ಪ್ಯಾರಿಸ್: ಪ್ಯಾಂಟ್ ಜೇಬಿನಲ್ಲಿ ಕೈ, ಯಾವುದೇ ಕ್ರೀಡಾ ಸಾಮಗ್ರಿಗಳಿಲ್ಲದೆ ಸಾಮಾನ್ಯ ಕನ್ನಡಕ, ಸರಳ ಉಡುಪು ಹಾಗೂ ನಿರಾಳ ಭಾವ... ಬಲಗೈಯಲ್ಲಿ ಪಿಸ್ತೂಲ್ ಹಿಡಿದು ಗುರಿ ಇಟ್ಟರೆ ಅಷ್ಟೂ ಗುರಿಗೆ. ಟರ್ಕಿಯ ಶೂಟರ್ ಯೂಸುಫ್ ಡಿಕೆಕ್ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನ 10 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಕ್ರೀಡಾಲೋಕ ಅಷ್ಟೇ ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲೂ ಭಾರೀ ಗಮನ ಸೆಳೆದಿದ್ದಾರೆ.
ಯೂಸುಫ್ ಅವರ ಈ ಶೂಟಿಂಗ್ ಶೈಲಿ ಮಾತ್ರ ಚರ್ಚಿತ ವಿಷಯವಾಗದೆ, ಒಲಿಂಪಿಕ್ಸ್ ಇತಿಹಾಸದಲ್ಲೇ ಟರ್ಕಿಗೆ ಶೂಟಿಂಗ್‌ನಲ್ಲಿ ಮೊದಲ ಪದಕ ತಂದು ಕೊಡುವ ಮೂಲಕವೂ ಸುದ್ದಿಯಾಗಿದ್ದಾರೆ.
ಟರ್ಕಿಯ ತಸೊಲುಕ್ ಗ್ರಾಮದಲ್ಲಿ 1973ರಲ್ಲಿ ಜನಿಸಿದ ಯೂಸುಫ್, ಸೇನಾ ಶಾಲೆಯ ವಿದ್ಯಾರ್ಥಿ. ಶಿಕ್ಷಣದ ನಂತರ ಸಾರ್ಜೆಂಟ್ ಆಗಿ ನೇಮಕೊಂಡ ಅವರು, ನಂತರ ಇಸ್ತಾನ್‌ಬುಲ್‌ನಲ್ಲಿರುವ ಕ್ರೀಡಾ ಕ್ಲಬ್ ಸೇರಿದರು.
ತನ್ನ ಪತ್ನಿಯೊಂದಿಗಿನ ಜಗಳವೇ ಶೂಟಿಂಗ್ ಆಯ್ದುಕೊಳ್ಳಲು ಕಾರಣ ಎಂದಿರುವ ಅಂಶವೇ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ತನ್ನ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ತನ್ನ ಪತ್ನಿಯ ಆಲೋಚನೆಗಳು ಸುಳ್ಳು ಎಂದು ಸಾಬೀತುಪಡಿಸುವುದೇ ಯೂಸುಫ್ ಅವರ ಗುರಿಯಾಗಿತ್ತಂತೆ.
‘ನಾನು ಇಲ್ಲಿ ಹೀಗೆ ನಿಲ್ಲುತ್ತೇನೆ ಎಂದು ಎಂದೂ ಎನಿಸಿರಲಿಲ್ಲ. ವಾರಾಂತ್ಯದಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವುದಷ್ಟೇ ನನ್ನ ಗುರಿಯಾಗಿತ್ತು’ ಎಂದು 52 ವರ್ಷದ ಯೂಸುಫ್ ಹೇಳಿದ್ದಾರೆ.
‘ಇಸ್ತಾನ್‌ಬುಲ್‌ನಲ್ಲಿರುವ ಒಂದು ಪುಟ್ಟ ಗ್ಯಾರೇಜ್‌ನಲ್ಲಿ ಯೂಸುಫ್ ಮೆಕ್ಯಾನಿಕ್ ಆಗಿದ್ದಾರೆ. ಶೂಟಿಂಗ್ ಅಭ್ಯಾಸವೂ ಅವರದ್ದು ಅಸಾಂಪ್ರದಾಯಿಕವಾದ ಪದ್ಧತಿಯಾಗಿತ್ತು. ಜೀನ್ಸ್ ಮತ್ತು ಟಿ–ಶರ್ಟ್ ತೊಟ್ಟು, ಶೂಟಿಂಗ್‌ಗೆ ಅಗತ್ಯವಿರುವ ಯಾವುದೇ ಗೇರ್‌ಗಳನ್ನು ತೊಡದೆ, ಸರಳವಾಗಿ ಮತ್ತು ನೇರವಾಗಿ ಪಿಸ್ತೂಲ್ ಹಿಡಿದು ಗುರಿ ಇಡುವುದು ಇವರ ಅಭ್ಯಾಸ. ಪಿಸ್ತೂಲ್‌ನಿಂದ ಹೊರಟ ಗುಂಡುಗಳು ನೇರವಾಗಿ ಗುರಿ ನೆಟ್ಟ ನಂತರ, ಇಲ್ಲಿ ಧೂಮಪಾನಕ್ಕೆ ಸ್ಥಳ ಎಲ್ಲಿದೆ ಎಂದು ಕೇಳಿ, ಅಲ್ಲಿಗೆ ತಮ್ಮ ಪಾಡಿಗೆ ತಾವು ಹೋಗಿಬಿಡುವುದು ಅವರ ಶೈಲಿ’ ಎಂದು ಯೂಸುಫ್ ಅವರನ್ನು ಹತ್ತಿರದಿಂದ ನೋಡಿದವರು ವಿವರಿಸಿದ್ದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.