ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ನಿರೀಕ್ಷೆಯಾಗಿರುವ 22 ವರ್ಷದ ಶೂಟರ್ ಮನು ಭಾಕರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಶೂಟಿಂಗ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಪಿಸ್ತೂಲ್ ದೋಷದಿಂದಾಗಿ ಫೈನಲ್‌ಗೆ ಪ್ರವೇಶಿಸಲು ವಿಫಲರಾಗಿದ್ದ ಮನು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು (ಶನಿವಾರ) ನಡೆದ ಅರ್ಹತಾ ಸುತ್ತಿನಲ್ಲಿ 580 ಅಂಕ ಪಡೆದ ಮನು, ಮೂರನೇಯವರಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
ಟೋಕಿಯೊದಲ್ಲಿ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾಗ ಅವರಿಗೆ ಪಿಸ್ತೂಲ್ ಕೈಕೊಟ್ಟು, ಕಣ್ಣೀರು ಹಾಕಿದ್ದರು. ತಮ್ಮ ಅಮೋಘ ಸಾಧನೆಗಳ ಪಟ್ಟಿಯಲ್ಲಿ ಒಲಿಂಪಿಕ್ ಪದಕ ಸೇರಿಸುವ ಅವಕಾಶ ಅವರಿಗೆ ಈಗ ಒದಗಿದೆ.
ಹದಿಹರೆಯದಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಮನು, ಈಗ ಟೋಕಿಯೊ ಒಲಿಂಪಿಕ್ಸ್ ಕಹಿನೆನಪನ್ನು ಅಳಿಸಿಹಾಕಿ, ಕ್ವಾಲಿಫಿಕೇಷನ್ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದರು.
ಸರಣಿ 1 ನಂತರ ಅವರು 97 ಪಾಯಿಂಟ್‌ಳೊಡನೆ ಉತ್ತಮ ಆರಂಭ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದರು. ಎರಡನೇ ಸರಣಿ ನಂತರ ಹರಿಯಾಣದ ಶೂಟರ್ 97 ಸ್ಕೋರ್‌ನೊಡನೆ ಅದೇ ಸ್ಥಾನ ಉಳಿಸಿಕೊಂಡರು. ಮೂರನೇ ಸಿರೀಸ್ ನಂತರ 98 ಪಾಯಿಂಟ್ಸ್ ಗಳಿಸಿ ಅಗ್ರ ಎರಡರಲ್ಲಿ ಸ್ಥಾನ ಪಡೆದರು. ಐದನೇ ಸರಣಿಯಲ್ಲಿ (8 ಪಾಯಿಂಟ್) ಅವರಿಂದ ಗುರಿಗಳು ತಪ್ಪಿದವು. ಆದರೆ ಅದರಿಂದ ಸಮಸ್ಯೆಯಾಗಲಿಲ್ಲ.
ಹಂಗೇರಿಯ ವೆರೊನಿಕಾ ಮೇಜರ್ 582 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್‌ಗೆ ಲಗ್ಗೆ ಇಟ್ಟರು.
ಭಾರತೀಯ ಕಾಲಮಾನ ಭಾನುವಾರ ಸಂಜೆ 3.30ಕ್ಕೆ ಫೈನಲ್ ನಡೆಯಲಿದೆ. ಈಗ ನೀಡಿರುವುದಕ್ಕೆ ಸಮಾನವಾದ ಪ್ರದರ್ಶನ ನೀಡುವಲ್ಲಿ ಸಾಧ್ಯವಾದರೆ ಮನು ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಲಿದೆ.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ರಿದಮ್ ಸಾಂಗ್ವಾನ್, ಅಂತಿಮ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾದರು. 573 ಅಂಕಗಳೊಂದಿಗೆ 15ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.