ADVERTISEMENT

PV Web Exclusive| ಪಾರ್ಥಿವ್‌ ಪಟೇಲ್‌ ಎಂಬ ‘ಅತಿಥಿ’ ವಿಕೆಟ್‌ ಕೀಪರ್‌

ಪ್ರಮೋದ
Published 11 ಡಿಸೆಂಬರ್ 2020, 12:25 IST
Last Updated 11 ಡಿಸೆಂಬರ್ 2020, 12:25 IST
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪೋಷಾಕಿನಲ್ಲಿ ಪಾರ್ಥಿವ್ ಪಟೇಲ್
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪೋಷಾಕಿನಲ್ಲಿ ಪಾರ್ಥಿವ್ ಪಟೇಲ್   

ಅದು 2002ರ ಆಗಸ್ಟ್‌ ತಿಂಗಳು. ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯಕ್ಕೆ 17 ವರ್ಷದ ಆಟಗಾರ ಗ್ಲೌಸ್‌ಗಳನ್ನು ತೊಟ್ಟು ವಿಕೆಟ್‌ಗಳ ಹಿಂದೆ ನಿಂತಾಗ ಎಲ್ಲರಲ್ಲೂ ಅಚ್ಚರಿ. ಈ ವಯಸ್ಸಿಗೆ ಪ್ರೌಢಶಾಲೆಯ ಶಿಕ್ಷಣ ಮುಗಿಸುವ ಮಕ್ಕಳು ಭವಿಷ್ಯ ಅರಸುತ್ತಾ ನೂರಾರು ಕನಸುಗಳನ್ನು ಕಾಣುತ್ತಾರೆ. ಆದರೆ, ಸಣ್ಣ ವಯಸ್ಸಿಗೆ ಆ ಹುಡುಗ ಸೌರವ್‌ ಗಂಗೂಲಿ, ಅಬ್ಬರದ ಬ್ಯಾಟಿಂಗ್‌ಗೆ ಹೆಸರಾದ ವೀರೇಂದ್ರ ಸೆಹ್ವಾಗ್‌, ಸಚಿನ್‌ ತೆಂಡೂಲ್ಕರ್‌, ಕಲಾತ್ಮಕ ಟೆಸ್ಟ್‌ ಆಟಗಾರರಾದ ರಾಹುಲ್‌ ದ್ರಾವಿಡ್‌, ವಿ.ವಿ.ಎಸ್‌. ಲಕ್ಷ್ಮಣ್, ‘ಜಂಬೊ’ ಖ್ಯಾತಿಯ ಅನಿಲ್‌ ಕುಂಬ್ಳೆ– ಹೀಗೆ ವಿಶ್ವವಿಖ್ಯಾತ ಕ್ರಿಕೆಟಿಗರ ಜೊತೆ ಡ್ರೆಸ್ಸಿಂಗ್‌ ಕೊಠಡಿ ಹಂಚಿಕೊಂಡು ಸಂಭ್ರಮಿಸುತ್ತಿದ್ದ.

ಅಂದ ಹಾಗೆ ಆ ಹುಡುಗನ ಹೆಸರು ಪಾರ್ಥಿವ್‌ ಪಟೇಲ್‌. ಎಡಗೈ ಬ್ಯಾಟಿಂಗ್‌ ಮತ್ತು ವಿಕೆಟ್‌ ಕೀಪರ್‌ ಆಗಿ ಹೆಸರು ಮಾಡಿದ್ದ ಪಾರ್ಥಿವ್‌ ಇತ್ತೀಚೆಗೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಸಣ್ಣ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಪಡೆದರೂ, ತಮ್ಮ ಕ್ರಿಕೆಟ್‌ ಬದುಕಿನ ಬಹಳಷ್ಟು ವರ್ಷಗಳ ಕಾಲ ಭಾರತ ತಂಡದಲ್ಲಿ ‘ಅತಿಥಿ’ ವಿಕೆಟ್ ಕೀಪರ್‌ ಆಗಿ ಕಾಲ ಕಳೆಯಬೇಕಾಯಿತು.

