ಬೆಂಗಳೂರು: ಭಾರತ ಹಾಕಿ ತಂಡದ ಮಾಜಿ ನಾಯಕ ಮನ್‌ಪ್ರೀತ್ ಸಿಂಗ್ ಅವರಿಗೆ ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ. ಆದರೆ ಈ ತಿಂಗಳ ಕೊನೆಯಲ್ಲಿ ಪ್ಯಾರಿಸ್‌ನಲ್ಲಿ ಆರಂಭವಾಗುವ ಒಲಿಂಪಿಕ್ಸ್ ಅವರ ಪಾಲಿಗೆ ನಾಲ್ಕನೇಯದ್ದು. ಬಹುಶಃ ಕೊನೆಯದು ಎಂಬುದು ಅವರ ಮಾತಿನಲ್ಲಿ ವ್ಯಕ್ತವಾಗಿದೆ.
32 ವರ್ಷದ ಮನ್‌ಪ್ರೀತ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕರಾಗಿದ್ದರು. ಆ ತಂಡ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಒಲಿಂಪಿಕ್ಸ್ ಹಾಕಿಯಲ್ಲಿ 41 ವರ್ಷಗಳ ಪದಕದ ಬರ ನೀಗಿಸಿತ್ತು.
ಇದರ ಜೊತೆಗೆ ಮನ್‌ಪ್ರೀತ್ 2014 ಮತ್ತು 2022ರಲ್ಲಿ ಏಷ್ಯನ್ ಗೇಮ್ಸ್ ಚಿನ್ನ ಗೆದ್ದ ತಂಡದಲ್ಲಿ ಆಡಿದ್ದರು.
‘ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಆಡುತ್ತೇನೆಂದು ನಾನೆಂದೂ ಭಾವಿಸಿರಲಿಲ್ಲ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುಗಳ ಕನಸು. ನನ್ನನ್ನು ನಾನು ಅದೃಷ್ಟಶಾಲಿಯೆಂದು ಎಂದು ಪರಿಗಣಿಸುತ್ತೇನೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
‘ಇದು ನನ್ನ ಕೊನೆಯ ಒಲಿಂಪಿಕ್ಸ್ ಎಂದು ಯೋಚಿಸಿ ಪ್ಯಾರಿಸ್‌ಗೆ ಹೋಗುತ್ತಿದ್ದೇನೆ. ನಿವೃತ್ತಿ ಬಗ್ಗೆ ಯೋಚಿಸಿಲ್ಲ. ಸದ್ಯಕ್ಕೆ ನನ್ನೆಲ್ಲಾ ಗಮನ ಪ್ಯಾರಿಸ್ ಗೇಮ್ಸ್ ಮೇಲೆ ಕೇಂದ್ರಿತವಾಗಿದೆ’ ಎಂದು ಅನುಭವಿ ಮಿಡ್‌ಫೀಲ್ಡರ್ ಹೇಳಿದರು.
2011ರಲ್ಲಿ ಮನ್‌ಪ್ರೀತ್ ತಮ್ಮ 19ನೇ ವಯಸ್ಸಿನಲ್ಲಿ ಭಾರತ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ಆದರೆ ಜಾಲಂಧರ್‌ನ ಮಿತಾಪುರ ಗ್ರಾಮದ ಮನ್‌ಪ್ರೀತ್ ಪಯಣ ಸುಖದಾಯಕವಾಗಿರಲಿಲ್ಲ. ಒಂದೆಡೆ ತೀವ್ರ ಬಡತನ. ಇನ್ನೊಂದೆಡೆ ಮಿಥ್ಯಾರೋಪಗಳು
ಟೋಕಿಯೊ ಒಲಿಂಪಿಕ್ಸ್ ನಂತರ ಭಾರತ ತಂಡದ ಮಾಜಿ ಕೋಚ್ ಸ್ಯೂರ್ಡ್ ಮರೈನ್ ಅವರು ಮನ್‌ಪ್ರೀತ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
‘2018ರ ಕಾಮನ್ವೆಲ್ತ್ ಗೇಮ್ಸ್ ವೇಳೆ ಮನ್‌ಪ್ರೀತ್ ಅವರು ಆಟಗಾರನೊಬ್ಬನಿಗೆ ಕಳಪೆಯಾಗಿ ಆಡುವಂತೆ ಹೇಳಿದ್ದರು. ತನ್ಮೂಲಕ ತಮ್ಮ ಸ್ನೇಹಿತರೊಬ್ಬನನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಉದ್ದೇಶವನ್ನು ಅವರು ಹೊಂದಿದ್ದರು’ ಎಂಬುದು ಮರೈನ್ ಆರೋಪವಾಗಿತ್ತು.
ಆದರೆ ಪುರುಷರ ಮತ್ತು ಮಹಿಳಾ ತಂಡಗಳು ಈ ಆರೋಪವನ್ನು ಜಂಟಿಯಾಗಿ ನಿರಾಕರಿಸಿದ್ದವು. ತಮ್ಮ ಕೃತಿಗೆ ಪ್ರಚಾರ ನೀಡುವ ತಂತ್ರ ಡಚ್ ಕೋಚ್ ಅವರದ್ದು ಎಂದು ಟೀಕಿಸಿದ್ದರು.
‘ಅವು ನನ್ನ ಪಾಲಿಗೆ ದುರ್ದಿನಗಳು. ಆ ರೀತಿ (ಆರೋಪಗಳನ್ನು) ಯೋಚಿಸಲೂ ನನ್ನಿಂದ ಸಾಧ್ಯವಿಲ್ಲ. ನನಗೆ ಆಘಾತವಾಯಿತು. ನನ್ನ ತಾಯಿ ಧೈರ್ಯ ತುಂಬಿದರು. ಆ ಸಂಕಟದ ಗಳಿಗೆಯಲ್ಲಿ ಇಡೀ ತಂಡ ನನ್ನ ಬೆನ್ನಿಗೆ ನಿಂತಿತು’ ಎಂದು ಮನ್‌ಪ್ರೀತ್ ಹೇಳಿದರು.
ಮನ್‌ಪ್ರೀತ್ ಅವರಿಗೆ ಮಾಜಿ ನಾಯಕ ಪರ್ಗತ್ ಸಿಂಗ್ ಅದರ್ಶಪ್ರಾಯ ಆಟಗಾರ. ಪರ್ಗತ್ ಕೂಡ ಮಿಥಾಪುರದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.