ADVERTISEMENT

Paris Olympics 2024: ಸಿಂಧು ಸೋಲುಗಳಲ್ಲಿಯೂ ಇದೆ ಸ್ಫೂರ್ತಿಯ ಸಂದೇಶ

ಗಿರೀಶ ದೊಡ್ಡಮನಿ
Published 2 ಆಗಸ್ಟ್ 2024, 4:32 IST
Last Updated 2 ಆಗಸ್ಟ್ 2024, 4:32 IST
<div class="paragraphs"><p>ಭಾರತದ ‍‍ಪಿ.ವಿ. ಸಿಂಧು</p></div>

ಭಾರತದ ‍‍ಪಿ.ವಿ. ಸಿಂಧು

   

–ಪಿಟಿಐ ಚಿತ್ರ

ಪುಸರ್ಲಾ ವೆಂಕಟ ಸಿಂಧು..

ADVERTISEMENT

ಕ್ರೀಡೆಯಲ್ಲಿ ಸೋಲುಗಳಿಗೂ ಗೌರವ ತಂದುಕೊಟ್ಟ ಹೆಸರು ಇದು. ರಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಸೋತಾಗ ಚಿನ್ನ ಗೆಲ್ಲುವ ಕನಸನ್ನು ತ್ಯಜಿಸಲಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಸೋತ ನಂತರವೂ ಪುಟಿದೆದ್ದು ಕಂಚು ಗೆದ್ದರು. ಕಳೆದ ಮೂರು ವರ್ಷಗಳಲ್ಲಿ ಪ್ರಮುಖ ಟೂರ್ನಿಗಳಲ್ಲಿ ಸೋಲಿನ ನಿರಾಶೆ ಅನುಭವಿಸಿದ ನಂತರವೂ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿ, ಪದಕ ಜಯದ ನಿರೀಕ್ಷೆ ಮೂಡಿಸಿದ್ದು ಸಣ್ಣ ಮಾತೇನಲ್ಲ. ಇಷ್ಟು ದೂರದವರೆಗೆ ವೈಯಕ್ತಿಕ ಕ್ರೀಡೆಗಳಲ್ಲಿ ಸತತವಾಗಿ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರ ಹೊತ್ತು ಪಯಣಿಸುವುದು ಸುಲಭವಲ್ಲ.

ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್‌ ಸಿಂಗಲ್ಸ್ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು ಸೋತಿದ್ದಾರೆ. ಈ ಸೋಲನ್ನು ಅರಗಿಸಿಕೊಳ್ಳುವುದು ಅಭಿಮಾನಿಗಳ ಪಾಲಿಗೆ ತುಸು ಕಷ್ಟವಾಗಬಹುದು. ಕಳೆದೆರಡೂ ಒಲಿಂಪಿಕ್ಸ್‌ಗಳಲ್ಲಿ ವಿಜಯ ವೇದಿಕೆಯ ಮೇಲೆ ಸಿಂಧು ಅವರು ಪದಕ ಹಿಡಿದು ನಗುತ್ತ ನಿಂತ ಚಿತ್ರಗಳನ್ನು ನೋಡಿದ ಕ್ರೀಡಾಭಿಮಾನಿಗಳಿಗೆ ಪ್ಯಾರಿಸ್‌ ಕೂಟದ ವಿಜಯವೇದಿಕೆ ಭಣ ಭಣ ಎನಿಸದಿರದು. 

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಾಗ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಕೂಡ ಇಂತಹ ಸಾಧನೆ ಮಾಡಬಲ್ಲರು ಎಂದು ಜಗಕ್ಕೆ ತಿಳಿದಿತ್ತು. ‘ಹೈದರಾಬಾಬಾದ್ ಮುತ್ತು’ ಸಿಂಧು ಅದಕ್ಕಿಂತಲೂ ಹತ್ತಾರು ಹೆಜ್ಜೆ ಮುಂದೆ ಸಾಗಿದರು. ಲಾಗಾಯ್ತಿನಿಂದಲೂ ಬ್ಯಾಡ್ಮಿಂಟನ್ ಕೋರ್ಟ್‌ ಮೇಲೆ ಪ್ರಬಲ ಹಿಡಿತ ಸಾಧಿಸಿದ್ದ ಚೀನಾ, ಸಿಂಗಪುರ, ಮಲೇಷ್ಯಾ, ಇಂಡೊನೇಷ್ಯಾ ಮತ್ತು ಜಪಾನ್ ದೇಶಗಳ ಆಟಗಾರ್ತಿಯರಿಗೆ ಸೋಲಿನ ರುಚಿ ತೋರಿಸಿದರು. ಅದೇ ಆಟಗಾರ್ತಿಯರೊಂದಿಗೆ ಕ್ರೀಡಾಂಗಣದಾಚೆ ಸ್ನೇಹದ ಸವಿಯನ್ನೂ ಉಣಬಡಿಸಿದ ಅಪ್ಪಟ ಸಹೃದಯಿ ಸಿಂಧು.

