ಪ್ಯಾರಿಸ್: ಆಧುನಿಕ ಒಲಿಂಪಿಕ್ಸ್ ಆರಂಭವಾಗಿ 56 ವರ್ಷಗಳ ನಂತರ ಭಾರತವು ವೈಯಕ್ತಿಕ ವಿಭಾಗದಲ್ಲಿ ಮೊದಲ ಬಾರಿಗೆ ಪದಕ ಜಯಿಸಿತ್ತು. ಆಗ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ಕಶಾಬಾ ಜಾಧವ್ ಅವರು ಕಂಚಿನ ಪದಕ ಜಯಿಸಿದ್ದರು.
ಅದಾದ ನಂತರ ವೈಯಕ್ತಿಕ ವಿಭಾಗದಲ್ಲಿ ಮತ್ತೊಂದು ಪದಕ ಜಯಿಸಲು 44 ವರ್ಷಗಳವರೆಗೆ ಕಾಯಬೇಕಾಯಿತು. ಟೆನಿಸ್‌ನಲ್ಲಿ ಲಿಯಾಂಡರ್ ಪೇಸ್ 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದುಕೊಟ್ಟರು.
ಆದರೆ ಭಾರತದ ಮಹಿಳೆಯೊಬ್ಬರು ಒಲಿಂಪಿಕ್ ಕೂಟದಲ್ಲಿ ಪದಕ ಜಯಿಸುವುದನ್ನು ನೋಡಲು 2000ನೇ ಇಸವಿಯವರೆಗೂ ಕಾಯಬೇಕಾಯಿತು. ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಅವರು ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದರು. ಇದೆಲ್ಲದರಾಚೆ ಭಾರತದ ಸ್ವಾತಂತ್ರ್ಯ ನಂತರದ ಒಲಿಂಪಿಕ್ ಕೂಟಗಳಲ್ಲಿ ಮಹಿಳೆ ಅಥವಾ ಪುರುಷರ ವೈಯಕ್ತಿಕ ವಿಭಾಗದಲ್ಲಿ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದ ಭಾರತೀಯರು ಯಾರೂ ಇರಲಿಲ್ಲ. ಇದೀಗ ಪ್ಯಾರಿಸ್‌ನಲ್ಲಿ ಶೂಟರ್ ಮನು ಭಾಕರ್ ಈ ಸಾಧನೆ ಮಾಡಿದ್ದಾರೆ.
ಪ್ಯಾರಿಸ್‌ನಿಂದ 280 ಕಿ.ಮೀ ದೂರದಲ್ಲಿರುವ ಶತೋಹು ಶೂಟಿಂಗ್ ರೇಂಜ್‌ನಲ್ಲಿ ನಡೆದ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಮನು ಅವರು ಸರಬ್ಜೋತ್ ಸಿಂಗ್ ಜೊತೆಗೂಡಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿದರು. ಇದರೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಭಾನುವಾರ ಇದೇ ರೇಂಜ್‌ನಲ್ಲಿ ಅವರು ಮಹಿಳೆಯರ ವಿಭಾಗದ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗಳಿಸಿದ್ದರು. ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಪದಕ ಗದ್ದ ಭಾರತದ ಮೊಟ್ಟಮೊದಲ ಮಹಿಳೆಯಾಗಿದ್ದರು. ಇದೀಗ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಮೊದಲ ಭಾರತೀಯ ಕ್ರೀಡಾಪಟುವಾದರು.
ಕಂಚಿನ ಪದಕಕ್ಕಾಗಿ ನಡೆದ ಪ್ಲೇಆಫ್‌ನಲ್ಲಿ 22 ವರ್ಷದ ಬೆಡಗಿ ಮನು ಅವರು ಅಷ್ಟೇನೂ ಅನುಭವಿಯಲ್ಲದ ಸರಬ್ಜೋತ್ ಅವರೊಂದಿಗೆ ಉತ್ತಮ ಹೊಂದಾಣಿಕೆ ಸಾಧಿಸಿದರು. ಒತ್ತಡವನ್ನು ತಮ್ಮ ಮೇಲೆ ಎಳೆದುಕೊಂಡು ಸಮರ್ಥವಾಗಿ ನಿಭಾಯಿಸಿದರು. ಇದರಿಂದಾಗಿ ಭಾರತವು ದಕ್ಷಿಣ ಕೊರಿಯಾದ ವಾನ್‌ಹೊ ಲೀ ಮತ್ತು ಯೆ ಜಿನ್ ಒಹ್ (16–10) ಅವರ ವಿರುದ್ಧ ಜಯಿಸಿತು.
