ADVERTISEMENT

Paris Olympics | ಮಾರ್ಸೆ: ಒಲಿಂಪಿಕ್ಸ್‌ ಜ್ಯೋತಿ ಸ್ವಾಗತಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 9 ಮೇ 2024, 0:32 IST
Last Updated 9 ಮೇ 2024, 0:32 IST
   

ಮಾರ್ಸೆ (ಫ್ರಾನ್ಸ್‌),: ಒಲಿಂಪಿಕ್‌ ಜ್ಯೋತಿಯನ್ನು ತರುತ್ತಿರುವ ಆಕರ್ಷಕ ವ್ಯಾಪಾರಿ ಹಡಗು ‘ಬೆಲೆಮ್‌’ ಫ್ರಾನ್ಸ್‌ನ ಪ್ರಾಚೀನ ಬಂದರು ನಗರ ಮಾರ್ಸೆಯನ್ನು (Marseille) ತಲುಪಲು ಸಜ್ಜಾಗಿದೆ. ಒಲಿಂಪಿಕ್‌ ಜ್ಯೋತಿಯ ಸ್ವಾಗತಕ್ಕಾಗಿ ಭವ್ಯ ಸಮಾರಂಭಕ್ಕೆ ಕ್ಷಣಗಣನೆಯೂ ಆರಂಭವಾಗಿದೆ.

ಪ್ಯಾರಿಸ್‌ ಒಲಿಂಪಿಕ್ಸ್ ಸಂಘಟಕರು ಇದಕ್ಕಾಗಿ ಎಲ್ಲ ಸಿದ್ಧತೆ ನಡೆಸಿದ್ದಾರೆ. ಕಳೆದ ತಿಂಗಳು ಗ್ರೀಸ್‌ನ ಒಲಿಂಪಿಯಾದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಒಲಿಂಪಿಕ್‌ ಜ್ಯೋತಿ ಬೆಳಗಲಾಗಿತ್ತು. ಈಗ ಅದನ್ನು ಒಲಿಂಪಿಕ್‌ ಆತಿಥ್ಯ ವಹಿಸಿರುವ ಫ್ರಾನ್ಸ್‌ಗೆ ಅಧಿಕೃತವಾಗಿ ಹಸ್ತಾಂತರಿಸಲಾಗುವುದು. ಉಗ್ರರ ದಾಳಿಗೆ ಮುನ್ನೆಚ್ಚರಿಕೆಯಾಗಿ ಮಾರ್ಸೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

1896ರಲ್ಲಿ ಮೊದಲ ಬಾರಿ ‘ಬೆಲೆಮ್‌’ ಹಡಗು ಸಮುದ್ರ ಯಾನ ಕೈಗೊಂಡಿತ್ತು. ಈ ಬಾರಿ ಒಲಿಂಪಿಕ್‌ ಜ್ಯೋತಿಯೊಡನೆ ಗ್ರೀಸ್‌ನ ಅಥೆನ್ಸ್‌ನಿಂದ 12 ದಿನಗಳ ಹಿಂದೆ ಹೊರಟಿತ್ತು.

ADVERTISEMENT

ಫ್ರಾನ್ಸ್‌ ಕಾಲಮಾನದ ಪ್ರಕಾರ ಬುಧವಾರ ರಾತ್ರಿ ಒಲಿಂಪಿಕ್‌ ಜ್ಯೋತಿ ಹಸ್ತಾಂತರ ಸಮಾರಂಭ ನಡೆಯಲಿದೆ. ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಫ್ರೆಂಚ್‌ ವಾಯುಪಡೆಯ ‘ಪೆಥೋಯಿ ಡಿ ಫ್ರಾನ್ಸ್ ತಂಡದಿಂದ’ ಸಾಹಸ ಪ್ರದರ್ಶನ ನಡೆಯಲಿದೆ.

ಸಾವಿರಕ್ಕೂ ಹೆಚ್ಚು ದೋಣಿಗಳು ‘ಬೆಲೆಮ್‌’ ಜೊತೆ ಪರೇಡ್‌ ನಡೆಸಿ ಮಾರ್ಸೆಗೆ ತಲುಪಲಿವೆ. ಬಂದರಿನಲ್ಲಿ ಅಥ್ಲೆಟಿಕ್ಸ್‌ ಟ್ರ್ಯಾಕ್‌ ಮಾದರಿಯಲ್ಲಿರುವ ಪಂಟೂನ್‌ನಲ್ಲಿ ಈ ಹಡಗು ಲಂಗರು ಹಾಕಲಿದೆ. ಮಾರ್ಸೆ ನಗರದಲ್ಲಿ ಸಂಭ್ರಮ ಮನೆಮಾಡಿದೆ.

