ಪ್ಯಾರಿಸ್: ಅರ್ಚನಾ ಕಾಮತ್ ಕೊಂಚ ಪ್ರತಿರೋಧ ತೋರಿದರೂ, ಭಾರತ ಮಹಿಳಾ ತಂಡವು ಒಲಿಂಪಿಕ್ಸ್ ಟೇಬಲ್ ಟೆನಿಸ್ ತಂಡ ವಿಭಾಗದಲ್ಲಿ ತಾಂತ್ರಿಕವಾಗಿ ಬಲಿಷ್ಠವಾಗಿರುವ ಜರ್ಮನಿ ಎದುರು ಬುಧವಾರ 1–3ರಲ್ಲಿ ಸೋಲನ್ನುಂಡಿತು.
ಆ ಮೂಲಕ ಟೇಬಲ್ ಟೆನಿಸ್ ತಂಡ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿತು. ಪುರುಷರ ತಂಡ ಈ ಮೊದಲೇ ಹೊರಬಿದ್ದಿತ್ತು. ಮಂಗಳವಾರ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಪ್ರಬಲ ಚೀನಾ ಎದುರು 0–3 ರಿಂದ ಸೋಲನುಭವಿಸಿತ್ತು.
ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ ಆರಂಭದ ಡಬಲ್ಸ್‌ನಲ್ಲಿ 5–11, 11–8, 10–12, 6–11 ರಿಂದ ಜರ್ಮನಿಯ ಯುವಾನ್ ವಾನ್– ಷಿಯೊನಾ ಶಾನ್ ಜೋಡಿಯೆದುರು ಸೋತಿತು. ಮೂರನೇ ಗೇಮ್‌ವರೆಗೆ ಭಾರತದ ಸ್ಪರ್ದಿಗಳು ಹೋರಾಟ ನೀಡಿದರು.
ಮೊದಲ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ಆಟಗಾರ್ತಿ ಮಣಿಕಾ ಬಾತ್ರ ಉತ್ತಮ ಲಯದಲ್ಲಿರಲಿಲ್ಲ. ಅವರು ಆ್ಯನೆಟ್ ಕಾಫ್‌ಮನ್ ವಿರುದ್ಧ ಮೊದಲ ಗೇಮ್ ಅನ್ನು 11–8ರಲ್ಲಿ ಪಡೆದರೂ, ಮುಂದಿನ ಮೂರು ಗೇಮ್‌ಗಳಲ್ಲಿ 5–11, 7–11, 5–11ರಲ್ಲಿ ಕಳೆದುಕೊಂಡು ಪಂದ್ಯ ಸೋತರು.
ಈ ಹಂತದಲ್ಲಿ ಅರ್ಚನಾ 19–17, 1–11, 11–5, 11–9 ರಿಂದ ಶಿಯೊನಾ ಶಾನ್ ಅವರನ್ನು ಸೋಲಿಸಿ ತಂಡದ ಹಿನ್ನಡೆಯನ್ನು 1–2ಕ್ಕೆ ಇಳಿಸಿದರು.
ಆದರೆ ಮೂರನೇ ಸಿಂಗಲ್ಸ್‌ನಲ್ಲಿ ಕಾಫ್‌ಮನ್ 11–6, 11–7, 11–7 ರಿಂದ ಶ್ರೀಜಾ ಅವರನ್ನು ಮಣಿಸಿ ಜರ್ಮನಿ ಗೆಲುವನ್ನು ಖಾತರಿಪಡಿಸಿದರು.
ಸೋಮವಾರ ನಡೆದ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡ, ಪ್ರಬಲ ರುಮೇನಿಯಾ ತಂಡವನ್ನು 3–2 ರಿಂದ ಸೋಲಿಸಿ ಎಂಟರ ಘಟ್ಟ ತಲಪಿತ್ತು.
ಮಹಿಳೆಯರ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ 16ರ ಸುತ್ತು ತಲುಪುವ ಮೂಲಕ ಮಣಿಕಾ ಮತ್ತು ಶ್ರೀಜಾ ದಾಖಲೆ ಬರೆದರು. ಆದರೆ ಅವರು ನಂತರದ ಹಂತ ದಾಟಲಾಗಲಿಲ್ಲ. ತಮಗಿಂತ ಉನ್ನತ ರ್‍ಯಾಂಕಿಂಗ್‌ನ ಎದುರಾಳಿಗಳಿಗೆ ಮಣಿದರು.
ಪ್ಯಾರಿಸ್ ಕ್ರೀಡೆಗಳಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಇದೇ ಮೊದಲ ಬಾರಿ ಭಾಗವಹಿಸುವ ಅರ್ಹತೆ ಪಡೆದಿದ್ದವು. ತಂಡ ಸ್ಪರ್ಧೆಗಳನ್ನು 2008ರಲ್ಲಿ (ಬೀಜಿಂಗ್ ಕ್ರೀಡೆಗಳು) ಸೇರ್ಪಡೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.