ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ತೋರುತ್ತಿರುವ ಪ್ರದರ್ಶನದ ಬಗ್ಗೆ ಪಾಕಿಸ್ತಾನ ಹಾಕಿ ದಿಗ್ಗಜ ಹಸನ್ ಸರ್ದಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಬಂಗಾರದ ಪದಕ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದಿರುವ ಅವರು, 'ಗೆಲ್ಲಬೇಕು' ಎಂದು ಆಶಿಸಿದ್ದಾರೆ.
ಭಾನುವಾರ ನಡೆದ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಬಲಿಷ್ಠ 'ಬ್ರಿಟನ್' ಎದುರು ಗೆದ್ದಿರುವ ಭಾರತ, ನಾಳೆ (ಮಂಗಳವಾರ) ನಡೆಯಲಿರುವ ಸೆಮಿಫೈನಲ್‌ನಲ್ಲಿ ಜರ್ಮನಿಯ ಸವಾಲನ್ನು ಎದುರಿಸಲಿದೆ.
'ಪಾಕಿಸ್ತಾನ ತಂಡಗಳು ಕ್ರಿಕೆಟ್ ಅಥವಾ ಹಾಕಿಯನ್ನು ಆಡದಿದ್ದಾಗಲೆಲ್ಲಾ ನಾನು ಭಾರತವನ್ನು ಬೆಂಬಲಿಸುತ್ತೇನೆ. ಇದು (ಹರ್ಮನ್‌ಪ್ರೀತ್ ಪಡೆ) ಅತ್ಯುತ್ತಮ ತಂಡ. ನಾನು ನೋಡಿದ ಭಾರತ ತಂಡಗಳಲ್ಲೇ ಶ್ರೇಷ್ಠವಾದದ್ದು. ಸಾಕಷ್ಟು ಸುಧಾರಣೆಗಳನ್ನು ಕಂಡಿದೆ. ಯುರೋಪ್ ದೇಶದ ತಂಡಗಳಿಗೂ ಕಠಿಣ ಸವಾಲೊಡ್ಡಬಲ್ಲದು' ಎಂದು ಸರ್ದಾರ್ ಶ್ಲಾಘಿಸಿದ್ದಾರೆ.
ಲಾಸ್ ಏಜಂಲೀಸ್‌ನಲ್ಲಿ ನಡೆದ 1984ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನ ತಂಡದಲ್ಲಿದ್ದ ಅವರು, 'ಭಾರತ ಗೆಲ್ಲುವ ಸಾಮರ್ಥ್ಯ ಹೊಂದಿದೆ ಮತ್ತು ಈ ಬಾರಿ ಒಲಿಂಪಿಕ್ಸ್‌ನಲ್ಲಿ ಗೆಲ್ಲಬೇಕು' ಎಂದು ಆಶಿಸಿದ್ದಾರೆ.
'ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರು ಆಡಿದ ರೀತಿಯಿಂದ ಪ್ರಭಾವಿತನಾಗಿದ್ದೇನೆ' ಎಂದಿರುವ ಪಾಕ್ ದಿಗ್ಗಜ, 'ಅತ್ಯುತ್ತಮವಾಗಿರುವ ಭಾರತ ತಂಡ, ಗೆಲ್ಲುವುದಕ್ಕಾಗಿಯೇ ಇಲ್ಲಿದ್ದೇವೆ ಎಂಬಂತೆ ಆಡಬೇಕು. ಇಂತಹ ವೇದಿಕೆಯಲ್ಲಿ ಆಡುವಾಗ ಮಾನಸಿಕ ಸಿದ್ಧತೆ ಅತಿ ಮುಖ್ಯ' ಎಂದು ಸಲಹೆ ನೀಡಿದ್ದಾರೆ.
ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಭಾರತ ತಂಡವು 42 ನಿಮಿಷಗಳ ಕಾಲ ಕೇವಲ 10 ಆಟಗಾರರೊಂದಿಗೆ ಆಡಿತು.
ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಓಡುತ್ತಿದ್ದ ವೇಳೆ ಅಮಿತ್ ರೋಹಿದಾಸ್ ಅವರು ಬ್ರಿಟನ್ ಆಟಗಾರ ವಿಲಿಯಮ್ ಕಾಲ್ನನ್ ಅವರ ಮುಖದ ಹತ್ತಿರಕ್ಕೆ ಹಾಕಿ ಸ್ಟಿಕ್ ಕೊಂಡೊಯ್ದಿದ್ದರು. ಹೀಗಾಗಿ, ಅವರಿಗೆ ರೆಡ್ ಕಾರ್ಡ್ ನೀಡಿ ಪಂದ್ಯದಿಂದ ಹೊರಗುಳಿಯುವಂತೆ ಮಾಡಲಾಯಿತು. ಆದಾಗ್ಯೂ ಎದೆಗುಂದದೆ ಆಡಿದ ಭಾರತ, ನಿಗದಿತ ಅವಧಿಯಲ್ಲಿ 1–1 ಅಂತರದ ಸಮಬಲದ ಪ್ರದರ್ಶನ ತೋರಿತು. ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಅಂತರದಿಂದ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಈ ಬಗ್ಗೆ ಮಾತನಾಡಿರುವ ಸರ್ದಾರ್, ಪ್ರಸ್ತುತ ಭಾರತ ತಂಡವು ಹೊಂದಿರುವ ಮಾನಸಿಕ ಸಾಮರ್ಥ್ಯ ಮತ್ತು ಒಗ್ಗಟ್ಟು (ಭಾರತದ) ಇತರೆಲ್ಲ ತಂಡಗಳಿಗಿಂತ ಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.