2011ರಲ್ಲಿ ಯೂತ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸುವುದರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆಗುರುತು ಮೂಡಿಸಲು ಆರಂಭಿಸಿದ್ದ ಸಿಂಧು ಅವರ ಪಯಣ ಪ್ಯಾರಿಸ್ ಒಲಿಂಪಿಕ್ಸ್‌ನ 16ರ ಘಟ್ಟದವರೆಗೂ ಸಾಗಿಬಂದಿದೆ.

2012ರಲ್ಲಿ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಸಿಂಧು ಅವರು ಸೈನಾ ನೆಹ್ವಾಲ್ ನಂತರ ಭಾರತೀಯ ಬ್ಯಾಡ್ಮಿಂಟನ್ ಜ್ಯೋತಿಯನ್ನು ಬೆಳಗುವ ಭರವಸೆ ಮೂಡಿಸಿದರು. ಕಳೆದ 12 ವರ್ಷಗಳಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದರು.

ಈ ಹಾದಿಯಲ್ಲಿ  ಕಾಡಿದ ಗಾಯ, ಸೋಲುಗಳ ನೋವು ಒಂದೆರಡಲ್ಲ. ಆದರೆ ಕಷ್ಟಗಳಿಗೆ ಹೆದರುವ ಜಾಯಮಾನ ಅವರದ್ದಲ್ಲವೇ ಅಲ್ಲ. ವಾಲಿಬಾಲ್ ಆಟಗಾರರಾಗಿದ್ದ ಅಪ್ಪ ರಮಣ ಮತ್ತು ಅಮ್ಮ ಪಿ. ವಿಜಯಾ ಅವರು ಹಾಕಿದ ಸಂಸ್ಕಾರದ ಅಡಿಪಾಯ ಅಷ್ಟು ಗಟ್ಟಿಯಾಗಿತ್ತು. ಬಾಲ್ಯದಲ್ಲಿ ಬ್ಯಾಡ್ಮಿಂಟನ್ ಕಲಿಕೆಗಾಗಿ ಪ್ರತಿದಿನವೂ 50–60 ಕಿ.ಮೀ ದೂರದ ಪ್ರಯಾಣದಲ್ಲಿ ಅನುಭವಿಸಿದ ಕಷ್ಟ, ನಷ್ಟಗಳನ್ನು ಮೀರಿ ನಿಂತು ಬೆಳೆದವರು. ಎಂದಿಗೂ ಸೋಲೊಪ್ಪದ ಮನೋಭಾವ ಅವರ ಆಸ್ತಿ.

ಅದಕ್ಕಾಗಿಯೇ ಹಲವು ಪ್ರಥಮಗಳನ್ನು ಸಿಂಧು ಸಾಧಿಸಿದರು. 2013 ಮತ್ತು 2014ರಲ್ಲಿ ಸತತವಾಗಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದರು. ಅಷ್ಟಕ್ಕೆ ತೃಪ್ತಿಯಾಗದ ಅವರು ಅದೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 2017, 2018ರಲ್ಲಿ ಬೆಳ್ಳಿ ಪದಕಗಳನ್ನೂ ಜಯಿಸಿದರು. ಆದರೂ ಛಲ ಬಿಡಲಿಲ್ಲ. ಪದಕದ ಬಣ್ಣ ಬದಲಾಯಿಸುವ ಅವರ ತಪಸ್ಸಿಗೆ 2019ರಲ್ಲಿ ವಿಶ್ವ ಚಿನ್ನ ಒಲಿಯಿತು. ಒಂದು ಕಾಲದಲ್ಲಿ ಭಾರತೀಯರಿಗೆ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ನಾಕೌಟ್ ಹಂತ ತಲುಪುವುದೇ ದೊಡ್ಡ ಸಾಧನೆಯಾಗಿತ್ತು. ಅಂತಹದರಲ್ಲಿ ಈ ಹುಡುಗಿ ಒಟ್ಟು ಐದು ಪದಕಗಳನ್ನು ಗೆದ್ದು ತಂದಿದ್ದು ಸಣ್ಣ ಮಾತೇನಲ್ಲವಲ್ಲ?

