ADVERTISEMENT

ಟ್ರ್ಯಾಕ್-ಫೀಲ್ಡ್ ಹಾದಿಯಲ್ಲಿ ಶುಲ್ಕದ ‘ಹರ್ಡಲ್’

ರಾಜ್ಯ ಕೂಟದಲ್ಲಿ ಪಾಲ್ಗೊಳ್ಳಲು ಹಣ ಕೊಡಬೇಕೆಂಬ ಆದೇಶ; ಆಕ್ರೋಶ

ವಿಕ್ರಂ ಕಾಂತಿಕೆರೆ
Published 6 ಆಗಸ್ಟ್ 2022, 21:17 IST
Last Updated 6 ಆಗಸ್ಟ್ 2022, 21:17 IST
ಕಂಠೀರವ ಕ್ರೀಡಾಂಗಣ
ಕಂಠೀರವ ಕ್ರೀಡಾಂಗಣ   

ಮಂಗಳೂರು: ರಾಜ್ಯ ಅಥ್ಲೆಟಿಕ್ ಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಪ್ರವೇಶ ಶುಲ್ಕ ಭರಿಸುವಂತೆ ರಾಜ್ಯ ಅಥ್ಲೆಟಿಕ್ ಸಂಸ್ಥೆ (ಕೆಎಎ) ಸೂಚಿಸಿರುವುದರಿಂದ ಅಥ್ಲೀಟ್‍ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸಂಸ್ಥೆಯ ಆದೇಶ ಜಿಲ್ಲಾ ಸಂಸ್ಥೆಗಳ ಪದಾಧಿಕಾರಿಗಳಿಗೆ ನುಂಗುವುದಕ್ಕೂ ಉಗುಳುವುದಕ್ಕೂ ಆಗದ ತುತ್ತಾಗಿ ಪರಿಣಮಿಸಿದೆ. ಕೆಲವು ಜಿಲ್ಲಾ ಸಂಸ್ಥೆಗಳು ಕ್ರೀಡಾಕೂಟವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಸಹಯೋಗದಲ್ಲಿ ಕೆಎಎ ಆಯೋಜಿಸಿರುವ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‍ಷಿಪ್ ಇದೇ 26ರಿಂದ 28ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಂಬರುವ ದಕ್ಷಿಣ ವಲಯ ಚಾಂಪಿಯನ್‍ಷಿಪ್, ಯೂತ್ ಚಾಂಪಿಯನ್‍ಷಿಪ್, 23 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‍ಷಿಪ್ ಮತ್ತು ಸೀನಿಯರ್ ವಿಭಾಗದ ಮುಕ್ತ ಚಾಂಪಿಯನ್‍ಷಿಪ್‍ಗಳಿಗೆ ಆಯ್ಕೆಯೂ ಈ ಕೂಟದಲ್ಲಿ ನಡೆಯಲಿದೆ.

ಆಯ್ಕೆ ಟ್ರಯಲ್ಸ್ ಕೂಡ ಆಗಿರುವುದರಿಂದ ಅಥ್ಲೀಟ್‍ಗಳು ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಕೆಎಎ ಕಳುಹಿಸಿರುವ ಆದೇಶ ಪ್ರತಿಯಲ್ಲಿ ಜೂನಿಯರ್ ವಿಭಾಗಕ್ಕೆ ₹ 200 ಮತ್ತು ಸೀನಿಯರ್ ವಿಭಾಗಕ್ಕೆ ₹ 600 ಪ್ರವೇಶ ಶುಲ್ಕ ನಿಗದಿ ಮಾಡಿರುವುದು ಅಥ್ಲೀಟ್‍ಗಳಿಗೂ ಜಿಲ್ಲಾ ಸಂಸ್ಥೆಗಳಿಗೂ ನೊಂದಾಯಿತ ಕ್ಲಬ್‍ಗಳಿಗೂ ಆಘಾತ ನೀಡಿದೆ.

ADVERTISEMENT

ಏಜೆನ್ಸಿಗಾಗಿ ಕ್ರೀಡಾಪಟುಗಳಿಗೆ ಬರೆ?

ಮೇ 28 ಮತ್ತು 29ರಂದು ಚಂಡೀಗಢದಲ್ಲಿ ನಡೆದ ಭಾರತ ಅಥ್ಲೆಟಿಕ್ ಫೆಡರೇಷನ್‍ನ (ಎಎಫ್‍ಐ) ಸಾಮಾನ್ಯ ಸಭೆಯಲ್ಲಿ ಫೆಡರೇಷನ್ ಅನ್ನು ಡಿಜಿಟಲೀಕರಣ ಮಾಡುವ ಕಾರ್ಯವನ್ನು ಸ್ಪೋರ್ಟಿಂಗ್ ಇಂಡಿಯಾ ಕಂಪನಿಗೆ ಗುತ್ತಿಗೆ ನೀಡಲು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸಂಸ್ಥೆಗಳಿಂದ ಬರುವ ಹಣದಲ್ಲಿ ಭರಿಸಲು ತೀರ್ಮಾನಿಸಲಾಗಿತ್ತು. ಕ್ರೀಡಾಕೂಟಗಳಲ್ಲಿ ಸಂಗ್ರಹವಾಗುವ ಪ್ರವೇಶ ಶುಲ್ಕದ ಪೈಕಿ ಶೇಕಡಾ 6ರಷ್ಟನ್ನು ಏಜೆನ್ಸಿಗೆ ನೀಡಲು ಸಭೆಯಲ್ಲಿ ನಿರ್ಧರಿಸಿರುವುದನ್ನು ರಾಜ್ಯ ಸಂಸ್ಥೆಗಳಿಗೆಎಎಫ್‍ಐ ಲಿಖಿತ ರೂಪದಲ್ಲಿ ಕಳುಹಿಸಿದೆ. ಆದರೆ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶುಲ್ಕ ಪಡೆಯದೇ ಅಥ್ಲೆಟಿಕ್‌ ಕೂಟ ಆಯೋಜಿಸಲು ನಿರ್ಧರಿಸಲಾಗಿದೆ.

