ಒಲಿಂಪಿಕ್ಸ್ ಅಂಗಳದಲ್ಲಿ ಕರ್ನಾಟಕದ ಕ್ರೀಡಾಪಟುಗಳ ಹೆಜ್ಜೆಗುರುತು ಹೆಮ್ಮೆ ಮೂಡಿಸುತ್ತದೆ. 1920ರ ಒಲಿಂಪಿಕ್ಸ್‌ನಿಂದಲೂ ಭಾರತ ತುಕಡಿಯಲ್ಲಿ ಕನ್ನಡಿಗರು ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ಈತನಕ ಪದಕ ಜಯಿಸಲು ಸಾಧ್ಯವಾಗದಿದ್ದರೂ, ಪದಕ ಗೆದ್ದಿರುವ ಹಾಕಿ ತಂಡದಲ್ಲಿ ರಾಜ್ಯದ ಕ್ರೀಡಾಪಟುಗಳ ಕೊಡುಗೆಯನ್ನು ಗುರುತಿಸಬಹುದಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ ಏಳು ಮಂದಿ ಸೇರಿದಂತೆ 117 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಪದಕಗಳ ನಿರೀಕ್ಷೆಯ ಭಾರ ಅವರ ಮೇಲಿದೆ.
ರೋಹನ್ ಬೋಪಣ್ಣ (44 ವರ್ಷ): ಕೊಡಗಿನ ಬೋಪಣ್ಣ, ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕದ ತುಡಿತದಲ್ಲಿದ್ದಾರೆ. ಶ್ರೀರಾಮ್ ಬಾಲಾಜಿ ಅವರೊಂದಿಗೆ ಟೆನಿಸ್‌ನ ಪುರುಷರ ಡಬಲ್ಸ್‌ನಲ್ಲಿ ಕಣಕ್ಕೆ ಇಳಿಯುವರು. ಲಂಡನ್ ಕೂಟದಲ್ಲಿ ಮಹೇಶ್ ಭೂಪತಿ ಜೊತೆಗೂಡಿ ಸ್ಪರ್ಧಿಸಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದರು.
ಅಶ್ವಿನಿ ಪೊನ್ನಪ್ಪ (34 ವರ್ಷ): ಕೊಡಗಿನ ಅಶ್ವಿನಿ, ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಶ್ವಿನಿ ಈ ಹಿಂದೆ ಜ್ವಾಲಾ ಗುಟ್ಟಾ ಅವರೊಂದಿಗೆ ಲಂಡನ್ ಮತ್ತು ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಈ ಬಾರಿ ಅವರಿಗೆ ತನಿಶಾ ಕಾಸ್ಟೊ ಜೊತೆಗಾರ್ತಿಯಾಗಿದ್ದಾರೆ.
ಅದಿತಿ ಅಶೋಕ್ (26 ವರ್ಷ): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಡಿಮೆ ಅಂತರದಲ್ಲಿ ಕಂಚು ತಪ್ಪಿಸಿಕೊಂಡಿದ್ದ ಬೆಂಗಳೂರಿನ ಅದಿತಿ, ಈ ಬಾರಿ ಪದಕದ ಭರವಸೆ ಮೂಡಿಸಿದ ಗಾಲ್ಫ್ ಆಟಗಾರ್ತಿ. ಅವರು ತಮ್ಮ 18ನೇ ವಯಸ್ಸಿನಲ್ಲೇ ರಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದರು.
ಎಂ.ಆರ್. ಪೂವಮ್ಮ (34 ವರ್ಷ): ಡೋಪಿಂಗ್ ಆರೋಪದಿಂದ ಮುಕ್ತರಾದ ನಂತರ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಕಣಕ್ಕೆ ಇಳಿಯುತ್ತಿರುವ ಮಂಗಳೂರಿನ ಪೂವಮ್ಮ, ಮಹಿಳೆಯರ 4x400 ಮೀಟರ್ ರಿಲೆ ತಂಡದಲ್ಲಿದ್ದಾರೆ. ಅವರು ಬೀಜಿಂಗ್ ಒಲಿಂಪಿಕ್ಸ್ ಮತ್ತು ರಿಯೊ ಕೂಟದಲ್ಲೂ ಸ್ಪರ್ಧಿಸಿದ್ದರು.
ಶ್ರೀಹರಿ ನಟರಾಜ್ (23 ವರ್ಷ): ಟೋಕಿಯೊ ಒಲಿಂಪಿಕ್ಸ್‌ನಲ್ಲಿ 27ನೇ ಸ್ಥಾನ ಪಡೆದಿದ್ದ ಬೆಂಗಳೂರಿನ ಶ್ರೀಹರಿ 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಸ್ಪರ್ಧಿಸುವರು. 2023ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದಾಖಲೆಯ 10 ಪದಕಗಳನ್ನು ಗೆದ್ದಿದ್ದಾರೆ.
ಧೀನಿಧಿ ದೇಸಿಂಗು (14 ವರ್ಷ): ಬೆಂಗಳೂರಿನ ಧೀನಿಧಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸುವರು. ಭಾರತ ತುಕಡಿಯ ಅತಿ ಕಿರಿಯ ವಯಸ್ಸಿನ ಕ್ರೀಡಾಪಟು. 9ನೇ ತರಗತಿ ಓದುತ್ತಿರುವ ಧೀನಿಧಿ, ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದರು.
ಅರ್ಚನಾ ಕಾಮತ್ (24 ವರ್ಷ): ಬೆಂಗಳೂರಿನ ಅರ್ಚನಾ, ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಟೇಬಲ್ ಟೆನಿಸ್ ತಂಡದ ಭಾಗವಾಗಿದ್ದಾರೆ. 2023ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಸಿಂಗಲ್ಸ್ ಚಿನ್ನ ಗೆದ್ದಿರುವ ಅವರು ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.