ADVERTISEMENT

‘ಪಿಬಿಎಲ್‌’ ಹೊಸತನದ ಹಾದಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:45 IST
Last Updated 23 ಡಿಸೆಂಬರ್ 2018, 19:45 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಭಾರತದ ಬ್ಯಾಡ್ಮಿಂಟನ್‌ನಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಯಶಸ್ಸಿನಿಂದ ಪ್ರೇರಣೆ ಪಡೆದು ಶುರುವಾದ ಈ ಲೀಗ್‌, ಭಾರತದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸಲು ನೆರವಾಗಿದೆ.

ದೇಶ, ವಿದೇಶದ ಸ್ಪರ್ಧಿಗಳ ಪಾಲಿಗೆ ಪಿಬಿಎಲ್‌ ‘ಚಿನ್ನದ ಗಣಿ’ ಇದ್ದ ಹಾಗೆ. ಇಲ್ಲಿ ಹಣದ ಹೊಳೆ ಹರಿಯುತ್ತದೆ. ವರ್ಷಪೂರ್ತಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿದರೆ ಸಿಗುವ ಹಣಕ್ಕಿಂತಲೂ ದುಪ್ಪಟ್ಟ ಮೊತ್ತ ಲೀಗ್‌ನಲ್ಲಿ ಆಡುವ ಕ್ರೀಡಾಪಟುಗಳ ಖಾತೆಗೆ ಸೇರುತ್ತದೆ.

ಸೈನಾ ನೆಹ್ವಾಲ್

ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌, ಕ್ಯಾರೋಲಿನ್‌ ಮರಿನ್‌ ಅವರಂತಹ ತಾರೆಯರನ್ನು ಫ್ರಾಂಚೈಸ್‌ಗಳು ಈ ಬಾರಿಯ ಹರಾಜಿನಲ್ಲಿ ತಲಾ ₹ 80 ಲಕ್ಷ ನೀಡಿ ತಮ್ಮತ್ತ ಸೆಳೆದುಕೊಂಡಿರುವುದು ಇದಕ್ಕೊಂದು ನಿದರ್ಶನ.

ADVERTISEMENT

ಹೊಸತನದ ಕಲಿಕೆಗೆ ಅವಕಾಶ

ಕ್ಯಾರೋಲಿನ್‌ ಮರಿನ್‌, ವಿಕ್ಟರ್‌ ಆ್ಯಕ್ಸೆಲ್‌ಸನ್‌, ಸನ್‌ ವಾನ್‌ ಹೊ, ಬಿಯೆವೆನ್‌ ಜಾಂಗ್, ಟಾಮಿ ಸುಗಿಯಾರ್ಟೊ ಅವರಂತಹ ವಿಶ್ವ ಶ್ರೇಷ್ಠ ಸ್ಪರ್ಧಿಗಳು ಪಿಬಿಎಲ್‌ನಲ್ಲಿ ಭಾಗವಹಿಸುತ್ತಾರೆ. ಅವರ ಜೊತೆ ಬೆರೆಯುವ ಅವಕಾಶ ಭಾರತದ ಸ್ಪರ್ಧಿಗಳಿಗೆ ಸಿಗುತ್ತದೆ.

ಕಿದಂಬಿ ಶ್ರೀಕಾಂತ್‌

ಜೊತೆಗೆ ಅವರ ಅಭ್ಯಾಸ ಕ್ರಮ, ಪಂದ್ಯಕ್ಕೂ ಮುನ್ನ ಸಜ್ಜಾಗುವ ರೀತಿ, ಹೆಣೆಯುವ ಯೋಜನೆ, ಸಂದಿಗ್ಧ ಸನ್ನಿವೇಶಗಳಲ್ಲಿ ಒತ್ತಡವನ್ನು ಮೀರಿ ನಿಲ್ಲುವ ಕಲೆ, ಆಹಾರ ಕ್ರಮ, ಫಿಟ್‌ನೆಸ್‌ ಕಾಪಾಡಿಕೊಳ್ಳಲು ಮಾಡುವ ಕಸರತ್ತು ಹೀಗೆ ಹಲವು ವಿಷಯಗಳನ್ನು ಹತ್ತಿರದಿಂದ ನೋಡಿ ಕಲಿಯುವ ಜೊತೆಗೆ ಅವುಗಳನ್ನು ಮೈಗೂಡಿಸಿಕೊಳ್ಳಲೂ ಭಾರತದವರಿಗೆ ಈ ಲೀಗ್‌ ಸಹಾಯಕವಾಗಿದೆ.

