ADVERTISEMENT

ಪೈರೇಟ್ಸ್‌ಗೆ ಮಣಿದ ದಬಾಂಗ್‌ ದಿಲ್ಲಿ

ದೇವಾಂಕ್‌, ಆಯಾನ್‌ ಸೂಪರ್‌ ಟೆನ್‌ ಸಾಹಸಕ್ಕೆ ಒಲಿದ ಗೆಲುವು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 16:43 IST
Last Updated 31 ಅಕ್ಟೋಬರ್ 2024, 16:43 IST
ದಬಾಂಗ್‌ ಡೆಲ್ಲಿ ತಂಡದ ಆಟಗಾರರು ರೇಡ್‌ ಮಾಡಿದ ಪಟ್ನಾ ಪೈರೇಟ್ಸ್ ತಂಡದ ಆಟಗಾರನನ್ನು ಹಿಡಿದೆಳೆದರು.
ದಬಾಂಗ್‌ ಡೆಲ್ಲಿ ತಂಡದ ಆಟಗಾರರು ರೇಡ್‌ ಮಾಡಿದ ಪಟ್ನಾ ಪೈರೇಟ್ಸ್ ತಂಡದ ಆಟಗಾರನನ್ನು ಹಿಡಿದೆಳೆದರು.   

ಹೈದರಾಬಾದ್‌: ಎರಡು ಬಾರಿ ಆಲೌಟ್‌ ಜತೆಗೆ ಸೂಪರ್‌ ಟ್ಯಾಕಲ್‌ನಲ್ಲಿ ಮಿಂಚಿದ ಪಟ್ನಾ ಪೈರೇಟ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ಪಂದ್ಯದಲ್ಲಿ ದಬಾಂಗ್‌ ದಿಲ್ಲಿ ತಂಡವನ್ನು 14 ಅಂಕಗಳಿಂದ ಪರಾಭವಗೊಳಿಸಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ಸ್‌ ಪಟ್ನಾ 44-30 ಅಂಕಗಳಿಂದ ದಬಾಂಗ್‌ ಡೆಲ್ಲಿ ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಪಟನಾ ಪೈರೇಟ್ಸ್‌ ಹಾಲಿ ಲೀಗ್‌ನಲ್ಲಿ ಎರಡನೇ ಜಯ ದಾಖಲಿಸಿತು.

ಹಿಂದಿನ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ವಿರುದ್ಧ ಕೇವಲ ಎರಡು ಅಂಕಗಳಿಂದ ವೀರೋಚಿತ ಸೋಲನುಭವಿಸಿದ್ದ ಪೈರೇಟ್ಸ್‌ ತಂಡ, ಡೆಲ್ಲಿ ವಿರುದ್ಧ ಅಮೋಘ ಪ್ರದರ್ಶನ ನೀಡಿತು. ಪಂದ್ಯದ ಉಭಯ
ಅವಧಿಗಳಲ್ಲಿ ಪುಟಿದೇಳುವಲ್ಲಿ ವಿಫಲವಾದ ದಬಾಂಗ್‌ ದಿಲ್ಲಿ ಹ್ಯಾಟ್ರಿಕ್‌ ಸೋಲಿಗೆ ಗುರಿಯಾಯಿತು.

ADVERTISEMENT

ಪೈರೇಟ್ಸ್‌ ಪರ ದೇವಾಂಕ್‌ (12 ಅಂಕ), ಆಯಾನ್‌ (12 ಅಂಕ) ಸೂಪರ್‌ 10 ಸಾಹಸ ಮಾಡಿದರೆ, ದಬಾಂಗ್‌ ದಿಲ್ಲಿ ಪರ ಅಶು ಮಲಿಕ್‌ (10 ಅಂಕ) ಮತ್ತು ವಿನಯ್‌ (10 ಅಂಕ) ವೈಯಕ್ತಿಕ ಗರಿಷ್ಠ ಅಂಕ ಗಳಿಸಿದರು. 20 ರಿಂದ 30 ನಿಮಿಷಗಳ ಅವಧಿಯಲ್ಲಿ ಸಾಂಘಿಕ ಹೋರಾಟ ನೀಡಿದ ಡೆಲ್ಲಿ ಆಟಗಾರರು ಪಟ್ನಾ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದರಲ್ಲದೆ, ಹಿನ್ನಡೆಯನ್ನು 24-31ಕ್ಕೆ ತಗ್ಗಿಸಿದರು. ಆದರೆ ದ್ವಿತೀಯಾರ್ಧದಲ್ಲಿ ದೇವಾಂಕ್‌ ಪ್ರಬಲ ದಾಳಿ ನಡೆಸಿದ ಪರಿಣಾಮ ಪಟ್ನಾ ತಂಡ ಮೇಲುಗೈ ಸಾಧಿಸಿತು.

ಟೂರ್ನಿಗೆ ನವೆಂಬರ್‌ 1ರಂದು ವಿರಾಮ ದಿನವಾಗಿದ್ದು, 2ರಿಂದ ಪಂದ್ಯಗಳು ಪುನರಾರಂಭವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.