ಈ ನಡುವೆ 2016ರಲ್ಲಿ ರಿಯೊ ಒಲಿಂಪಿಕ್ಸ್‌ ಫೈನಲ್‌ಗೆ ಸಿಂಧು ಲಗ್ಗೆಯಿಟ್ಟಾಗ ವಿಶ್ವದ ಕಣ್ಣು ಭಾರತದತ್ತ ಹೊರಳಿತ್ತು. ಆ ಪಂದ್ಯದಲ್ಲಿ ಸ್ಪೇನ್ ಆಟಗಾರ್ತಿ ಕೆರೊಲಿನಾ ಮರಿನ್ ಅವರ ಮುಂದೆ ಜಿದ್ದಾಜಿದ್ದಿಯ ಹೋರಾಟವನ್ನು ಕ್ರೀಡಾಪ್ರೇಮಿಗಳು ಮರೆಯಲು ಸಾಧ್ಯವೇ?

ದೈಹಿಕ ಕ್ಷಮತೆಯ ವಿಷಯದಲ್ಲಿ ಭಾರತೀಯರಿಗಿಂತ ಒಂದು ಹೆಜ್ಜೆ ಮುಂದಿರುವ ಯುರೋಪ್, ಅಮೆರಿಕ ಮತ್ತಿತರ ದೇಶಗಳ ಆಟಗಾರ್ತಿಯರಿಗೆ ಸರಿಸಮನಾದ ಸಾಧನೆ ಮಾಡಿದ್ದು ಸಿಂಧು ಹೆಗ್ಗಳಿಕೆ. ದೇಹಕ್ಕಿಂತಲೂ ಗಟ್ಟಿ ಮನೋಭಾವ ಅವರ ಸಾಧನೆಗಳಿಗೆ ಇಂಧನವೆಂದರೆ ತಪ್ಪಲ್ಲ.

2021ರ ಟೋಕಿಯೊ ಒಲಿಂಪಿಕ್ಸ್ ಅದಕ್ಕೆ ಸೂಕ್ತ ಉದಾಹರಣೆ. ಕೋವಿಡ್‌ನಿಂದ ತತ್ತರಿಸಿದ್ದ ಜಗತ್ತಿನಲ್ಲಿ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಕಾಪಾಡಿಕೊಳ್ಳಲು ಅಪಾರ ಕಷ್ಟಪಟ್ಟಿದ್ದ ಕಾಲಘಟ್ಟ ಅದು.

ಟೋಕಿಯೊದಲ್ಲಿ ಸೆಮಿಫೈನಲ್‌ನಲ್ಲಿ  ಸಿಂಧುಗೆ ಸೋಲು ಆಘಾತ ನೀಡಿತ್ತು. ರಿಯೊದ ಬೆಳ್ಳಿಗೆ ಚಿನ್ನದ ಮೆರುಗು ನೀಡುವ ಅವರ ಕನಸು ಕೈಜಾರಿತ್ತು. ಹತಾಶೆಯ ಮಡುವಿಗೆ ಜಾರಿಬಿಟ್ಟಿದ್ದರು. ಆದರೆ ಆಗ ಅವರ ಕೋಚ್ ಆಗಿದ್ದ ಪಾರ್ಕ್ ಟಿ ಸಂಗ್ ಹೇಳಿದ್ದ ಮಾತುಗಳು ಸಿಂಧು ಅತ್ಮವಿಶ್ವಾಸವನ್ನು ಬಡಿದೆಬ್ಬಿಸಿದ್ದವು.

‘ಇಲ್ಲಿ (ಒಲಿಂಪಿಕ್ಸ್‌) ಮೂರು ಮತ್ತು ನಾಲ್ಕನೇ ಸ್ಥಾನಗಳ ನಡುವೆ ಅಜಗಜಾಂತರವಿದೆ. ಮೂರಕ್ಕೆ ಕಂಚಿನ ಪದಕವಿದೆ. ನಾಲ್ಕರಲ್ಲಿ ಏನೂ ಇಲ್ಲ. ಇನ್ನೂ ನಿನ್ನ ಹೋರಾಟ ಮುಗಿದಿಲ್ಲ’ ಎಂದು ಪಾರ್ಕ್ ಹೇಳಿದ್ದರು. ಆ ಮಾತುಗಳು ಅವತ್ತು ಸಿಂಧುಗೆ ಕಂಚಿನ ಪದಕ ಜಯಿಸಿಕೊಡಲು ಮಂತ್ರದಂತೆ ಕೆಲಸ ಮಾಡಿದ್ದವು. 