ಹೊಸ ಪೀಳಿಗೆಯ ಉಗಮ

ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಶ್ರೀಕಾಂತ್‌, ಪರುಪಳ್ಳಿ ಕಶ್ಯಪ್‌ ಅವರಂತಹ ಅನುಭವಿಗಳು ತೆರೆಗೆ ಸರಿದ ನಂತರ ಅವರ ಅನುಪಸ್ಥಿತಿ ಕಾಡಬಾರದು ಎಂಬ ಉದ್ದೇಶದಿಂದ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಜೂನಿಯರ್‌ ಆಟಗಾರರಿಗೂ ಪಿಬಿಎಲ್‌ನಲ್ಲಿ ಆಡುವ ಅವಕಾಶ ಕಲ್ಪಿಸಿದೆ.

ಹೀಗಾಗಿಯೇ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ, ಲಕ್ಷ್ಯ ಸೇನ್‌, ಎಂ.ಆರ್‌.ಅರ್ಜುನ್‌, ಶ್ರಿಯಾಂಸಿ ಪರದೇಶಿ, ರಾಹುಲ್‌ ಯಾದವ್‌, ಮಿಥುನ್ ಮಂಜುನಾಥ್‌, ಸಂಜನಾ ಸಂತೋಷ್‌, ಚಿರಾಗ್‌ ಶೆಟ್ಟಿ ಅವರಂತಹ ಪ್ರತಿಭೆಗಳು ವಿವಿಧ ತಂಡಗಳಲ್ಲಿ ಸ್ಥಾನ ಗಳಿಸಿದ್ದಾರೆ. ದೇಶ, ವಿದೇಶಗಳ ಪ್ರಮುಖ ಆಟಗಾರರು ನೀಡುವ ಅಮೂಲ್ಯ ಸಲಹೆಗಳಿಂದ ಇವರ ಆಟದ ಗುಣಮಟ್ಟ ಹೆಚ್ಚುತ್ತಿದೆ. ಜೂನಿಯರ್‌ ವಿಭಾಗದ ಸ್ಪರ್ಧೆಗಳಲ್ಲಿ ನಮ್ಮವರು ಚೀನಾ, ಜಪಾನ್‌, ಇಂಡೊನೇಷ್ಯಾ, ಅಮೆರಿಕ ಮತ್ತು ಸ್ಪೇನ್‌ನ ಬಲಿಷ್ಠ ಸ್ಪರ್ಧಿಗಳ ಸವಾಲು ಮೀರಿ ನಿಂತು ಪ್ರಶಸ್ತಿಗಳನ್ನು ಜಯಿಸುತ್ತಿರುವುದು ಇದಕ್ಕೆ ಸಾಕ್ಷಿಯಂತಿದೆ.

ಹೆಚ್ಚಿದ ಅಭಿವೃದ್ಧಿಯ ವೇಗ

ಪಿಬಿಎಲ್‌ ಶುರುವಾದ ನಂತರ ಭಾರತದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯ ಅಭಿವೃದ್ಧಿಗೆ ವೇಗ ಸಿಕ್ಕಿದೆ. ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಲಖನೌ, ನವದೆಹಲಿ ಮತ್ತು ಹೈದರಾಬಾದ್‌ನಂತೆ ಇತರೆಡೆಗೂ ಈ ಕ್ರೀಡೆಯ ಕಂಪು ಪಸರಿಸುವ ಕೆಲಸ ನಡೆಯುತ್ತಿದೆ. ಗುವಾಹಟಿ, ಚೆನ್ನೈ, ಮುಂಬೈ ಮತ್ತು ಪುಣೆಯಲ್ಲಿ ಪಂದ್ಯಗಳನ್ನು ಆಯೋಜಿಸಿ ಅಲ್ಲಿನ ಜನರಲ್ಲಿ ಬ್ಯಾಡ್ಮಿಂಟನ್‌ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವೂ ಈ ಲೀಗ್‌ನಿಂದ ಆಗುತ್ತಿದೆ.

