ADVERTISEMENT

Paris Olympics: ವಿಘ್ನ, ಅವ್ಯವಸ್ಥೆಗಳ ನಡುವೆ ಕ್ರೀಡಾ ಹಬ್ಬಕ್ಕೆ ಅದ್ಧೂರಿ ಚಾಲನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2024, 3:24 IST
Last Updated 27 ಜುಲೈ 2024, 3:24 IST
<div class="paragraphs"><p>33ನೇ ಒಲಿಂಪಿಕ್‌ ಕೂಟಕ್ಕೆ&nbsp; ಅದ್ಧೂರಿ ಚಾಲನೆ</p></div>

33ನೇ ಒಲಿಂಪಿಕ್‌ ಕೂಟಕ್ಕೆ  ಅದ್ಧೂರಿ ಚಾಲನೆ

   

(ರಾಯಿಟರ್ಸ್‌ ಚಿತ್ರ)

ಜಾಗತಿಕ ಕ್ರೀಡಾಹಬ್ಬ 33ನೇ ಒಲಿಂಪಿಕ್‌ಗೆ ಬೆಳಕಿನ ನಗರಿ ಪ್ಯಾರಿಸ್‌ನಲ್ಲಿ ಅದ್ಧೂರಿ ಚಾಲನೆ ದೊರಕಿದೆ. ಮಳೆಯ ಆರ್ಭಟದ ನಡುವೆಯು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಯಶಸ್ವಿಯಾಗಿ ಉದ್ಘಾಟನಾ ಸಮಾರಂಭ ನೆರವೇರಿಸಿದ್ದಾರೆ. ಉದ್ಘಾಟನಾ ದಿನದ ಪ್ರಮುಖಾಂಶಗಳು ಇಲ್ಲಿವೆ.

ಕ್ರೀಡಾಪ್ರೇಮಿಗಳನ್ನು ಕಾಡಿದ ಹಲವು ‘ವಿಘ್ನ’ಗಳು:

ADVERTISEMENT

ಸೀನ್ ನದಿಯಲ್ಲಿ ನಡೆದ ಒಲಿಂಪಿಕ್‌ ಕೂಟದ ಉದ್ಘಾಟನೆಯನ್ನು ವೀಕ್ಷಿಸಲು ಬರುವ ಮುನ್ನ ಸಾವಿರಾರು ಕ್ರೀಡಾಪ್ರೇಮಿಗಳನ್ನು ಹಲವು ‘ವಿಘ್ನ’ಗಳು ಕಾಡಿದವು. ದುಷ್ಕರ್ಮಿಗಳ ‘ವಿಧ್ವಂಸಕ ಕೃತ್ಯ’ದಿಂದ ಫ್ರೆಂಚ್‌ ರೈಲು ವ್ಯವಸ್ಥೆ ಅಸ್ತವ್ಯಸ್ತ ಗೊಂಡಿತು.

ಶುಕ್ರವಾರ ಬೆಳಿಗ್ಗೆ ಪ್ಯಾರಿಸ್‌ ರೈಲ್ವೆಯ ಹೈ ಸ್ಪೀಡ್ ಟಿಜಿವಿ ಲೈನ್ಸ್‌ನ ಮೂರು ಸ್ಥಳಗಳಲ್ಲಿ ದುಷ್ಕರ್ಮಿಗಳು ದೊಡ್ಡ ಮಟ್ಟದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಪ್ರಯತ್ನವನ್ನು ಭದ್ರತಾ ಸಿಬ್ಬಂದಿ ತಡೆದರು. ಇದರಿಂದಾಗಿ ಬಹಳಷ್ಟು ಹೊತ್ತು ರೈಲು ಸಂಚಾರಕ್ಕೆ ವ್ಯತ್ಯಯವಾಗಿತ್ತು.

ಉದ್ಘಾಟನೆಗೂ ಒಂದೆರಡು ಗಂಟೆ ಮುನ್ನ ಆರಂಭವಾದ ಮಳೆಯಿಂದಾಗಿ ಮತ್ತೆ ಭೀತಿ ಮೂಡಿತ್ತು. ಕಾರ್ಯಕ್ರಮವೇ ಅಸ್ತವ್ಯಸ್ತವಾಗುವ ಆತಂಕ ಎದುರಾಗಿತ್ತು. ಮಳೆಯಲ್ಲಿಯೂ ಸಾವಿರಾರು ಜನರು ಕಾದು ಕುಳಿತರು. ಅಂತೂ ಇಂತೂ ಮಳೆ ನಿಂತಿತು. ಚೆಂದದ ಕಾರ್ಯಕ್ರಮ ರಂಗೇರಿತು.

