ಪ್ಯಾರಿಸ್: ಉಭಯ ದೇಶಗಳ ನಡುವಣ ಕ್ರಿಕೆಟ್ ಪ್ರತಿಸ್ಪರ್ಧೆಯಂತೆಯೇ ಭಾರತದ ನೀರಜ್ ಚೋಪ್ರಾ ಹಾಗೂ ತಮ್ಮ ನಡುವಿನ ಪೈಪೋಟಿಯು ಚರ್ಚೆಯಾಗುತ್ತಿದೆ. ಇದು ಎರಡೂ ದೇಶಗಳ ಯುವಕರಲ್ಲಿ ಕ್ರೀಡಾ ಮನೋಭಾವವನ್ನು ಹುರಿದುಂಬಿಸಲಿದೆ ಎಂದು ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಂ ಅಭಿಪ್ರಾಯಪಟ್ಟಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಚಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಗುರುವಾರ ತಡ ರಾತ್ರಿ ನಡೆದ ಫೈನಲ್‌ನಲ್ಲಿ 92.97 ಮೀ. ದೂರ ಚಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್ ದಾಖಲೆಯನ್ನೂ ಬರೆದ ಹರ್ಷದ್, ಇದೇ ಮೊದಲ ಬಾರಿಗೆ ನೀರಜ್ ಎದುರು ಮೇಲುಗೈ ಸಾಧಿಸಿದ್ದಾರೆ. ಇದಕ್ಕೂ ಮೊದಲು ಮುಖಾಮುಖಿಯಾದ 10 ಸಲವೂ ನೀರಜ್ ಅವರೇ ಮಿಂಚಿದ್ದರು. ಭಾರತದ ಅಥ್ಲೀಟ್ ಈ ಬಾರಿ 89.45 ಮೀ. ದೂರ ಎಸೆದು ಬೆಳ್ಳಿಗೆ ಕೊರಳೊಡ್ಡಿದ್ದಾರೆ.
'ಕ್ರಿಕೆಟ್ ಪಂದ್ಯಗಳು ಅಥವಾ ಇತರ ಕ್ರೀಡೆಗಳ ಸಂದರ್ಭದಲ್ಲಿ ಖಂಡಿತವಾಗಿಯೂ ಜಿದ್ದಾಜಿದ್ದಿ ಇರುತ್ತದೆ. ಆದರೆ, ಅದೇ ರೀತಿ, ಕ್ರೀಡೆಯಲ್ಲಿ ಭಾಗವಹಿಸುವ ಎರಡೂ ದೇಶಗಳ ಯುವಕರು ತಮಗೆ ಸ್ಫೂರ್ತಿಯಾದವರನ್ನು ಹಾಗೂ ನಮ್ಮನ್ನು ಅನುಸರಿಸುತ್ತಿರುವುದು ಉತ್ತಮ ಬೆಳವಣಿಗೆ. ಇದು ತಮ್ಮ ತಮ್ಮ ದೇಶಗಳಿಗೆ ಪದಕಗಳನ್ನು ತಂದುಕೊಡಲಿದೆ' ಎಂದು ಹೇಳಿದ್ದಾರೆ.
27 ವರ್ಷದ ನದೀಂ, ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಮೊದಲ ಅಥ್ಲೀಟ್. ಅಷ್ಟೇ ಅಲ್ಲ, 1988ರ ಸೋಲ್ ಒಲಿಂಪಿಕ್ಸ್ ನಂತರ ಆ ದೇಶದ ಪರ ವೈಯಕ್ತಿಕವಾಗಿ ಈ ಸಾಧನೆ ಮಾಡಿದ ಕ್ರೀಡಾಪಟುವೂ ಹೌದು. ಬಾಕ್ಸರ್ ಹುಸ್ಸೇನ್ ಶಾ ಅವರು ಸೋಲ್‌ನಲ್ಲಿ ಕಂಚು ಗೆದ್ದಿದ್ದರು.
ಮೈದಾನದಲ್ಲಿನ ಸೆಣಸಾಟದ ಹೊರತಾಗಿ ನೀರಜ್ ಹಾಗೂ ನದೀಂ ಉತ್ತಮ ಸ್ನೇಹಿತರು. ಕೆಲವು ತಿಂಗಳ ಹಿಂದೆ ನದೀಂ ಅವರು ಗುಣಮಟ್ಟದ ಜಾವೆಲಿನ್ ಖರೀದಿಸಲು ನೆರವಾಗುವಂತೆ ಸಾಮಾಜಿಕ ಮಾಧ್ಯಮದಲ್ಲಿ ನೆರವು ಕೋರಿದ್ದರು. ಆಗ ನದೀಂ ಅವರಿಗೆ ನೀರಜ್ ನೆರವಾಗಿದ್ದರು.