‘ಪ್ರಮುಖ ನಗರಗಳಲ್ಲಿ ಪಂದ್ಯಗಳು ನಡೆದಾಗ ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬಂದು ನೋಡುತ್ತಾರೆ. ಜೊತೆಗೆ ಟಿ.ವಿಯಲ್ಲೂ ಸಾಕಷ್ಟು ಮಂದಿ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಪ್ರಮುಖ ಕ್ರೀಡಾಪಟುಗಳ ಆಟವನ್ನು ಹತ್ತಿರದಿಂದ ನೋಡಿದಾಗ ಮಕ್ಕಳು ಪುಳಕಿತರಾಗುತ್ತಾರೆ. ಅವರಲ್ಲಿ ಬ್ಯಾಡ್ಮಿಂಟನ್‌ ಕುರಿತ ಆಸಕ್ತಿ ಚಿಗುರೊಡೆಯುತ್ತದೆ. ತಮ್ಮ ಮಕ್ಕಳನ್ನು ಸೈನಾ, ಸಿಂಧು ಅವರಂತೆ ಬ್ಯಾಡ್ಮಿಂಟನ್‌ ತಾರೆಗಳನ್ನಾಗಿ ರೂಪಿಸಬೇಕೆಂಬ ಆಸೆ ಪೋಷಕರಲ್ಲೂ ಮನೆಮಾಡುತ್ತದೆ’ ಎಂದು ಭಾರತ ಬ್ಯಾಡ್ಮಿಂಟನ್‌ ತಂಡದ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಅವರು ಇತ್ತೀಚೆಗೆ ವೆಬ್‌ಸೈಟ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದನ್ನು ಸ್ಮರಿಸಬಹುದು.

ತಂಡಗಳು

ಅವಧ್‌ ವಾರಿಯರ್ಸ್‌

ಗುರು ಸಾಯಿದತ್‌, ಸನ್‌ ವಾನ್‌ ಹೊ, ಲೀ ಡಾಂಗ್‌ ಕೆವುನ್‌, ಮಥಿಯಾಸ್‌ ಕ್ರಿಸ್ಟಿಯನ್‌ಸನ್‌, ಬಿಯೆವೆನ್‌ ಜಾಂಗ್‌, ಲೀ ಯಾಂಗ್‌, ಎಂ.ಆರ್‌.ಅರ್ಜುನ್‌, ರಾಶಿಕಾ ರಾಜೆ, ಅಶ್ವಿನಿ‍ ‍ಪೊನ್ನಪ್ಪ, ಸನ್ಯೋಗಿತಾ ಘೋರ್ಪಡೆ.

ಮುಂಬೈ ರ‍್ಯಾಕೆಟ್ಸ್‌

ಸಮೀರ್‌ ವರ್ಮಾ, ಆ್ಯಂಡರ್ಸ್‌ ಆ್ಯಂಟೋನ್‌ಸನ್‌, ಪ್ರತುಲ್‌ ಜೋಷಿ, ಶ್ರಿಯಾಂಸಿ ಪರದೇಶಿ, ಅನುರಾ ಪ್ರಭುದೇಸಾಯಿ, ಮನು ಅತ್ರಿ, ಲೀ ಯಾಂಗ್‌ ಡೇ, ಕಿಮ್‌ ಜಿ ಜಂಗ್‌, ಪಿಯಾ ಜೆಬಾದಿಹಾ, ಕುಹೂ ಗಾರ್ಗ್‌.