ಮನು ಆರಂಭದಿಂದಲೇ ಶಿಸ್ತುಬದ್ಧವಾಗಿ ಸಾಮರ್ಥ್ಯ ಪ್ರದರ್ಶಿಸಿದರು. ಸತತ ಏಳು ಬಾರಿ 10ರ ಸ್ಕೋರ್ ಗಳಿಸಿದರು. ಆದರೆ ಎದುರಾಳಿ ಲೀ ಈ ವಿಷಯದಲ್ಲಿ ಹಿಂದೆ ಬಿದ್ದರು. ಅವರು ಮೂರರಿಂದ ಎಂಟರ ಸೀರಿಸ್‌ವರೆಗೆ 9ರ ಸ್ಕೋರ್ ದಾಖಲಿಸಿದರು. ಇದರಿಂದಾಗಿ ಭಾರತ 10–6ರ ಮುನ್ನಡೆ ಪಡೆಯಿತು.
ಮನು ಅವರ ಆತ್ಮವಿಶ್ವಾಸದ ಶೂಟಿಂಗ್‌ನಿಂದ ಪ್ರೇರಣೆಗೊಂಡಂತೆ ಕಂಡ ಸರಬ್ಜೋತ್ ಕೂಡ ನಿಖರ ಗುರಿ ಹಿಡಿಯತೊಡಗಿದರು. ಈ ನಡುವೆ ತಮ್ಮ ಕೋಚ್ ಮುಂಖಾಬಯರ್ ದೊರ್ಜಾಸುರೇನ್ ಅವರ ಸಲಹೆ ಕೂಡ ಪಡೆದುಕೊಂಡರು. ಇದರಿಂದಾಗಿ ಭಾರತದ ಮುನ್ನಡೆಯು 14–6ಕ್ಕೆ ವಿಸ್ತರಿಸಿತು. ಪದಕ ಜಯದ ಸನಿಹ ಬಂದು ನಿಂತಿತು.
ಇದೇ ರೇಂಜ್‌ನಲ್ಲಿ ಸರ್ಬಿಯಾದ ಝೊರಾನಾ ಅರುನೋವಿಚ್ ಮತ್ತು ದಾಮಿರ್ ಮಿಕೆಚ್ ಚಿನ್ನ ಗೆದ್ದರು. ಟರ್ಕಿಯ ಸೆವಾಲ್ ಇಲಾಯದಾ ತರಾನ್ ಮತ್ತು ಯೂಸುಫ್ ಡಿಕೆಕ್ ಜೋಡಿಯು ಬೆಳ್ಳಿ ಪದಕ ಪಡೆಯಿತು.
ಭಾರತ–ಬ್ರಿಟಿಷ್ ನಾರ್ಮನ್ ಪದಕ ಡಬಲ್ ಸಾಧನೆ
ನವದೆಹಲಿ: ಯಾವುದೇ ಒಲಿಂಪಿಕ್ಸ್‌ನಲ್ಲಿಯೂ ಭಾರತದ ಅಥ್ಲೀಟ್‌ಗಳು ಪದಕ ಸಾಧನೆ ಮಾಡಿದಾಗಲೆಲ್ಲ ಬ್ರಿಟಿಷ್–ಭಾರತೀಯ ನಾರ್ಮನ್ ಪ್ರಿಚರ್ಡ್ ಅವರ ನೆನಪಾಗುತ್ತದೆ.
ಮಂಗಳವಾರ ಭಾರತದ ಮನು ಭಾಕರ್ ಅವರು ಶೂಟಿಂಗ್‌ನಲ್ಲಿ ಎರಡನೇ ಪದಕ ಜಯದ ಸಾಧನೆ ಮಾಡಿದಾಗಲೂ ನಾರ್ಮನ್ ಹೆಸರು ಕೇಳಿಬಂದಿತ್ತು. ಅದಕ್ಕೆ ಕಾರಣ ನಾರ್ಮನ್ ಅವರು 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಎರಡು ಪದಕ (200 ಮೀ ಓಟ ಮತ್ತು 200 ಮೀ ಹರ್ಡಲ್ಸ್‌ನಲ್ಲಿ ಬೆಳ್ಳಿ) ಜಯಿಸಿದ್ದ ದಾಖಲೆ. ಆದರೆ ಅವರನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿ (ಐಒಸಿ)ಯು ಭಾರತದವರು ಎಂದು ಉಲ್ಲೇಖಿಸಿದೆ. ಆದರೆ ವಿಶ್ವ ಅಥ್ಲೆಟಿಕ್ಸ್ (ಆಗ ಐಎಎಎಫ್) ಅವರ ಸಾಧನೆಯನ್ನು ಬ್ರಿಟನ್‌ಗೆ ಸಮರ್ಪಿಸಿದೆ.
1875ರಲ್ಲಿ ಪ್ರಿಚರ್ಡ್ ಅವರು ಕೋಲ್ಕತ್ತದಲ್ಲಿ ಜನಿಸಿದ್ದರು. 1929ರಲ್ಲಿ ಅವರು ಲಾಸ್ ಏಂಜಲೀಸ್‌ನಲ್ಲಿ ನಿಧನರಾದರು.