ಕ್ವಾಲಿಫೈಯರ್‌ನಲ್ಲಿ 4ನೇ ಸ್ಥಾನ
ಮಂಗಳವಾರ ನಡೆದ ಕ್ವಾಲಿಫೈಯರ್ ಸುತ್ತಿನಲ್ಲಿ ನೀರಜ್ ಅತ್ಯುತ್ತಮ ಸಾಧನೆ ತೋರಿದ್ದರು. ಮೊದಲ ಯತ್ನದಲ್ಲೇ 89.34 ಮೀ. ದೂರ ಥ್ರೋ ಮಾಡುವ ಮೂಲಕ ಅಗ್ರಸ್ಥಾನಿಯಾಗಿ ಅಂತಿಮ ಸುತ್ತಿಗೇರಿದ್ದರು.
ಜರ್ಮನಿಯ ಜೂಲಿಯನ್ ವೆಬರ್ (87.76 ಮೀ.) ಹಾಗೂ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (88.63 ಮೀ.) ಎರಡು ಮತ್ತು 3ನೇ ಸ್ಥಾನದಲ್ಲಿದ್ದರು. 86.59 ಮೀ. ದೂರ ಎಸೆಯುವ ಮೂಲಕ ಸಾಧಾರಣ ಪ್ರದರ್ಶನ ನೀಡಿದ್ದ ನದೀಂ ನಂತರದ 4ನೇ ಸ್ಥಾನದೊಂದಿಗೆ ಫೈನಲ್ ತಲುಪಿದ್ದರು. ಆದರೆ, ಫೈನಲ್‌ನಲ್ಲಿ ಫಿನಿಕ್ಸ್‌ನಂತೆ ಮೇಲೆದ್ದರು.
2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (90.18 ಮೀ.) ಚಿನ್ನ ಗೆದ್ದಿದ್ದ ಅವರು, ಒಲಿಂಪಿಕ್ಸ್ ಫೈನಲ್‌ನಲ್ಲಿಯೂ ಎರಡು ಸಲ 90 ಮೀ. ಗಡಿ ದಾಟುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆಯನ್ನೂ ಬರೆದರು. 2008ರಲ್ಲಿ ನಾರ್ವೆಯ ಆ್ಯಂಡ್ರಿಯಾಸ್ ಥಾರ್ಕಿಲ್ಡ್‌ಸೆನ್ ಅವರು 90.57 ಮೀ. ಎಸೆದಿದ್ದದ್ದು ಇದುವರೆಗೆ ದಾಖಲೆಯಾಗಿತ್ತು.
ಸಾಧನೆ ಬಳಿಕ ಮಾತನಾಡಿದ ನದೀಂ, 'ದೇಶದ ಜನರಿಗೆ ಕೃತಜ್ಞನಾಗಿದ್ದೇನೆ. ಪ್ರತಿಯೊಬ್ಬರೂ ನನಗಾಗಿ ಪ್ರಾರ್ಥಿಸಿದ್ದರು. ಉತ್ತಮ ಪ್ರದರ್ಶನ ನೀಡುವ ಭರವಸೆ ನನಗಿತ್ತು. ಕೆಲವು ವರ್ಷಗಳ ಹಿಂದೆ ಮಂಡಿಗೆ ಗಾಯವಾಗಿ, ಚೇತರಿಸಿಕೊಂಡಿದ್ದೆ. ಫಿಟ್‌ನೆಸ್ ಕಾಪಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದೆ. 92.97 ಮೀ.ಗಿಂತಲೂ ದೂರ ಎಸೆಯುವ ವಿಶ್ವಾಸದಲ್ಲಿದ್ದೆ. ಆದರೆ, ಆ ಒಂದು ಎಸೆತವೇ ಚಿನ್ನ ಗೆದ್ದುಕೊಡಲು ಸಾಕಾಯಿತು' ಎಂದು ಹರ್ಷಿಸಿದ್ದಾರೆ.
'ಇನ್ನಷ್ಟು ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನ ಮುಂದುವರಿಸುತ್ತೇನೆ. ಈಗ ತಲುಪಿರುವ ಗುರಿಯನ್ನು ಮೀರುವ ಯೋಜನೆಯಲ್ಲಿದ್ದೇನೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.