ಡೆಲ್ಲಿ ಡ್ಯಾಷರ್ಸ್‌

ಎಚ್‌.ಎಸ್‌.ಪ್ರಣಯ್‌, ಚಿರಾಗ್‌ ಸೇನ್‌, ಟಾಮಿ ಸುಗಿಯಾರ್ಟೊ, ಎವಜೆನಿಯಾ ಕೊಸೆತ್ಸ್‌ಕಯಾ, ಚಯ್‌ ಬಿಯಾವೊ, ಮನೀಪೊಂಗ್‌ ಜೊಂಗ್‌ಜಿತ್‌, ವಾಂಗ್‌ ಸಿಜೀ, ವಿಘ್ನೇಶ್‌ ದೇವಳ್ಕರ್‌, ಲೀ ಚಿಯಾ ಹ್ಸಿನ್‌, ವಿ.ಹರಿಕಾ.

ಹೈದರಾಬಾದ್‌ ಹಂಟರ್ಸ್‌

ಪಿ.ವಿ.ಸಿಂಧು, ಲೀ ಹ್ಯುನ್‌ ಇಲ್‌, ರಾಹುಲ್‌ ಯಾದವ್‌, ಮಾರ್ಕ್‌ ಕ್ಯಾಲ್‌ಜೋವು, ಸಾಯಿ ಉತ್ತೇಜಿತ ರಾವ್‌, ಕಿಮ್‌ ಸಾ ರ‍್ಯಾಂಗ್‌, ಅರುಣ್‌ ಜಾರ್ಜ್‌, ಬೊಡಿನ್‌ ಇಸಾರ, ಎವೊಮ್‌ ಹೈ ವೊನ್‌, ಜಕ್ಕಂಪುಡಿ ಮೇಘನಾ,

ಬೆಂಗಳೂರು ರ‍್ಯಾಪ್ಟರ್ಸ್‌

ಕಿದಂಬಿ ಶ್ರೀಕಾಂತ್‌, ಬಿ.ಸಾಯಿ ಪ್ರಣೀತ್‌, ಮಿಥುನ್‌ ಮಂಜುನಾಥ್‌, ನಿಗ್ಯುನ್‌ ತಿಯೆನ್‌ ಮಿನ್ಹ್‌, ವು ತಿಯಾ ರ‍್ಯಾಂಗ್‌, ಹೆಂಡ್ರಾ ಸೆತಿಯವಾನ್‌, ಮಾರ್ಕಸ್‌ ಎಲ್ಲಿಸ್‌, ಮೊಹಮ್ಮದ್‌ ಎಹ್ಸಾನ್‌, ಲೌರೆನ್‌ ಸ್ಮಿತ್‌, ಸಂಜನಾ ಸಂತೋಷ್‌.

ನಾರ್ತ್‌ ಈಸ್ಟರ್ನ್‌ ವಾರಿಯರ್ಸ್‌

ಸೈನಾ ನೆಹ್ವಾಲ್‌, ಟಿ.ಸಯೆನ್ಸೊಮ್‌ಬೂನ್‌ಸಕ್‌, ತಿಯಾನ್‌ ಹೌವಿ, ಎ.ಎಸ್‌.ಸಿರಿಲ್‌ ವರ್ಮಾ, ರಿತುಪರ್ಣ ದಾಸ್‌, ಯೋ ಯೆಯೋನ್‌ ಸೆಯೊಂಗ್‌, ಲಿಯಾವೊ ಮಿನ್‌ ಚುನ್‌, ಧ್ರುವ ಕಪಿಲಾ, ಕಿನ್‌ ಹಾ ನಾ, ಕೆ.ಮನೀಷಾ.

