ಪ್ಯಾರಿಸ್: ಭಾರತದ ಲಕ್ಷ್ಯ ಸೇನ್ ಅವರಿಗೆ ಸೋಮವಾರ ಕಂಚಿನ ಪದಕ ಕೈತಪ್ಪಿತು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಲಕ್ಷ್ಯ 21–13, 16–21, 11–21ರಲ್ಲಿ ಮಲೇಷ್ಯಾದ ಝೀ ಜಿಯಾ ಲೀ ವಿರುದ್ಧ ಸೋತರು. ನಾಲ್ಕನೇ ಸ್ಥಾನ ಪಡೆದರು.
ಇಲ್ಲಿ ನಡೆದ 71 ನಿಮಿಷಗಳ ಹಣಾಹಣಿಯ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದ್ದ ಲಕ್ಷ್ಯ ಭರವಸೆಯ ಹೆಜ್ಜೆ ಇಟ್ಟಿದ್ದರು.
ತಮ್ಮ ಆಕ್ರಮಣಶೈಲಿಯ ಆಟ ಮತ್ತು ನೆಟ್ ಬಳಿಯ ಚುರುಕಾದ ರಿಟರ್ನ್‌ಗಳ ಮೂಲಕ ಗಮನ ಸೆಳೆದ ಲಕ್ಷ್ಯ ಎದುರಾಳಿಯ ಮೇಲೆ ಒತ್ತಡ ಹಾಕಿದರು.
ತಮ್ಮ ಎದುರಾಳಿಯ ವಿರುದ್ಧ ಅಪಾರ ಆತ್ಮವಿಶ್ವಾಸದಿಂದ ಆಡಿದರು. ಈ ಗೇಮ್‌ನಲ್ಲಿ ಅವರು 11–4ರ ಮುನ್ನಡೆ ಗಳಿಸಿದರು. ನಂತರದ ಹಂತದಲ್ಲಿಯೂ ಹಿಡಿತ ಸಡಿಲಿಸದೇ ಗೆದ್ದರು.
ಎರಡನೇ ಗೇಮ್‌ನಲ್ಲಿಯೂ ಉತ್ತಮ ಆರಂಭ ಮಾಡಿದರು. 6–2ರ ಮುನ್ನಡೆ ಸಾಧಿಸಿದರು. ಇದರಿಂದಾಗಿ ಲಕ್ಷ್ಯ ಜಯಿಸುವುದು ಬಹುತೇಕ ಖಚಿತವೆಂಬ ವಿಶ್ವಾಸ ಮೂಡಿತ್ತು.
ಈ ಹಂತದಿಂದ ಮಲೇಷ್ಯಾ ಆಟಗಾರ ಪುಟಿದೇಳುವ ಪ್ರಯತ್ನ ಆರಂಭಿಸಿದರು. ಇದೇ ಸಂದರ್ಭದಲ್ಲಿ ಲಕ್ಷ್ಯ ಅವರ ಮೊಣಕೈಗೆ ಆದ ಗಾಯದಿಂದ ರಕ್ತಸ್ರಾವವಾಯಿತು.
ನೋವು ಶಮನಕ್ಕಾಗಿ ಎರಡು ಸಲ ಫಿಸಿಯೊ ಕರೆಸಿ ಪ್ರಥಮ ಚಿಕಿತ್ಸೆ ಮತ್ತು ಟೇಪಿಂಗ್ ಕೂಡ ಪಡೆದರು. ಕಾಡುವ ನೋವಿನಲ್ಲಿಯೇ ಆಟ ಮುಂದುವರಿಸಿದರು.
ಝೀ ಜಿಯಾ ಲೀ ಅವರು ತಮ್ಮ ಶಾಂತಚಿತ್ತದ ಆಟದ ಮೂಲಕ ಲಕ್ಸ್ಯ ಮೇಲೆ ಒತ್ತಡ ಹಾಕಿದರು. ದೀರ್ಘ ರ‍್ಯಾಲಿಗಳನ್ನು ಆಡಿದರು. ಜಂಪ್ ಸ್ಮ್ಯಾಷ್ ಮೂಲಕ ಪಾಯಿಂಟ್ಸ್ ಗಿಟ್ಟಿಸಿದರು.
ನಂತರದ ನಿರ್ಣಾಯಕ ಗೇಮ್‌ನಲ್ಲಿ ಲೀ 9–2ರ ಮುನ್ನಡೆ ಪಡೆದರು. ಇಡೀ ಗೇಮ್‌ನಲ್ಲಿ ಪಾರಮ್ಯ ಮೆರೆದರು.
ವಿಕ್ಟರ್‌ಗೆ ಚಿನ್ನ: ಡೆನ್ಮಾರ್ಕಿನ ವಿಕ್ಟರ್ ಆ್ಯಕ್ಸೆಲ್ಸನ್ ಅವರು ಸತತ ಎರಡನೇ ಬಾರಿ ಚಿನ್ನ ಪದಕ ಜಯಿಸಿದರು. ಫೈನಲ್‌ನಲ್ಲಿ ವಿಕ್ಟರ್ 21–11, 21–11ರಿಂದ ವಿಶ್ವ ಚಾಂಪಿಯನ್, ಥಾಯ್ಲೆಂಡ್‌ನ ಕುನ್ಲಾವತ್ ವಿತಿಸಾರ್ನ್ ವಿರುದ್ಧ ಜಯಿಸಿದರು.
ಭಾನುವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಲಕ್ಷ್ಯ ಅವರು ವಿಕ್ಟರ್ ಆ್ಯಕ್ಸೆಲ್ಸನ್
ವಿರುದ್ಧ ಸೋತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.