ನೊಯಿಡಾ: ರೇಡರ್ ಆಯಾನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ದ್ವಿತೀಯಾರ್ಧದಲ್ಲಿ ಅಬ್ಬರಿಸಿದ ಪಟ್ನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ 13 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಪೂರ್ಣ ಐದು ಅಂಕಗಳನ್ನು ಸಂಪಾದಿಸಿತು.
ನೊಯಿಡಾ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡ 40-27 ಅಂಕಗಳಿಂದ ಗೆದ್ದಿತು. ಇದು ಆ ತಂಡಕ್ಕೆ ಟೂರ್ನಿಯಲ್ಲಿ ಐದನೇ ಜಯ. ಅತ್ತ ಗುಜರಾತ್ ಏಳನೇ ಸೋಲಿಗೆ ಗುರಿಯಾಗಿ ತಳದಲ್ಲೇ ಉಳಿಯಿತು.
ಆರಂಭಿಕ ಮುನ್ನಡೆಯ ಜತೆಗೆ ದ್ವಿತೀಯಾರ್ಧದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಪಟ್ನಾ ಪೈರೇಟ್ಸ್ ತಂಡ ಅರ್ಹವಾಗಿ ಜಯಗಳಿಸಿತು. ಎಡ ಬದಿಯ ರೇಡರ್ ಆಯಾನ್ (10 ಅಂಕ), ದೇವಾಂಕ್ (6 ಅಂಕ), ಬಲಬದಿ ರೇಡರ್ ಸಂದೀಪ್ (5 ಅಂಕ) ಪಟನಾ ಪೈರೇಟ್ಸ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಗುಜರಾತ್ ಜೈಂಟ್ಸ್ ಪರ ಪ್ರಮುಖ ಆಟಗಾರರಾದ ಪ್ರತೀಕ್ ದಹಿಯಾ ಮತ್ತು ಗುಮಾನ್ ಸಿಂಗ್ ತಲಾ 5 ಅಂಕಗಳನ್ನಷ್ಟೇ ಗಳಿಸಿದರು. ಇತರ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಪಟ್ನಾ ಪೈರೇಟ್ಸ್, ಟ್ಯಾಕಲ್ ಮತ್ತು ದಾಳಿಯಲ್ಲಿ ಮಿಂಚಿತು. ಗುಜರಾತ್ ಆಟಗಾರರು ಎದುರಾಳಿಯ ರಕ್ಷಣಾವ್ಯೂಹದಲ್ಲಿ ಪದೇ ಪದೆ ಬಂದಿಯಾದರು. 30 ನಿಮಿಷಗಳ ಆಟದ ಬಳಿಕ 21-29ರಲ್ಲಿ ಹಿನ್ನಡೆ ಅನುಭವಿಸಿತು. 31ನೇ ನಿಮಿಷದಲ್ಲಿ ಪ್ರತೀಕ್ ದಹಿಯಾ ಅವರನ್ನು ಟ್ಯಾಕಲ್ ಮಾಡಿದ ಆಯಾನ್, ಪೈರೇಟ್ಸ್ ತಂಡವನ್ನು ಎರಡನೇ ಬಾರಿ ಆಲೌಟ್‌ಗೆ ಗುರಿಪಡಿಸಿದರು. ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳಿರುವಾಗ ಪೈರೇಟ್ಸ್ 12 (36-24) ಅಂಕಗಳ ಅಂತರವನ್ನು ಕಾಯ್ದುಕೊಂಡಿತು. ಹೀಗಾಗಿ ಗುಜರಾತ್‌ಗೆ ಪುಟಿದೇಳುವ ಅವಕಾಶ ದೊರೆಯಲಿಲ್ಲ.
ಮಂಗಳವಾರದ ಪಂದ್ಯ: ಬೆಂಗಳೂರು ಬುಲ್ಸ್– ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8.00); ದಬಾಂಗ್ ಡೆಲ್ಲಿ – ಪುಣೇರಿ ಪಲ್ಟನ್ (ರಾತ್ರಿ 9.00)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.