ಅಹಮದಾಬಾದ್‌ ಸ್ಮ್ಯಾಷ್‌ ಮಾಸ್ಟರ್ಸ್‌

ಸೌರಭ್‌ ವರ್ಮಾ, ವಿಕ್ಟರ್‌ ಆ್ಯಕ್ಸೆಲ್‌ಸನ್‌, ಡರೆನ್‌ ಲೀವ್‌, ಕಿರ್ಸ್ಟಿ ಗಿಲ್‌ಮೌರ್‌, ವೈಷ್ಣವಿ ಭಾಲೆ, ಲೀ ರೆಜಿನಾಲ್ಡ್‌, ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ, ಕಿದಂಬಿ ನಂದಗೋಪಾಲ್‌, ಸಿಕ್ಕಿ ರೆಡ್ಡಿ, ಅನೌಷ್ಕಾ ಪಾರಿಖ್‌.

ಚೆನ್ನೈ ಸ್ಮ್ಯಾಷರ್ಸ್‌

‍ಪರುಪಳ್ಳಿ ಕಶ್ಯಪ್‌, ಚೊಂಗ್‌ ವೀ ಫೆಂಗ್‌, ರಾಜೀವ್‌ ಔಸೆಫ್‌, ಸಂಗ್‌ ಜಿ ಹ್ಯೂನ್‌, ಸೈಲಿ ರಾಣೆ, ಒರ್‌ ಚಿಂಗ್‌ ಚುಂಗ್‌, ಕ್ರಿಸ್‌ ಅಡ್‌ಕಾಕ್‌, ಬಿ.ಸುಮೀತ್‌ ರೆಡ್ಡಿ, ಗ್ಯಾಬ್ರಿಯಲ್‌ ಅಡ್‌ಕಾಕ್‌, ರಿತುಪರ್ಣ ಪಾಂಡ.

ಪುಣೆ 7 ಏಸರ್ಸ್‌

ಬ್ರೈಸ್‌ ಲೆವರ್‌ಡೆಜ್‌, ಲಕ್ಷ್ಯ ಸೇನ್‌, ಸೋನಿ ಡಿ ಕುಂಕೊರೊ, ಅಜಯ್‌ ಜಯರಾಮ್‌, ಕ್ಯಾರೋಲಿನಾ ಮರಿನ್‌, ಲೈನ್‌ ಜಾಯೆರ್ಸ್‌ಫೆಲ್ಡ್ತ್‌, ವ್ಲಾದಿಮಿರ್‌ ಇವಾನೊವ್‌, ಮಥಿಯಾಸ್‌ ಬೊಯೆ, ಚಿರಾಗ್‌ ಶೆಟ್ಟಿ, ಪ್ರಜಕ್ತಾ ಸಾವಂತ್‌.

***

ಇದುವರೆಗಿನ ಚಾಂಪಿಯನ್ನರು ಮತ್ತು ರನ್ನರ್ಸ್‌ ಅಪ್‌

ವರ್ಷ: 2013

ವಿಜೇತ ತಂಡ: ಹೈದರಾಬಾದ್‌ ಹಾಟ್‌ಶಾಟ್ಸ್‌

ರನ್ನರ್ಸ್‌ ಅಪ್‌: ಅವಧೆ ವಾರಿಯರ್ಸ್‌

ವರ್ಷ: 2016

ವಿಜೇತ ತಂಡ: ಡೆಲ್ಲಿ ಡ್ಯಾಷರ್ಸ್‌

ರನ್ನರ್ಸ್‌ ಅಪ್‌: ಮುಂಬೈ ರ‍್ಯಾಕೆಟ್ಸ್‌

ವರ್ಷ: 2017

ವಿಜೇತ ತಂಡ: ಚೆನ್ನೈ ಸ್ಮ್ಯಾಷರ್ಸ್‌

ರನ್ನರ್ಸ್‌ ಅಪ್‌: ಮುಂಬೈ ರ‍್ಯಾಕೆಟ್ಸ್‌.

ವರ್ಷ: 2017/2018

ವಿಜೇತ ತಂಡ: ಹೈದರಾಬಾದ್‌ ಹಂಟರ್ಸ್‌

ರನ್ನರ್ಸ್‌ ಅಪ್‌: ಬೆಂಗಳೂರು ಬ್ಲಾಸ್ಟರ್ಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.