‘ನಾರ್ಮನ್ ಪ್ರಿಚರ್ಡ್ ಅವರು ವಿವಾದಾತ್ಮಕ ಒಲಿಂಪಿಯನ್ ಆಗಿದ್ದಾರೆ. ಅವರ ಸಾಧನೆಯನ್ನು ಭಾರತ ಮತ್ತು ಬ್ರಿಟನ್ ಎರಡೂ ತಮ್ಮ ದೇಶಗಳಿಗೆ ಸಲ್ಲಬೇಕೆಂದು ಪ್ರತಿಪಾದಿಸುತ್ತವೆ. ಆದರೆ ಅವರು ಶ್ರೇಷ್ಠ ಅಥ್ಲೀಟ್ ಆಗಿದ್ದರು. ವೇಗದ ಓಟಗಾರ ಮತ್ತು ಹರ್ಡಲ್ಸ್ ನಲ್ಲಿ ಅವರಿಗೆ ಅವರೇ ಸಾಟಿ. ಆ ಕಾಲದಲ್ಲಿ ನಡೆಯುತ್ತಿದ್ದ ಬೆಂಗಾಲ್ 100 ಯಾರ್ಡ್ಸ್ ಸ್ಪರ್ಧೆಯಲ್ಲಿ ಸತತ ಏಳು ಸಲ (1894–1900) ಜಯಿಸಿದ್ದರು. 440 ಯಾರ್ಡ್ಸ್ ಮತ್ತು 120 ಯಾರ್ಡ್ಸ್ ಹರ್ಡಲ್ಸ್‌ಗಳಲ್ಲಿಯೂ ಅವರು ಬಂಗಾಳದ ಚಾಂಪಿಯನ್ ಆಗಿದ್ದರು.
'ನಾರ್ಮನ್ ಅವರು ಬ್ರಿಟಿಷ್ ಎಂಬುದು ನಿರ್ವಿವಾದ’ ಎಂದು ಬ್ರಿಟಿಷ್ ಒಲಿಂಪಿಕ್ ಇತಿಹಾಸಕಾರ ಇಯಾನ್ ಬುಕಾನನ್ ಅವರು ಹೇಳುತ್ತಾರೆ. ನಾರ್ಮನ್ ಅವರು ಒಲಿಂಪಿಕ್ಸ್ ನಂತರ ಹೆಚ್ಚು ಕಾಲ ಭಾರತದಲ್ಲಿ ಇರಲಿಲ್ಲ. ಅಮೆರಿಕಕ್ಕೆ ತೆರಳಿದರು. ಹಾಲಿವುಡ್‌ನಲ್ಲಿ 27 ಮೂಕಿ ಸಿನಿಮಾಗಳಲ್ಲಿ ನಟಿಸಿದರು. ಅಲ್ಲಿ ಅವರು ನಾರ್ಮನ್ ಟ್ರೆವರ್ ಹೆಸರಿನಿಂದ ಗುರುತಿಸಿಕೊಂಡಿದ್ದರು.
ಎರಡು ಪದಕ ಗೆದ್ದ ಭಾರತೀಯರು
ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ, ಸ್ವಾತಂತ್ರ್ಯನಂತರದ ಭಾರತದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ಒಲಿಂಪಿಕ್ಸ್‌ನಲ್ಲಿ ಒಟ್ಟು ಎರಡು ವೈಯಕ್ತಿಕ ಪದಕ ಜಯಿಸಿದವರ ಪಟ್ಟಿಯನ್ನೂ ಸೇರಿದರು. ಇದಕ್ಕೂ ಮುನ್ನ ಕೆಲವರು ಈ ಸಾಧನೆ ಮಾಡಿದ್ದಾರೆ.
ಸುಶೀಲ್ ಕುಮಾರ್:
ಕುಸ್ತಿಪಟು ಸುಶೀಲ್ ಕುಮಾರ್ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಆದರೆ ಈ ಪ್ರತಿಭಾವಂತ ಕುಸ್ತಿಪಟುವಿನ ವೃತ್ತಿಜೀವನವು ದುರಂತ ಅಂತ್ಯಕಂಡಿತು. 2021ರಲ್ಲಿ ಜೂನಿಯರ್ ಕುಸ್ತಿಪಟುವಿನ ಕೊಲೆಯ ಆರೋಪದಲ್ಲಿ ಸುಶೀಲ್ ಜೈಲು ಸೇರಿದರು.
ಪಿ.ವಿ. ಸಿಂಧು:
ಭಾರತದ ಅತ್ಯಂತ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಪಿ.ವಿ. ಸಿಂಧು ಕೂಡ ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಪದಕ ಜಯಿಸಿದವರು.
ಹೈದರಾಬಾದಿನ ಸಿಂಧು 2016ರಲ್ಲಿ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು. ಇದೀಗ ಸತತ ಮೂರನೇ ಪದಕ ಜಯದ ನಿರೀಕ್ಷೆಯಲ್ಲಿರುವ ಸಿಂಧು ಪ್ಯಾರಿಸ್‌ನಲ್ಲಿ ಸ್ಪರ್ಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.