ADVERTISEMENT

Paris Olympics |ಬ್ಯಾಡ್ಮಿಂಟನ್‌: ಚಿನ್ನದ ಕನಸಿನ ಬೆನ್ನೇರಿ...

ಜಿ.ಶಿವಕುಮಾರ
Published 24 ಜುಲೈ 2024, 1:02 IST
Last Updated 24 ಜುಲೈ 2024, 1:02 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ದಾವಣಗೆರೆ: ಚೀನಾ, ಜಪಾನ್‌, ಮಲೇಷ್ಯಾದ ಕ್ರೀಡಾಪಟುಗಳೇ ಪಾರುಪತ್ಯ ಹೊಂದಿರುವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ತಾರೆಯರೂ ಮಿನುಗುತ್ತಿದ್ದಾರೆ. ಆಲ್‌ ಇಂಗ್ಲೆಂಡ್‌ ಓಪನ್‌, ವಿಶ್ವ ಚಾಂಪಿಯನ್‌ಷಿಪ್‌ ಹೀಗೆ ಪ‍್ರತಿಷ್ಠಿತ ಟೂರ್ನಿಗಳಲ್ಲೆಲ್ಲಾ ಪದಕ, ಪ್ರಶಸ್ತಿಗಳನ್ನು ಗೆದ್ದು ಛಾಪು ಮೂಡಿಸುತ್ತಿದ್ದಾರೆ. ಒಲಿಂಪಿಕ್ಸ್‌ ಮಹಾ ಕೂಟದಲ್ಲೂ ಪದಕಕ್ಕೆ ಮುತ್ತಿಕ್ಕಿ ಹೊಸ ಭಾಷ್ಯ ಬರೆದಿದ್ದಾರೆ. 

ಇಷ್ಟಾದರೂ ಒಲಿಂಪಿಕ್ಸ್‌ ಚಿನ್ನದ ಕೊರಗು ಈಗಲೂ ಕಾಡುತ್ತಲಿದೆ. ಬೆಳಕಿನ ನಗರಿ ಪ್ಯಾರಿಸ್‌ನಲ್ಲಾದರೂ ಈ ಕೊರಗು ದೂರವಾಗುವುದೇ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಗರಿಗೆದರಿದೆ.  

ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತದವರೂ ಪದಕ ಗೆಲ್ಲಬಲ್ಲರು ಎಂಬುದನ್ನು ಜಗತ್ತಿಗೇ ಸಾರಿ ಹೇಳಿದವರು ಸೈನಾ ನೆಹ್ವಾಲ್‌. 2012ರ ಲಂಡನ್‌ ಕೂಟದಲ್ಲಿ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿ ಚರಿತ್ರೆ ಸೃಷ್ಟಿಸಿದ್ದರು. 2016ರ ರಿಯೊ ಕೂಟದಲ್ಲಿ ಪಿ.ವಿ.ಸಿಂಧು ಬೆಳ್ಳಿಯ ಬೆಡಗು ಮೂಡಿಸಿ ಭಾರತದ ಬ್ಯಾಡ್ಮಿಂಟನ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದರು. 2021ರ ಟೋಕಿಯೊ ಕೂಟದಲ್ಲಿ ಕಂಚು ಗೆದ್ದು ತಾನು ವಿಶ್ವದ ಸವ್ಯಸಾಚಿ ಆಟಗಾರ್ತಿ ಎಂಬುದನ್ನು ನಿರೂಪಿಸಿದ್ದರು. 

ADVERTISEMENT

ಈ ಬಾರಿ ಸಿಂಧು, ಚಿನ್ನದ ಕನಸಿನ ಬೆನ್ನೇರಿ ಪ್ಯಾರಿಸ್‌ಗೆ ಪಯಣಿಸಿದ್ದಾರೆ. ‘ಹ್ಯಾಟ್ರಿಕ್‌’ ಸಾಧನೆಯ ಸವಾಲೂ ಎದುರಿಗಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಅವರಿಗೆ ಸಾಟಿಯಾಗಬಲ್ಲವರಾರೂ ಗುಂಪು ಹಂತದಲ್ಲಿಲ್ಲ. ಆದರೆ ಕ್ವಾರ್ಟರ್‌ ಫೈನಲ್‌, ಸೆಮಿ ಹಾಗೂ ಫೈನಲ್‌ನಲ್ಲಿ ಅಗ್ನಿಪರೀಕ್ಷೆ ಎದುರಾಗುವ ನಿರೀಕ್ಷೆ ಇದೆ. ಇದನ್ನು ಮೆಟ್ಟಿ ನಿಂತರೆ ಮಿರುಗುವ ಚಿನ್ನಕ್ಕೆ ಮುತ್ತಿಕ್ಕಬಹುದು. 

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ‍್ರಣಯ್‌ ಹಾಗೂ ಲಕ್ಷ್ಯ ಸೇನ್‌, ಭಾರತದ ಸವಾಲು ಮುನ್ನಡೆಸುತ್ತಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 12 ಮತ್ತು 18ನೇ ಸ್ಥಾನಗಳಲ್ಲಿರುವ ಇವರು ವಿಶ್ವ ಶ್ರೇಷ್ಠರ ಸವಾಲು ಮೀರಬಲ್ಲರು. ಒಲಿಂಪಿಕ್ಸ್‌ನಲ್ಲಿ ಎದುರಾಗಬಹುದಾದ ಒತ್ತಡವನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದರ ಮೇಲೆ ಇವರ ಪದಕದ ಭವಿಷ್ಯ ನಿರ್ಧರಿತವಾಗಲಿದೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಬೀಗಿದ್ದ ಈ ಜೋಡಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೂ ಏರಿ ಹೊಸ ಅಧ್ಯಾಯ ಬರೆದಿತ್ತು. 

ಮಹಿಳೆಯರ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ಟೊ ಮೇಲೆ ನಿರೀಕ್ಷೆಯ ಭಾರ ಇದೆ. ರ‍್ಯಾಂಕಿಂಗ್‌ನಲ್ಲಿ ಈ ಜೋಡಿ 19ನೇ ಸ್ಥಾನದಲ್ಲಿದೆ.  ದಿಗ್ಗಜ ಪ್ರಕಾಶ್‌ ಪಡುಕೋಣೆ ಅವರು ಮೆಂಟರ್‌ ಆಗಿ ತಂಡದ ಜೊತೆ ತೆರಳಿದ್ದಾರೆ. ಅವರ ಮಾರ್ಗದರ್ಶನ ಕ್ರೀಡಾಪಟುಗಳಿಗೆ ವರದಾನವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

ಎಚ್‌.ಎಸ್‌.‍ಪ್ರಣಯ್‌ 
ಲಕ್ಷ್ಯ ಸೇನ್‌ 
ಚಿರಾಗ್‌ ಶೆಟ್ಟಿ (ಎಡ) ಮತ್ತು ಸಾತ್ವಿಕ್‌ ಸಾಯಿರಾಜ್‌ 
ಅಶ್ವಿನಿ ಪೊನ್ನಪ್ಪ (ಎಡ) ಮತ್ತು ತನಿಷಾ ಕ್ರಾಸ್ಟೊ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.