‘ಎಎಫ್‌ಐ ಸೂಚನೆಯಂತೆ ಶುಲ್ಕ ಪಡೆಯುತ್ತಿದ್ದೇವೆ. ಕ್ರೀಡಾಕೂಟ ಆಯೋಜಿಸಲು ಸರ್ಕಾರದಿಂದ ಹೆಚ್ಚು ಅನುದಾನವೇನೂ ಸಿಗುವುದಿಲ್ಲ. ಕೊಡುವ ಒಂದಿಷ್ಟು ಹಣ ಬಿಡುಗಡೆಯಾಗಬೇಕಾದರೆ ಅನೇಕ ಅಡೆತಡೆಗಳಿವೆ. ಹೀಗಿರುವಾಗ ಪ್ರವೇಶ ಶುಲ್ಕ ಪಡೆಯದೇ ಕ್ರೀಡಾಕೂಟ ಆಯೋಜಿಸುವುದು ಕಷ್ಟ’ ಎಂದು ಕೆಎಎ ಗೌರವ ಕಾರ್ಯದರ್ಶಿ ಎ. ರಾಜವೇಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಸ್ಪರ್ಧೆಗೂ ಹಣ ಸಂದಾಯ ಮಾಡಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದರಿಂದ ಹಣ ಪಾವತಿಸದೆ ಪ್ರವೇಶ ಪತ್ರ ಸಿಗುವುದಿಲ್ಲ. ದನ ಕಾಯುವವರ, ಹೊಲದಲ್ಲಿ ಕೆಲಸ ಮಾಡುವವರ ಮತ್ತು ಬಳೆ ಮಾರುವವರ ಮಕ್ಕಳು ನಮ್ಮಲ್ಲಿ ಅಥ್ಲೆಟಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಅವರು ಶುಲ್ಕ ಕೊಟ್ಟು ಬೆಂಗಳೂರಿನಲ್ಲಿ ವಸತಿ–ಊಟದ ವ್ಯವಸ್ಥೆ ಮಾಡಿಕೊಂಡು ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಎಎಫ್‌ಐ ಅಧ್ಯಕ್ಷ ಆದಿಲೆ ಸುಮರಿವಾಲಾ ಅವರಿಗೆ ದೂರು ನೀಡಿದ್ದು ಅವರು ಪೂರಕವಾಗಿ ಸ್ಪಂದಿಸಿದ್ದಾರೆ’ ಎಂದು ಹಾವೇರಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ ಹಾಲಪ್ಪನವರ ತಿಳಿಸಿದರು.

‘ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಹೋಗಿ ಬರುವುದಕ್ಕೇ ತುಂಬ ವೆಚ್ಚ ಆಗುತ್ತದೆ. ಇನ್ನು, ಶುಲ್ಕ ಕೊಟ್ಟು ಊಟ ವಸತಿಗೂ ವ್ಯವಸ್ಥೆ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವುದು ಕಷ್ಟ’ ಎಂದು ಬಾಗಲಕೋಟೆ ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಷ್ಮಣ ಯಲಗಣ್ಣವರ ಹೇಳಿದರು.

ಕ್ರೀಡೆ ಬೆಳೆಯುವುದು ಹೇಗೆ?

ಕ್ರೀಡೆಯ ಬೆಳವಣಿಗೆಗಾಗಿ ಕೋಟ್ಯಂತರ ಮೊತ್ತ ವ್ಯಯಿಸಿ ಖೇಲೊ ಇಂಡಿಯಾದಂಥ ಕ್ರೀಡಾಕೂಟವನ್ನು ಆಯೀಜಿಸಲು ಮುಂದೆ ಬಂದಿರುವ ಕರ್ನಾಟಕದಲ್ಲಿ ರಾಜ್ಯ ಅಥ್ಲೆಟಿಕ್ ಕೂಟ ಸಂಘಟಿಸಲು ಅಥ್ಲೀಟ್‍ಗಳಿಂದ ಹಣ ಪಡೆಯುವ ಪರಿಸ್ಥಿತಿ ಬಂದಿರುವುದು ಬೇಸರದ ವಿಷಯ. ಹಣ ಕೊಟ್ಟು ಬಡ ಮಕ್ಕಳು ಕ್ರೀಡಾಕೂಟದಲ್ಲಿಪಾಲ್ಗೊಳ್ಳಲು ಸಾಧ್ಯವೇ ಎಂದುಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕ್ರೀಡಾ ಪ್ರೇಮಿ ಮೋಹನ ಆಳ್ವ ಅವರು ಪ್ರಶ್ನಿಸಿದರು.

ವಸತಿ ಮತ್ತು ಊಟದ ವ್ಯವಸ್ಥೆಯನ್ನು ಆಯೋಜಕರೇ ಮಾಡುವುದು ವಾಡಿಕೆ. ಆದರೆ ಬೆಂಗಳೂರಿನಲ್ಲಿ ನಡೆಯುವ ಕೂಟದಲ್ಲಿ ಈ ಸೌಲಭ್ಯವೂ ಇಲ್ಲ. ಹಿಂದೆಲ್ಲ ಕಂಠೀರವ ಕ್ರೀಡಾಂಗಣದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಈ ಬಾರಿ ಅದೂ ಇಲ್ಲ. ಬೆಂಗಳೂರಿನಂಥ ಮಹಾನಗರದಲ್ಲಿ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ ಎಂದು ಅವರು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.