥಾನ ಪಡೆದರು.

29 ವರ್ಷದ ಸಾಬ್ಳೆ ಈ ಹಿಂದೆ 2022ರಲ್ಲಿ ತಮ್ಮ ಹಿಂದಿನ ವೈಯಕ್ತಿಕ ಶ್ರೇಷ್ಠ ಓಟ (8:11.20) ಓಡಿದ್ದರು. ಇಲ್ಲಿ ಒಂದೂವರೆ ಸೆಕೆಂಡು ಅಂತರದಿಂದ ಅದನ್ನು ಸುಧಾರಿಸಿದ್ದಾರೆ.

ADVERTISEMENT

ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ ಇಥಿಯೋಪಿಯಾದ ಅಬ್ರಹಾಂ ಸಿಮೆ ಅವರೂ ತಮ್ಮ ವೈಯಕ್ತಿಕ ಶ್ರೇಷ್ಠ ಅವಧಿಯಲ್ಲಿ (8:02.36) ದೂರವನ್ನು ಕ್ರಮಿಸಿ ಕೂದಲೆಳೆ ಅಂತರದಲ್ಲಿ ಅಗ್ರಸ್ಥಾನ ಪಡೆದರು. ಕೆನ್ಯಾದ ಅಮೊಸ್‌ ಸೆರೆಮ್‌ (8:02.36) ಅವರು ಫೊಟೊಫಿನಿಷ್‌ನಲ್ಲಿ ಎರಡನೇ ಸ್ಥಾನ ಗಳಿಸಿದರು.

2023ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ, ಕೆನ್ಯಾದವರೇ ಆದ ಅಬ್ರಹಾಂ ಕಿಬಿವೊಟ್‌ (8:06.70) ಕಂಚಿನ ಪದಕ ಪಡೆದರು. 2022ರ ಕಾಮನ್ವೆಲ್ತ್‌ ಕೂಟದಲ್ಲಿ ಕಿಬಿವೋಟ್‌ ಚಿನ್ನ ಪಡೆದಾಗ, ಸಾಬ್ಳೆ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

‌ಹಾಲಿ ಏಷ್ಯನ್ ಗೇಮ್ಸ್‌ ಚಿನ್ನದ ಪದಕ ವಿಜೇತರಾಗಿರುವ ಸಾಬ್ಳೆ, ರಾಷ್ಟ್ರೀಯ ದಾಖಲೆ ಮುರಿಯುತ್ತಿರುವುದು ಇದು ಹತ್ತನೇ ಸಲ.

ಜೇನಾಗೆ 8ನೇ ಸ್ಥಾನ:

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಕಿಶೋರ್‌ ಜೇನಾ, ಪುರುಷರ ಜಾವೆಲಿನ್‌ ಥ್ರೊ ಸ್ಪರ್ಧೆಯಲ್ಲಿ 78.10 ಮೀ. ಥ್ರೊದೊಡನೆ ಎಂಟನೇ ಸ್ಥಾನ ಪಡೆದರು. ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ (87.54) ಮತ್ತು ಈ ವರ್ಷದ ಅಂತರರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ತೋರಿದ ಸಾಧನೆಗಿಂತ (80.84 ಮೀ) ಇದು ಸಾಕಷ್ಟು ಕಡಿಮೆಯಾಗಿದೆ.

ಹಾಂಗ್‌ಝೌ ಏಷ್ಯನ್‌ ಗೇಮ್ಸ್‌ನಲ್ಲಿ ಜೇನಾ ಅವರು ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಈ ವರ್ಷ ಅವರ ಪ್ರದರ್ಶನದ ಮಟ್ಟ ಕಡಿಮೆಯಾಗಿದೆ. ದೋಹಾ ಡೈಮಂಡ್‌ ಲೀಗ್‌ನಲ್ಲಿ ಅವರು 76.31 ಮೀ. ಎಸೆದಿದ್ದರು. ಫೆಡರೇಷನ್‌ ಕಪ್‌ನಲ್ಲೂ (75.49 ಮೀ) ನಿರಾಸೆ ಅನುಭವಿಸಿದ್ದರು.

ವಿಶ್ವ ಮತ್ತು ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಈ ಕೂಟದಲ್ಲಿ ಭಾಗವಹಿಸಿರಲಿಲ್ಲ. ಜರ್ಮನಿಯ ಜೂಲಿಯನ್ ವೇಬರ್ (85.91 ಮೀ) ಮೊದಲ ಸ್ಥಾನ ಪಡೆದರೆ, ಮಾಜಿ ವಿಶ್ವ ಚಾಂಪಿಯನ್‌ ಆ್ಯಂಡರ್ಸನ್ ಪೀಟರ್ಸ್‌ (85.19 ಮೀ) ಎರಡನೇ ಮತ್ತು ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ಪಡೆದ ಯಾಕುಬ್‌ ವಡ್ಲೆಚ್‌ (85.04 ಮೀ) ಮೂರನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.