ನದಿ ಮೇಲೆ ಉದ್ಘಾಟನೆ ಸಮಾರಂಭ:

ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಸಲ ಕ್ರೀಡಾಂಗಣದಿಂದ ಹೊರಗೆ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗಿತ್ತು. ಸೀನ್ ನದಿಯಲ್ಲಿ ಅಭೂತಪೂರ್ವ ಕಾರ್ಯಕ್ರಮಕ್ಕೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಚಾಲನೆ ನೀಡಿದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು:

ಸುಪ್ರಸಿದ್ಧ ಕಲಾವಿದರಿಂದ ನೃತ್ಯ, ಗಾಯನ ಕಾರ್ಯಕ್ರಮಗಳು ಗಮನ ಸೆಳೆದವು. ಒಲಿಂಪಿಕ್ ಕೂಟದ ಪದಕ ರಚನೆ, ಕ್ರೀಡಾಂಗಣಗಳ ನಿರ್ಮಾಣದ ಕುರಿತ ಸಾಕ್ಷ್ಯಚಿತ್ರಗಳು ರೋಮಾಂಚನಗೊಳಿಸಿದವು. ಫ್ರೆಂಚ್ ಜಾನಪದ ಕಲೆಗಳು, ಪಾರಂಪರಿಕ ಸೊಗಡು, ಸಾಂಸ್ಕೃತಿಕ ಹಿರಿಮೆ ಮತ್ತು ತಂತ್ರಜ್ಞಾನದ ವೈಭವಗಳನ್ನು ತಂಡಗಳು ಪ್ರಸ್ತುತಪಡಿಸಿದವು.

85 ದೋಣಿಗಳಲ್ಲಿ ಸಾಗಿದ 7,500 ಮಂದಿ ಅಥ್ಲೀಟುಗಳು

ಸುಮಾರು 7,500 ಅಥ್ಲೀಟುಗಳು 85 ದೋಣಿಗಳಲ್ಲಿ ಆರು ಕಿ.ಮೀ. ದೂರ ಸಾಗಿದರು. ಅದರಲ್ಲಿ ಭಾರತ ತಂಡದ ದೋಣಿಯೂ ಗಮನ ಸೆಳೆಯಿತು.

ಅಚಂತ, ಸಿಂಧು ನೇತೃತ್ವದಲ್ಲಿ ಮಿಂಚಿದ ಭಾರತೀಯ ಕ್ರೀಡಾಪಟುಗಳು:

ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರ ನೇತೃತ್ವದಲ್ಲಿ ಭಾರತೀಯ ಪೋಷಾಕಿನಲ್ಲಿ ಕ್ರೀಡಾಪಟುಗಳು ಮಿಂಚಿದರು. ಕೈಬೀಸುತ್ತ, ತ್ರಿವರ್ಣ ಧ್ವಜವನ್ನು ಬೀಸುತ್ತ ಸಾಗಿದರು.

ಕ್ರೀಡಾಜ್ಯೋತಿ ಹಿಡಿದ ಸ್ನೂಪ್ ಡಾಗ್ :

ರ‍್ಯಾಪ್ ಗಾಯಕ ಸ್ನೂಪ್ ಡಾಗ್ ಅವರು ಕ್ರೀಡಾಜ್ಯೋತಿಯನ್ನು ಹಿಡಿಯುವ ಗೌರವಕ್ಕೆ ಪಾತ್ರರಾದರು. ಬೇರೆ ಬೇರೆ ದೇಶಗಳ ದಿಗ್ಗಜ ಕ್ರೀಡಾಪಟುಗಳು ಸೇರಿದ್ದರು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್, ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಮತ್ತಿತರ ಗಣ್ಯರು ಹಾಜರಿದ್ದರು.

33ನೇ ಒಲಿಂಪಿಕ್‌ ಕೂಟಕ್ಕೆ  ಅದ್ಧೂರಿ ಚಾಲನೆ

ಟಿಕೆಟ್ ಅವ್ಯವಸ್ಥೆ:

ಸಮಾರಂಭಕ್ಕೆ ಸಾಕ್ಷಿಯಾಗಲು ಬಂದಿದ್ದ ಪ್ರೇಕ್ಷಕರು ಟಿಕೆಟಿಂಗ್ ಅವ್ಯವಸ್ಥೆಯಿಂದಾಗಿ ಉದ್ದನೆಯ ಸರದಿ ಸಾಲುಗಳಲ್ಲಿ ನಿಲ್ಲಬೇಕಾಯಿತು. ಹಲವು ಗೇಟುಗಳನ್ನು ಒಂದು ಗಂಟೆ ತಡವಾಗಿ ತೆರೆಯಲಾಯಿತು. ಅಲ್ಲಿದ್ದ ಸಿಬ್ಬಂದಿಗೆ ಟಿಕೆಟ್‌ಗಳ ತಪಾಸಣೆಗೆ ಬಳಸುವ ಸ್ಕ್ಯಾನರ್‌ಗಳನ್ನು ತಡವಾಗಿ ನೀಡಿದ್ದು ಈ ಅವ್ಯವಸ್ಥೆಗೆ ಕಾರಣವಾಯಿತು. ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.