ಪ್ಯಾರಿಸ್: ಬ್ರಿಟನ್ ವಿರುದ್ಧ ದೀರ್ಘಕಾಲ ನೆನಪಿಟ್ಟುಕೊಳ್ಳುವಂಥ ವೀರೋಚಿತ ಆಟವಾಡಿದ ಭಾರತ ಹಾಕಿ ತಂಡ ದೇಶದಲ್ಲಿ ಸಂಭ್ರಮದ ಅಲೆಯೆಬ್ಬಿಸಿದೆ. ಭಾರತ ತಂಡ ಈಗ ಮತ್ತೊಂದು ಸಮರಕ್ಕೆ ಬೇಗನೇ ಅಣಿಯಾಗಬೇಕಿದೆ. ಮಂಗಳವಾರ ರಾತ್ರಿ ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಬಲಿಷ್ಠ ಜರ್ಮನಿಯನ್ನು ಎದುರಿಸಲಿದ್ದು ಇವ್ಸ್ ಡಿ ಮ್ಯಾನುವಾ ಕ್ರೀಡಾಂಗಣದಲ್ಲಿ ‘ಬ್ಲಾಕ್‌ಬಸ್ಟರ್ ಸೆಮಿಫೈನಲ್’ ನಿರೀಕ್ಷಿಸಲಾಗಿದೆ.
ಟೋಕಿಯೊ (2021) ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರಾದ ಭಾರತ ಭಾನುವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದ 42 ನಿಮಿಷಗಳ ದೀರ್ಘ ಅವಧಿಯನ್ನು 10 ಮಂದಿಯೊಡನೆ ಆಡಬೇಕಾಯಿತು. ಅಜಾಗರೂಕತೆಯಿಂದ ಸ್ಟಿಕ್ ಎತ್ತಿದ ಡಿಫೆಂಡರ್ ಅಮಿತ್ ರೋಹಿದಾಸ್ ‘ರೆಡ್ ಕಾರ್ಡ್’ ದರ್ಶನದಿಂದ ಹೊರನಡೆಯಬೇಕಾಯಿತು. ಇದರ ನಡುವೆಯೂ ಕೆಚ್ಚೆದೆಯಿಂದ ಆಡಿ ಇಂಗ್ಲೆಂಡ್ ತಂಡಕ್ಕೆ ಅದರ ಲಾಭ ಪಡೆಯಲು ಬಿಡಲಿಲ್ಲ. 1–1 ಡ್ರಾ ನಂತರ, ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಪಡೆಯಿತು. ನಿಗದಿ ಅವಧಿಯಲ್ಲೂ, ನಂತರವೂ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಅಮೋಘ ತಡೆಗಳೊಂದಿಗೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡದ ಶಿಸ್ತುಬದ್ಧ ರಕ್ಷಣೆಯ ಆಟ ತಂಡದ ನೆರವಿಗೆ ಬಂತು. ಪ್ಯಾರಿಸ್‌ಗೆ ಬಂದಿಳಿದ ನಂತರ ತಂಡ ಯೋಜನಾಬದ್ಧ ಆಟವಾಡಿದೆ. ನ್ಯೂಜಿಲೆಂಡ್ ವಿರುದ್ಧ ಗೆಲುವಿಗೆ ಮತ್ತು ಅರ್ಜೆಂಟೀನಾ ವಿರುದ್ಧ ‘ಡ್ರಾ’ಕ್ಕೆ ಕೊನೆಯ ಕ್ಷಣಗಳಲ್ಲಿ ಗಳಿಸಿದ ಗೋಲುಗಳು ನೆರವಾದವು. ಭಾರತ ಹೆಚ್ಚು ಗುರಿ ಮತ್ತು ಛಲದಿಂದ ಆಡಿದೆ. ಗ್ರೇಟ್ ಬ್ರಿಟನ್ ವಿರುದ್ಧವೂ ಇಂಥ ಛಲದ ಆಟವೇ ಎದ್ದುಕಂಡಿತ್ತು. ಈಗ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧವೂ ಇಂಥ ಆಟದ ಅಗತ್ಯವಿದೆ. ಜರ್ಮನಿ ಒಲಿಂಪಿಕ್ಸ್‌ನಲ್ಲಿ ಐದನೇ ಬಾರಿ ಚಿನ್ನದ ಮೇಲೆ ಕಣ್ಣಿಟ್ಟಿದೆ.