ಪಾರ್ಥಿವ್‌ ಮೊದಲ ಬಾರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದು ಕೂಡ ಅನಿರೀಕ್ಷಿತವಾಗಿ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ವಿಕೆಟ್‌ ಕೀಪರ್ ಆಗಿದ್ದ ಅಜಯ್‌ ರಾತ್ರಾ ಗಾಯಗೊಂಡಿದ್ದರು. ಅವರ ಬದಲಾಗಿ ಪಾರ್ಥಿವ್‌ 17 ವರ್ಷ 152 ದಿನಗಳಿಗೆ ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್‌ ಆಡುವ ಅವಕಾಶ ಪಡೆದರು. ಈ ಮೂಲಕ ಟೆಸ್ಟ್‌ ಆಡಿದ ಸಣ್ಣ ವಯಸ್ಸಿನ ವಿಕೆಟ್‌ ಕೀಪರ್‌ ಎನ್ನುವ ಕೀರ್ತಿಗೆ ಭಾಜನರಾದರು. ಇದಕ್ಕೂ ಮೊದಲು ಪಾಕಿಸ್ತಾನದ ವಿಕೆಟ್‌ ಕೀಪರ್‌ ಹನೀಫ್‌ ಮೊಹಮ್ಮದ್‌ (17 ವರ್ಷ 300 ದಿನಗಳು) ಈ ಸಾಧನೆ ಮಾಡಿದ್ದರು.

ADVERTISEMENT

ಸಣ್ಣ ವಯಸ್ಸಿನಲ್ಲಿ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದ ಪಾರ್ಥಿವ್‌ಗೆ ರಾಷ್ಟ್ರೀಯ ತಂಡದಲ್ಲಿ ಹೆಚ್ಚು ವರ್ಷಗಳ ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಮಹೇಂದ್ರ ಸಿಂಗ್ ಧೋನಿ 2004ರಲ್ಲಿ ಅಂತರರಾಷ್ಟ್ರೀಯ ಏಕದಿನ ಮತ್ತು 2005ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕವಂತೂ ಭಾರತ ತಂಡದಲ್ಲಿ ವಿಕೆಟ್‌ ಕೀಪರ್‌ ಹುದ್ದೆ ಖಾಲಿಯೇ ಆಗಲಿಲ್ಲ.

ಪಾರ್ಥಿವ್‌ ಪದಾರ್ಪಣೆ ಬಳಿಕ ಭಾರತ ತಂಡದಲ್ಲಿ ಆಡಿದ ವಿಕೆಟ್‌ ಕೀಪರ್‌ಗಳಾದ ದಿನೇಶ್‌ ಕಾರ್ತಿಕ್‌, ವೃದ್ಧಿಮಾನ್‌ ಸಹಾ, ನಮನ್‌ ಓಜಾ ಕೂಡ ‘ಅತಿಥಿ’ಗಳಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದರು. ಹೀಗಾಗಿ ಅಹಮದಾಬಾದ್‌ನ ಪಾರ್ಥಿವ್‌ಗೆ 18 ವರ್ಷಗಳ ಅವಧಿಯಲ್ಲಿ 25 ಟೆಸ್ಟ್‌, 38 ಏಕದಿನ ಮತ್ತು ಎರಡು ಟಿ–20 ಅಂತರರಾಷ್ಟ್ರೀಯ ಪಂದ್ಯಗಳಲ್ಲಷ್ಟೇ ಅವಕಾಶ ಲಭಿಸಿತು. ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಒಂಬತ್ತು ವರ್ಷಗಳ ಬಳಿಕ ಟಿ–20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಅವಕಾಶ ಪಡೆದರು. ಹೀಗಾಗಿ ಪ್ರತಿಭೆಯಿದ್ದರೂ ಅವಕಾಶಕ್ಕಾಗಿ ಕಾಯುವುದೇ ಅವರ ಕೆಲಸವಾಯಿತು. 2018–19ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಪಾರ್ಥಿವ್ ತಂಡದಲ್ಲಿದ್ದರು. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯುದ್ದಕ್ಕೂ ’ಬೆಂಚ್‌’ ಕಾಯುವುದೇ ಅವರಿಗೆ ಕಾಯಕವಾಯಿತು.

