ಪ್ಯಾರಿಸ್: ಭಾರತದ ಪ್ರವೀಣ್ ಕುಮಾರ್ ಅವರು ಪ್ಯಾರಾಲಿಂಪಿಕ್ಸ್ ಪುರುಷರ ಟಿ64 ಹೈಜಂಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ದಾಖಲೆಯೊಡನೆ ಚಿನ್ನ ಗೆದ್ದರು. ಮೂರು ವರ್ಷಗಳ ಹಿಂದೆ ಟೋಕಿಯೊ ಕೂಟದಲ್ಲಿ ಬೆಳ್ಳಿ ಗೆದ್ದ ಅವರು ಶುಕ್ರವಾರ ಇಲ್ಲಿ ಸುಧಾರಿತ ಪ್ರದರ್ಶನ ನೀಡಿ ಗಮನ ಸೆಳೆದರು.
21 ವರ್ಷ ವಯಸ್ಸಿನ ಪ್ರವೀಣ್, ಆರು ಮಂದಿಯಿದ್ದ ಫೈನಲ್ ಕಣದಲ್ಲಿ 2.08 ಮೀಟರ್ ಜಿಗಿದು ಅಗ್ರಸ್ಥಾನಕ್ಕೇರಿದರು. ನೊಯಿಡಾದ ಪ್ರವೀಣ್ ಅವರಿಗೆ ಹುಟ್ಟುವಾಗಲೇ ಅವರಿಗೆ ಕಾಲುಗಳು ಗಿಡ್ಡವಾಗಿದ್ದವು.
ಅಮೆರಿಕದ ಡೆರೆಕ್ ಲೊಸಿಡೆಂಟ್ ಅವರು 2.06 ಮೀಟರ್ ಜಿಗಿದು ಬೆಳ್ಳಿ ಪದಕ ಕೊರಳಿಗೆ ಹಾಕಿಕೊಂಡರೆ, ಉಜ್ಬೇಕಿಸ್ತಾನದ ಟೆಮುರ್ಬೆಕ್ ಗಿಯಾಝೋವ್ ಅವರು 2.03 ಮೀ.ನೊಡನೆ ತಮ್ಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
1.89 ಮೀ.ನೊಡನೆ ಪ್ರವೀಣ್ ಅವರು ಜಿಗಿತ ಆರಂಭಿಸಿದರಲ್ಲದೇ ಮೊದಲ ಸುತ್ತಿನಲ್ಲೇ ಮುನ್ನಡೆ ಸಾಧಿಸಿದರು. ಏಳು ಜಿಗಿತಗಳಲ್ಲೂ ಮುನ್ನಡೆ ಕಾಪಾಡಿಕೊಂಡರು.
ಹೈಜಂಪ್ ಬಾರ್ ಅನ್ನು 2.10 ಮೀ.ಗಳಿಗೆ ಎತ್ತರಿಸಲಾಯಿತು. ಆಗ ಕುಮಾರ್ ಮತ್ತು ಲೊಸಿಡೆಂಟ್ ನಡುವೆ ಅಗ್ರಸ್ಥಾನಕ್ಕೆ ಪೈಪೋಟಿಯಿತ್ತು. ಆದರೆ ಯಾರೂ ಅಷ್ಟು ಎತ್ತರ ಜಿಗಿಯಲಾಗಲಿಲ್ಲ.
2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಪ್ರವೀಣ್ ಅವರಿಗೂ ಇದು ಜೀವನಶ್ರೇಷ್ಠ ಸಾಧನೆ.
ಮೊಣಕಾಲಿಗಿಂತ ಕೆಳಗಿನ ಭಾಗದಲ್ಲಿ ಒಂದು ಅಥವಾ ಎರಡೂ ಕಾಲುಗಳ ಚಲನೆ ಅಥವಾ ಬೇರೆ ಸಮಸ್ಯೆಯಿರುವ ಅಥ್ಲೀಟುಗಳು ಟಿ44 (ಟ್ರ್ಯಾಕ್44) ವಿಭಾಗದಲ್ಲಿ ಸ್ಪರ್ಧಿಸಲು ಅರ್ಹರು. ಪ್ರವೀಣ್ ಅವರಿಗೆ ಹುಟ್ಟಿನಿಂದಲೇ ಈ ಸಮಸ್ಯೆಯಿತ್ತು. ಪೃಷ್ಠದಿಂದ ಎಡಗಾಲಿಗೆ ಸಂಪರ್ಕಿಸುವ ಮೂಳೆಯ ತೊಂದರೆ ಅವರಿಗಿದೆ.
ಆರಂಭದಲ್ಲಿ ಅವರನ್ನು ಕೀಳರಿಮೆ, ಅಭದ್ರತೆ ಕಾಡುತಿತ್ತು. ಆದರೆ ಅವರು ಮುಕ್ತ ವಿಭಾಗದ ಅಥ್ಲೀಟುಗಳ ಜೊತೆ ಹೈಜಂಪ್‌ನಲ್ಲಿ ಭಾಗವಹಿಸಲು ತೊಡಗಿದ ನಂತರ ಅವರ ಬದುಕಿನ ಚಿತ್ರಣ ಬದಲಾಯಿತು.
ಅಂಗವಿಕಲ ಅಥ್ಲೀಟುಗಳಿಗೆ ಇರುವ ಹೇರಳ ಅವಕಾಶಗಳಿಗೆ ಅವರು ತೆರೆದುಕೊಂಡರು. ಪ್ಯಾರಿಸ್ ಕ್ರೀಡೆಗಳಲ್ಲಿ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ನಂತರ ಹೈಜಂಪ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಹೈಜಂಪರ್ ಎಂಬ ಗೌರವ ಪ್ರವೀಣ್ ಅವರದಾಯಿತು.
ಟೋಕಿಯೊದಲ್ಲೂ ಬೆಳ್ಳಿ...
ಭಾರತದ ಪ್ರವೀಣ್ ಕುಮಾರ್, ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಬೆಳ್ಳಿ ಪದಕ ಗೆದ್ದಿದ್ದರು. ಆ ಮೂಲಕ ಸತತ ಎರಡನೇ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಭಾರತಕ್ಕೆ 26ನೇ ಪದಕ...
ಇದರೊಂದಿಗೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಪ್ರದರ್ಶನ ನೀಡಿರುವ ಭಾರತೀಯ ಸ್ಪರ್ಧಿಗಳು ಈವರೆಗೆ ಒಟ್ಟು 26 ಪದಕಗಳನ್ನು ಗೆದ್ದಿದ್ದಾರೆ.
ಇದರಲ್ಲಿ ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು 11 ಕಂಚಿನ ಪದಕಗಳನ್ನು ಒಳಗೊಂಡಿದ್ದು, 14ನೇ ಸ್ಥಾನ ಕಾಯ್ದುಕೊಂಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಐದು ಚಿನ್ನ ಸೇರಿದಂತೆ ಭಾರತ ಒಟ್ಟು 19 ಪದಕಗಳನ್ನು ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.