ಭಾರತಕ್ಕೆ ಇರುವ ದೊಡ್ಡಚಿಂತೆಯೆಂದರೆ ಅಮಿತ್ ರೋಹಿದಾಸ್ ಅವರ ಅಮಾನತು. ಹೀಗಾಗಿ ಕೋಚ್ ಕ್ರೇಗ್ ಫುಲ್ಟನ್ ಅವರು ಮಿಡ್‌ಫೀಲ್ಡ್‌ನ ಒಬ್ಬ ಆಟಗಾರರನ್ನು ಈ ಸ್ಥಾನ ತುಂಬಲು ಬಳಸಬೇಕಾಗಿದೆ. ಮಾಜಿ ನಾಯಕ ಹಾಗೂ ಅನುಭವಿ ಮಿಡ್‌ಫೀಲ್ಡರ್ ಮನ್‌ಪ್ರೀತ್ ಆ ಸ್ಥಾನದಲ್ಲಿ ಆಡುವ ಸಾಧ್ಯತೆ ಬಹಳ. ಬ್ರಿಟನ್ ವಿರುದ್ಧವೂ ಅವರು ಹೆಚ್ಚಿನ ಅವಧಿಗೆ ಆ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದರು. ಹಿರಿಯ ಆಟಗಾರನಿಗೆ ಇದು ಕಷ್ಟವೇನೂ ಆಗಲಾರದು.
ಜರ್ಮನಿಗೆ ಭಾರತ ಬಳಸುವ ತಂತ್ರದ ಅರಿವು ಇದ್ದೇ ಇದೆ. ಅದನ್ನು ನಿಭಾಯಿಸಲು ಅವರಲ್ಲಿ ಗುಣಮಟ್ಟದ ಪ್ರತಿಭಾನ್ವಿತ ಆಟಗಾರರಿದ್ದಾರೆ. ಆದರೆ ಲಂಡನ್ ಒಲಿಂಪಿಕ್ಸ್ ನಂತರ ಆ ತಂಡ ಒಲಿಂಪಿಕ್ಸ್ ಪ್ರಶಸ್ತಿ ಗೆದ್ದಿಲ್ಲ. ಆದರೆ ತಂಡ ಈಗಲೂ ಪ್ರಬಲವಾಗಿಯೇ ಇದೆ. ಕಳೆದ ವರ್ಷ ಭುವನೇಶ್ವರ–ರೂರ್ಕೆಲಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಆ ತಂಡ ಚಾಂಪಿಯನ್ ಆಗಿತ್ತು. ಈಗ ಒಲಿಂಪಿಕ್ಸ್ ಪ್ರಶಸ್ತಿಯನ್ನೂ ಸೇರಿಸಲು ತಂಡ ತುದಿಗಾಲಲ್ಲಿ ನಿಂತಿದೆ.
ಜರ್ಮನಿ ‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಸ್ಪೇನ್‌ಗೆ 0–2 ರಿಂದ ಸೋತಿದ್ದರೂ, ಉಳಿದಂತೆ ಪ್ರಬಲ ನೆದರ್ಲೆಂಡ್ಸ್ ವಿರುದ್ಧ ಲೀಗ್‌ನಲ್ಲಿ, 2016ರ ಕ್ರೀಡೆಗಳ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಜಯಗಳಿಸಿದೆ.
ಭಾರತಕ್ಕೆ ಈಗ ಏರಲು ಪರ್ವತವೇ ಇದೆ. ಆದರೆ ತಂಡದ ವಿಶ್ವಾಸ ಮತ್ತು ಉತ್ಸಾಹ ನೋಡಿದರೆ, ಆಟಗಾರರು ಅದಕ್ಕೆ ಸಜ್ಜಾದಂತಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.