ಪದಾರ್ಪಣೆ ಮಾಡಿದ 2002ರಿಂದ 2004ರ ವರೆಗೆ 19 ಟೆಸ್ಟ್‌ ಪಂದ್ಯಗಳಲ್ಲಿ ವಿಕೆಟ್‌ ಕೀಪರ್‌ ಜವಾಬ್ದಾರಿ ನಿಭಾಯಿಸಿದ ಪಾರ್ಥಿವ್‌ಗೆ ಬಳಿಕ ಅವಕಾಶಗಳೇ ಸಿಗಲಿಲ್ಲ. 2004ರಲ್ಲಿ ನಾಗಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಆಡಿದ ಬಳಿಕ ಸ್ಥಾನಕ್ಕಾಗಿ ನಾಲ್ಕು ವರ್ಷ ಕಾಯಬೇಕಾಯಿತು. 2008ರಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಗೆ ಅವಕಾಶ ಲಭಿಸಿತು. ಇದಾದ ಬಳಿಕ ಮತ್ತೆ ಎಂಟು ವರ್ಷ ಅಜ್ಞಾತವಾಸ. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಮೊಹಾಲಿ ಮತ್ತು ಮುಂಬೈನಲ್ಲಿ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಿದ ಬಳಿಕ ಮತ್ತೆ ಎರಡು ವರ್ಷ ‘ಬೆಂಚ್‌’ ಕಾಯುಬೇಕಾಯಿತು. ಎರಡು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಎರಡು ಟೆಸ್ಟ್‌ ಪಂದ್ಯಗಳೇ ಪಾರ್ಥಿವ್‌ಗೆ ವೃತ್ತಿ ಬದುಕಿನ ಅಂತಿಮ ಸರಣಿಯಾಯಿತು.

ರಾಷ್ಟ್ರೀಯ ತಂಡದಲ್ಲಿ ಅವಕಾಶಗಳು ಇಲ್ಲದಾಗ ಪಾರ್ಥಿವ್‌ ದೇಶಿ ಕ್ರಿಕೆಟ್‌ನಲ್ಲಿ ಮಿಂಚತೊಡಗಿದರು. 2016–17ರ ದೇಶಿ ಋತುವಿನ ರಣಜಿ ಟೂರ್ನಿಯಲ್ಲಿ ಪಾರ್ಥಿವ್‌ ಮುಂದಾಳತ್ವದಲ್ಲಿ ಗುಜರಾತ್‌ ತಂಡ ಹಾಲಿ ಚಾಂಪಿಯನ್‌ ಆಗಿದ್ದ ಮುಂಬೈಯನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ಗುಜರಾತ್‌ ತಂಡಕ್ಕೆ ಚೊಚ್ಚಲ ರಣಜಿ ಚಾಂಪಿಯನ್‌ ಪಟ್ಟ ತಂದುಕೊಟ್ಟ ನಾಯಕ ಎನ್ನುವ ಹೆಗ್ಗಳಿಕೆಯೂ ಪಾರ್ಥಿವ್‌ಗೆ ಲಭಿಸಿತು. ಹೀಗಾಗಿ ಪಾರ್ಥಿವ್ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕು ‘ಅತಿಥಿ’ ವಿಕೆಟ್ ಕೀಪರ್ ಆಗಿಯೇ ಅಂತ್ಯಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.