ಬೆಂಗಳೂರು: ಅಂಕಣದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಪವನ್ ಶೆರಾವತ್ ಅಮೋಘ ದಾಳಿಗಳ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಭಾನುವಾರ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ರೋಚಕ ಜಯ ಸಾಧಿಸಿತು.
ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 36–35ರಿಂದ ಬೆಂಗಾಲ್ ಬಳಗವನ್ನು ಮಣಿಸಿತು. 15 ಅಂಕಗಳನ್ನು ಗಳಿಸಿದ ನಾಯಕ ಪವನ್ ತಂಡದ ಗೆಲುವಿನ ರೂವಾರಿಯಾದರು. ಮಣಿಂದರ್ ಸಿಂಗ್ 17 ಅಂಕ ಗಳಿಸಿ ಬೆಂಗಾಲಕ್ಕೆ ಬಲ ತುಂಬಿದರು. ಆದರೆ ತಂಡವು ಗೆಲುವಿನ ಅಂಚಿನಲ್ಲಿ ಎಡವಿತು.
ಆದರೆ ಪಂದ್ಯದುದ್ದಕ್ಕೂ ಪವನ್ ಮತ್ತು ಮಣಿಂದರ್ ನಡುವಿನ ಜಿದ್ದಾಜಿದ್ದಿಯು ಮೈನವಿರೇಳಿಸಿತು. ಬೆಂಗಳೂರು ತಂಡದ ಚಂದ್ರನ್ ರಂಜೀತ್ ಕೂಡ ಮಿಂಚಿನ ದಾಳಿ ನಡೆಸಿದರು. ಆರು ಅಂಕ ಗಳಿಸಿದರು.
ಬೆಂಗಾಲ್ ತಂಡದಲ್ಲಿ ಆಲ್‌ರೌಂಡರ್ ಮೊಹಮ್ಮದ್ ನಬಿಭಕ್ಷ್ (8 ಪಾಯಿಂಟ್) ಕೂಡ ಅಮೋಘ ಆಟವಾಡಿದರು. ಆದರೆ, ತಂಡವು ಕೇವಲ ಒಂದು ಅಂಕ ಅಂತರದಿಂದ ಸೋತಿತು. ಬೆಂಗಳೂರು ತಂಡಕ್ಕೆ ಟೂರ್ನಿಯಲ್ಲಿ ಇದು ಎರಡನೇ ಜಯವಾಗಿದೆ.
ರೋಚಕ ಟೈ: ಗುಜರಾತ್ ಜೈಂಟ್ಸ್ ಮತ್ತು ದಬಂಗ್ ಡೆಲ್ಲಿ ನಡುವಣ ನಡೆದ ಇನ್ನೊಂದು ಪಂದ್ಯವು 24–24ರಿಂದ ರೋಚಕ ಟೈನಲ್ಲಿ ಅಂತ್ಯವಾಯಿತು. ಡೆಲ್ಲಿ ತಂಡದ ನವೀನಕುಮಾರ್ (11 ಪಾಯಿಂಟ್ ) ಮತ್ತು ಗುಜರಾತ್ ತಂಡದ ರಾಕೇಶ್ ನರ್ವಾಲ್ (9 ಪಾಯಿಂಟ್ಸ್) ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ಉಭಯ ತಂಡಗಳು ಸೋಲಿನಿಂದ ತಪ್ಪಿಸಿಕೊಂಡವು. ಗುಜರಾತ್ ತಂಡದ ಡಿಫೆಂಡರ್ ಸುನೀಲ್ ಕುಮಾರ್ ಕೂಡ ಮಿಂಚಿದರು ಅವರು ನಾಲ್ಕು ಅಂಕಗಳ ಕಾಣಿಕೆಯನ್ನು ತಂಡಕ್ಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.