ಪ್ಯಾರಿಸ್: ಪ್ರೇಮನಗರಿ ಪ್ಯಾರಿಸ್‌ನಲ್ಲಿ ಭಾನುವಾರ ರಾತ್ರಿ ವಿಶ್ವದ ಮಹಾನ್ ಕ್ರೀಡಾಮೇಳ ಒಲಿಂಪಿಕ್ ಕೂಟಕ್ಕೆ ತೆರೆಬಿತ್ತು.
ಆಧುನಿಕ ಒಲಿಂಪಿಕ್ಸ್‌ನ ಪಿತಾಮಹ ಪಿಯರೆ ಡಿ ಕೊಬರ್ತಿ ಅವರ ತವರೂರಿನಲ್ಲಿ ಕಳೆದ 19 ದಿನಗಳಿಂದ ನಡೆದ ಕೂಟದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಹೊಸ ತಾರೆಗಳು ಉದಯಿಸಿದರು. ಹತ್ತಾರು ಅವಿಸ್ಮರಣೀಯ ಕ್ರೀಡಾಸ್ಫೂರ್ತಿಯ ಕ್ಷಣಗಳು ದಾಖಲಾದವು.
2028ರಲ್ಲಿ ಒಲಿಂಪಿಕ್ ಕೂಟಕ್ಕೆ ಆತಿಥ್ಯ ವಹಿಸಲಿರುವ ‘ಮನರಂಜನೆ ನಗರಿ’ ಲಾಸ್ ಏಂಜಲೀಸ್‌ಗೆ ಬಾವುಟವನ್ನು ಹಸ್ತಾಂತರಿಸಲಾಯಿತು. ಆತಿಥೇಯ ಫ್ರಾನ್ಸ್‌ನ ಈಜು ಚಾಂಪಿಯನ್ ಲಿಯೊ ಮಾರಷಾ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿದರು. ಒಟ್ಟು 126 ಪದಕಗಳನ್ನು ಜಯಿಸಿದ ಅಮೆರಿಕವು ತನ್ನ ದೇಶದ ಲಾಸ್ ಏಂಜಲೀಸ್‌ನಲ್ಲಿ ಮುಂದಿನ ಬಾರಿ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವುದು ವಿಶೇಷ.
ಜುಲೈ 26ರಂದು ಸೆನ್ ನದಿಯಲ್ಲಿ ಸುಮಾರು 4 ತಾಸು ನಡೆದಿದ್ದ ಭವ್ಯ ಸಮಾರಂಭದಲ್ಲಿ ಕೂಟ ಉದ್ಘಾಟನೆಯಾಗಿತ್ತು. ಅದರ ನಂತರ 200ಕ್ಕೂ ಹೆಚ್ಚು ದೇಶಗಳ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಪಣಕ್ಕೊಡ್ಡಿದ್ದರು. ದೊಡ್ಡ, ಸಣ್ಣ ರಾಷ್ಟ್ರಗಳ ಎಲ್ಲ ಧರ್ಮ, ವರ್ಣಗಳ ಜನರು ಒಂದೇ ಸೂರಿನಡಿಯಲ್ಲಿ ಆಡಿ, ಓಡಿ, ಜಿಗಿದು, ನಲಿದರು. ಪದಕ ಗೆದ್ದವರು ಸಂಭ್ರಮಿಸಿದರು. ಸೋತವರು ಮುಂದಿನ ಬಾರಿ ಜಯಿಸುವ ಕನಸಿನೊಂದಿಗೆ ಮರಳಿದರು.
ಸಮಾರೋಪ ಸಮಾರಂಭದಲ್ಲಿ ಫ್ರಾನ್ಸ್ ದೇಶದ ಜನಪದ ಕಲೆಗಳ ಪ್ರದರ್ಶನ, ನೃತ್ಯ, ಸಂಗೀತದ ರಸದೌತಣ ನಡೆಯಿತು. ಕ್ರೀಡೆಗಳು ಮತ್ತು ಸಮಾರಂಭಗಳನ್ನು ಕಣ್ತುಂಬಿಕೊಂಡ ಲಕ್ಷಾಂತರ ಕ್ರೀಡಾಭಿಮಾನಿಗಳು ನೆನಪಿನ ಬುತ್ತಿಯೊಂದಿಗೆ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.