ಕಳೆದ ಮೂರು ವರ್ಷಗಳಲ್ಲಿ ಸಿಂಧು ಏಳು, ಬೀಳುಗಳನ್ನು ಕಂಡಿದ್ದಾರೆ. ತಮ್ಮ ಮೊದಲಿನ ಕೋಚ್ ಪುಲ್ಲೇಲಾ ಗೋಪಿಚಂದ್ ಅವರಿಂದ ದೂರವಾಗಿದ್ದಾರೆ. ಬೆಂಗಳೂರಿನಲ್ಲಿ ದಿಗ್ಗಜ ಪ್ರಕಾಶ್ ಪಡುಕೋಣೆ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 29 ವರ್ಷದ ಸಿಂಧು ತಮ್ಮ ಮನೋದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಅಪಾರ ಪರಿಶ್ರಮ ಪಟ್ಟಿದ್ದಾರೆ. ಗಂಭೀರ ಗಾಯದ ಸಮಸ್ಯೆಯನ್ನೂ ಎದುರಿಸಿ ಗೆದ್ದುಬಂದಿದ್ದಾರೆ. ಹತ್ತಾರು ಉನ್ನತ ಸಾಧನೆಗಳನ್ನು ಮಾಡಿದಾಗ ಸೃಷ್ಟಿಯಾಗುವ ನಿರೀಕ್ಷೆಗಳ ಒತ್ತಡವನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಹಿಂದಿನ ಯಶಸ್ಸನ್ನು ಕಾಪಾಡಿಕೊಂಡು ಅದಕ್ಕಿಂತ ದೊಡ್ಡ ಯಶಸ್ಸು ಗಳಿಸುವತ್ತ ಓಡಲು ದುಪ್ಪಟ್ಟು ಸಾಮರ್ಥ್ಯ ಬೇಕು. ಅಂತಹದೊಂದು ಪ್ರಯತ್ನವೇ ನಿಜಕ್ಕೂ ದೊಡ್ಡ ಸಾಧನೆ. ಆ ವಿಷಯದಲ್ಲಿ ಸಿಂಧು ಗೆದ್ದಿದ್ದಾರೆ. ಆದ್ದರಿಂದ ಅವರ ಈ ಸೋಲಿಗೆ ಗೌರವ ಬಂದಿದೆಯಲ್ಲವೇ?

ಸಿಂಧು ಕ್ರೀಡಾಜೀವನದ ಪುಟಗಳನ್ನು ತಿರುವಿಹಾಕುತ್ತ ಹೋದಂತೆ ಇಂತಹ ಸ್ಫೂರ್ತಿಯ ಕತೆಗಳು ಹತ್ತಾರು ಸಿಗುತ್ತವೆ. ಅವರಂತೆ ಆಗಬೇಕೆಂದು ಹೆಣ್ಣುಮಕ್ಕಳು ರ‍್ಯಾಕೆಟ್ ಹಿಡಿದು ಬ್ಯಾಡ್ಮಿಂಟನ್ ಕೋರ್ಟ್‌ನತ್ತ ಹೊರಡುವಂತೆ ಪ್ರೇರೆಪಿಸುವ ಕತೆಗಳು ಅವು. ಸಿಂಧು ಅವರ ಪ್ರಶಸ್ತಿ ಸಂಗ್ರಹದಲ್ಲಿ ಜಗತ್ತಿನ ಎಲ್ಲ ಪ್ರಮುಖ ಪದಕಗಳೂ ಇವೆ. ಆದರೆ ಒಲಿಂಪಿಕ್ಸ್‌ ಚಿನ್ನದ ಪದಕಕ್ಕಾಗಿ ಕಾದಿರುವ ಪುಟ್ಟ ಸ್ಥಳ ಮಾತ್ರ ಈ ಬಾರಿಯೂ ತುಂಬಲಿಲ್ಲ. ಆದರೆ, ಅವರ ಚಿನ್ನದಂತಹ ಸರಳ ಗುಣ ಮತ್ತು ಸಾಧನೆಗಳ ಹೊಳಪು ಮುಂದಿನ ಹಲವು ಪೀಳಿಗೆಗಳ ಮಕ್ಕಳಿಗೆ ಸ್ಫೂರ್ತಿಯ ಚಿಲುಮೆಯಾಗಿರುವುದರಲ್ಲಿ ಸಂಶಯವೇ ಇಲ್ಲ. ಒಂದಂತೂ ನಿಜ. ಮುಂದಿನ ಒಲಿಂಪಿಕ್ ಕೂಟದಲ್ಲಿ ಸಿಂಧು ಆಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಇನ್ನಷ್ಟು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವುದು ಮಾತ್ರ ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.