‘ನೂರು ವರ್ಷಗಳ ನಂತರ ಒಲಿಂಪಿಕ್ಸ್‌ ಫ್ರಾನ್ಸ್‌ಗೆ ಮರಳುತ್ತಿರುವ ಈ ಸಂದರ್ಭವು ನಮ್ಮ ಪಾಲಿಗೆ ಸಂಭ್ರಮದ ಆಚರಣೆಯಾಗಲಿದೆ’ ಎಂದು ಪ್ಯಾರಿಸ್‌ 2024ರ ಒಲಿಂಪಿಕ್‌ ಸಂಘಟನಾ ಸಮಿತಿ ಅಧ್ಯಕ್ಷ ಟೋನಿ ಎಸ್ಟಾಂಗೆ ಅವರು ಹೇಳಿದ್ದಾರೆ.

‘ಮಾಜಿ ಕ್ರೀಡಾಪಟುವಾಗಿರುವ ನನಗೆ ಕ್ರೀಡಾಕೂಟದ ಆರಂಭವು ಎಷ್ಟು ಮಹತ್ವಪೂರ್ಣ ಎಂಬುದು ಗೊತ್ತಿದೆ.  ಹೀಗಾಗಿ ನಾವು ಮಾರ್ಸೆಯನ್ನು ಆಯ್ಕೆ ಮಾಡಿಕೊಂಡೆವು. ಈ ನಗರವು ಕ್ರೀಡೆಯನ್ನು ಪ್ರೀತಿಸುವ ನಗರ’ ಎಂದು ಎಸ್ಟಾಂಗೆ ಹೇಳಿದರು. ಅವರು 2000, 2004 ಮತ್ತು 2008ರ ಒಲಿಂಪಿಕ್ಸ್‌ನಲ್ಲಿ ಫ್ರಾನ್ಸ್‌ ತಂಡವನ್ನು ಪ್ರತಿನಿಧಿಸಿ  ಕೆನೊಯಿಂಗ್ (ಹುಟ್ಟು ದೋಣಿ) ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.

ಸಮಾರಂಭ ನಡೆಯುವ ಸ್ಥಳ ಮತ್ತು ಅಲ್ಲಿಗೆ ಸಂಪರ್ಕ ಸಾಧಿಸುವ ಸ್ಥಳಗಳಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎಂಟು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸಮಾರಂಭಕ್ಕೆ ಹಾಜರಿರಬಹುದು ಎಂದು ಅಂದಾಜು ಮಾಡಲಾಗಿದೆ.

ಅಗ್ನಿಶಾಮಕ ದಳ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯೂ ನೂರಾರು ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದಾರೆ. ನೌಕಾ ಪಡೆಯ ಯೋಧರ ಜೊತೆ ಡ್ರೋನ್ ಪ್ರತಿಬಂಧಕ ತಂಡಗಳೂ ಗಸ್ತಿನಲ್ಲಿವ.

ಒಲಿಂಪಿಕ್‌ ಜ್ಯೋತಿ ಯಾತ್ರೆ ಗುರುವಾರ ಮಾರ್ಸೆಯಿಂದ ಆರಂಭವಾಗಲಿದೆ. ಇದು ಪ್ಯಾರಿಸ್‌ನ ಪಾರಂಪರಿಕ ಸ್ಥಳಗಳ ಜೊತೆಗೆ ದೇಶದಾದ್ಯಂತ ಸಂಚರಿಸಲಿದೆ. ಜಗತ್ಪ್ರಸಿದ್ಧ ಮಾಂಟ್‌ ಸೇಂಟ್‌ ಮೈಕೆಲ್‌ನಿಂದ ಹಿಡಿದು ಎರಡನೇ ಮಹಾಯುದ್ಧದ ವೇಳೆ ಮೈತ್ರಿಕೂಟದ ಸೈನಿಕರು ಬಂದಿಳಿದ ನೊರ್ಮಾಂಡಿ ಬೀಚ್‌ ಬಳಿ, ವರ್ಸೇಲ್ಸ್‌ ಅರಮನೆಯ ಬಳಿ ಸಾಗಲಿದೆ.

ಜುಲೈ 26ರಂದು ಒಲಿಂಪಿಕ್ಸ್‌ ಆರಂಭವಾಗಲಿದೆ. ಈ ಬಾರಿ ಉದ್ಘಾಟನಾ ಸಮಾರಂಭವನ್ನು ಸೀನ್‌ ನದಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಲಾಗಿ ಸಾಗುವ ದೋಣಿಗಳಲ್ಲಿ ಅಥ್ಲೀಟುಗಳ ಪರೇಡ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.